ನಕಲಿ ದಾಖಲೆ ಸೃಷ್ಟಿಸಿ ಎಸ್ಸಿ, ಎಸ್ಟಿ ಜಾಗ ಮಾರಾಟ ಖಂಡನೆ

| Published : Jan 01 2025, 01:02 AM IST

ನಕಲಿ ದಾಖಲೆ ಸೃಷ್ಟಿಸಿ ಎಸ್ಸಿ, ಎಸ್ಟಿ ಜಾಗ ಮಾರಾಟ ಖಂಡನೆ
Share this Article
  • FB
  • TW
  • Linkdin
  • Email

ಸಾರಾಂಶ

ಎಚ್.ಆರ್.ಪಿ. ಜಾಗವೆಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮಂಜೂರಾಗಿದ್ದ ಸರ್ಕಾರಿ ಭೂಮಿಯನ್ನು ಆಲೂರು ತಾಲೂಕು ಅಧಿಕಾರಿಗಳು ಹಾಗೂ ಉದ್ದಿಮೆದಾರರು ಸೇರಿ ನಕಲಿ ದಾಖಲೆ ಸೃಷ್ಟಿಮಾಡಿ ಮಾರಾಟ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಭೂಮಿ ಉಳಿಸಿಕೊಡುವಂತೆ ಆಗ್ರಹಿಸಿ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ಸಂಘಟನೆಯಿಂದ ಮಂಗಳವಾರ ಡೀಸಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು

ಕನ್ನಡಪ್ರಭ ವಾರ್ತೆ ಹಾಸನ

ಎಚ್.ಆರ್.ಪಿ. ಜಾಗವೆಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮಂಜೂರಾಗಿದ್ದ ಸರ್ಕಾರಿ ಭೂಮಿಯನ್ನು ಆಲೂರು ತಾಲೂಕು ಅಧಿಕಾರಿಗಳು ಹಾಗೂ ಉದ್ದಿಮೆದಾರರು ಸೇರಿ ನಕಲಿ ದಾಖಲೆ ಸೃಷ್ಟಿಮಾಡಿ ಮಾರಾಟ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಭೂಮಿ ಉಳಿಸಿಕೊಡುವಂತೆ ಆಗ್ರಹಿಸಿ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ಸಂಘಟನೆಯಿಂದ ಮಂಗಳವಾರ ಡೀಸಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಎಚ್.ಎಸ್. ಪ್ರದೀಪ್ ಮಾತನಾಡಿ, ಅಲೂರು ತಾಲೂಕಿನ ಪಾಳ್ಯ ಹೋಬಳಿಯ ಬೂದನಹಳ್ಳಿ ಗ್ರಾಮದ ಸರ್ವೇ ನಂ: ೧೦ ರಲ್ಲಿ ೧೦೦ ಎಕರೆ ಸರ್ಕಾರಿ ಜಾಗವಿದ್ದು, ಇದರಲ್ಲಿ ೮೦ ಎಕರೆ ಜಮೀನನ್ನು ಹೇಮಾವತಿ ಮುಳುಗಡೆಯವರಿಗೆ ನೀಡಿದ್ದು, ಅದೇ ಸರ್ವೇ ನಂ. ೧೦ ರಲ್ಲಿ ಉಳಿದ ೨೦ ಎಕರೆ ಜಮೀನನ್ನು ಅದೇ ಗ್ರಾಮದ ೧೦ ಜನ ದಲಿತ ಕುಟುಂಬಕ್ಕೆ ಸರ್ಕಾರದಿಂದ ತಲಾ ೨ ಎಕರೆಯಂತೆ ೧೯೮೪-೮೫ ರಲ್ಲಿ ೧೦ ಕುಟುಂಬಕ್ಕೆ ಮಂಜೂರು ಮಾಡಿ ಸಾಗುವಳಿ ಚೀಟಿಯನ್ನು ಸಹ ಸಂಬಂಧಪಟ್ಟ ಅಧಿಕಾರಿಗಳು ನೀಡಿದ್ದಾರೆ ಎಂದರು. ಇದು ದರಖಾಸ್ತು ಜಮೀನಾಗಿದ್ದು, ಅವರವರ ಹೆಸರಿಗೆ ಖಾತೆ ದಾಖಲಾತಿಗಳು ಸಹ ಆಗಿದ್ದು, ಇಲ್ಲಿಯವರೆಗೂ ಕಂದಾಯವನ್ನು ಪಾವತಿ ಮಾಡಿದ್ದಾರೆ. ಮತ್ತು ಸದರಿ ಜಮೀನಿನ ಮೇಲೆ ಬ್ಯಾಂಕ್ ಮತ್ತು ಸೊಸೈಟಿ ಸಂಘ ಸಂಸ್ಥೆಗಳಲ್ಲಿ ಕೃಷಿ ಸಾಲಗಳನ್ನು ಎಲ್ಲರೂ ಸಹ ಪಡೆದುಕೊಂಡಿದ್ದಾರೆ ಎಂದರು.

೧೯೮೪-೮೫ ರಿಂದಲೂ ಸಾಗುವಳಿ ಮಾಡಿಕೊಂಡು ಸ್ವಾಧೀನಾನುಭವದಲ್ಲಿ ಇದ್ದುಕೊಂಡು ಈ ಜಮಿನಿನಿಂದಲೇ ಜೀವನವನ್ನು ನಡೆಸಿಕೊಂಡು ಬಂದಿದ್ದಾರೆ. ಸುಮಾರು ೨೫ ರಿಂದ ೩೦ ವರ್ಷಗಳು ಉಳುಮೆ ಮಾಡಿಕೊಂಡು ಅನುಭವದಲ್ಲಿ ಇರುವಾಗಲೇ ಚನ್ನರಾಯಪಟ್ಟಣದ ನಿವಾಸಿಯಾದ (ಆಶ್ವಿನಿ ಮೋಟಾರ್, ಹಾಸನ) ಪದ್ಮರಾಜ್ ಸ್ವಾಮಿ ಎಂಬುವವರು ೨೦ ಎಕರೆ ಜಮೀನನ್ನು ನಾವು ಹೇಮಾವತಿ ಮುಳುಗಡೆದಾರರಿಂದ ಕೊಂಡುಕೊಂಡಿದ್ದೇವೆ. ಈ ಜಾಗ ನಮಗೆ ಸೇರಿದ್ದು, ಎಂದು ಹೇಮಾವತಿ ಮುಳುಗಡೆಗೆ ಮೀಸಲಿರುವ ಜಾಗಕ್ಕೆ ಹೋಗದೆ ಮೂಲ ಮಂಜೂರಿದಾರರು ಬರದೆ ಸದರಿಯವರ ಮೂಲ ಮಂಜೂರಿ ದಾಖಲೆಗಳನ್ನು ನಾಶಪಡಿಸಿ ಈ ಜಾಗದಲ್ಲಿ ಸ.ರ್ವೇ ನಂ- ೫೭,೮೮,೫೯,೬೦,೬೧ ಎಂಬುದಾಗಿ ಈ ಜಾಗವನ್ನು ಅಧಿಕಾರಿಗಳ ಸಹಾಯದಿಂದ ಕೂತಲ್ಲಿಯೇ ದುರಸ್ತಿಯನ್ನು ಮಾಡಿಕೊಂಡಿದ್ದಲ್ಲದೇ ಜಾಗವನ್ನು ಬಿಡಿಸಿಕೊಳ್ಳಲು ಬಾಡಿಗೆ ರೌಡಿಗಳನ್ನು ಕರೆದುಕೊಂಡು ಬಂದು ಬೆದರಿಸುತ್ತಿದ್ದಾರೆ ಎಂದು ದೂರಿದರು.

ಜಮೀನನ್ನು ಉಳುಮೆ ಮಾಡಲು ಅಡ್ಡಿಪಡಿಸುತ್ತಿದ್ದರು. ಹಾಗೂ ಚಿಕ್ಕಯ್ಯ ಬಿನ್ ಜವರಪ್ಪನವರು ಸ್ವಾಧೀನದಲ್ಲಿ ಇದ್ದಂತಹ ಅವರ ಜಮೀನಿನಲ್ಲಿ ಶುಂಠಿ ಹಾಕುವಾಗ ಪದ್ಮರಾಜು ಹಾಗೂ ಅವರ ಕಡೆಯವರು ಬಂದು ಚಿಕ್ಕಯ್ಯ ಮತ್ತು ಅವರ ಮಗ ಸೋಮಶೇಖರ್ ಮತ್ತು ಹೆಂಡತಿ ಲಕ್ಷ್ಮಮ್ಮ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದರು. ಅವರ ಮೇಲೆ ಎಫ್.ಐ.ಆರ್. ದಾಖಲಾಗಿ ಅಟ್ರಾಸಿಟಿ ಕೇಸ್ ಕೂಡ ದಾಖಲಾಗಿರುತ್ತದೆ. ಇವರಿಗೆ ಹಣ, ಜನ, ರಾಜಕೀಯ ಬೆಂಬಲ ಇರುವುದಿಂದ ಹಲ್ಲೆ ನಡೆಸುತ್ತಿದ್ದಾರೆ. ತಾಲೂಕು ಕಚೇರಿಗಳಲ್ಲಿ ಮೂಲ ದಾಖಲಾತಿ ತೆಗೆದುಕೊಳ್ಳಲು ಅರ್ಜಿ ಸಲ್ಲಿಸಿದಾಗ ನಮಗೆ ಯಾವುದೇ ನಮ್ಮ ಮೂಲ ದಾಖಲಾತಿ ಕೊಟ್ಟಿಲ್ಲ. ಮೂಲ ದಾಖಲಾತಿಗಳು ಲಭ್ಯವಿಲ್ಲವೆಂಬುದಾಗಿ ಹಿಂಬರಹವನ್ನು ನೀಡಿ ದುಡ್ಡಿನ ಆಸೆಗೆ ಅಧಿಕಾರಿಗಳು ನಮ್ಮ ಮೂಲ ಕಡತ ನಾಶಪಡಿಸಿದ್ದಾರೆ ಎಂದರು.

ನಾವುಗಳು ಸ್ವಾಧೀನ ಬಿಡದ ಕಾರಣ ಪದ್ಮರಾಜ್ ಹಾಗು ಸ್ವಾಮಿ ರವರು ೨೦೧೮ ರಲ್ಲಿ ಕಲ್ಯಾಣ್ ಕುಮಾರ್ ಬಿನ್ ರಂಗೇಗೌಡ ಮತ್ತು ರಾಜಶೇಖರ್ ಪಿ.ಆರ್. ಬಿನ್ ರಂಗೇಗೌಡ ಅವರು ಹಣಬಲ, ರಾಜಕೀಯ ಬಲದಿಂದ ನಾವು ಈ ಜಮೀನನ್ನು ಬಿಡಿಸಿಕೊಳ್ಳುತ್ತೇವೆ ಎಂದು ಪದ್ಮರಾಜ್ ರವರಿಂದ ಜಮೀನನ್ನು ಖರೀದಿಸಿರುತ್ತಾರೆ. ತಾವುಗಳು ಮೇಲಿನ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಹಾಗೂ ಮೂಲ ದಾಖಲೆಗಳನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹೆಚ್.ಆರ್.ಪಿ. ಜಾಗವೆಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮಂಜೂರಾಗಿದ್ದ ಸರ್ಕಾರಿ ಭೂಮಿಯನ್ನು ಆಲೂರು ತಾಲ್ಲೂಕು ಸಂಭಂದಪಟ್ಟ ಅಧಿಕಾರಿಗಳು ಹಾಗೂ ಉದ್ಯಮಿದಾರರು ನಕಲಿ ದಾಖಲೆಗಳನ್ನು ಸೃಷ್ಟಿಮಾಡಿ ಮಾರಾಟ ಮಾಡಿರುವವರ ವಿರುದ್ಧ ಕ್ರಮ ಕಾನೂನು ಕ್ರಮ ಕೈಗೊಂಡು ಸಂತ್ರಸ್ಥರ ಭೂಮಿಯನ್ನು ಉಳಿಸಿಕೊಡಬೇಕೆಂದು ಒತ್ತಾಯಿಸಿದರು. ಭೀಮ್ ಆರ್ಮಿ ಜಿಲ್ಲಾ ಉಪಾಧ್ಯಕ್ಷ ನವೀನ್ ಸಾಲಗಾಮೆ, ತಾಲೂಕು ಅಧ್ಯಕ್ಷ ಡಿ.ಕೆ. ಹೇಮಂತ್, ಆಲೂರು ತಾಲೂಕು ಉಪಾಧ್ಯಕ್ಷ ಗಿರೀಶ್, ಕಾರ್ಯದರ್ಶಿ ರಘುಚಂದ್ರ, ಖಜಾಂಚಿ ಸಿದ್ದೇಶ್, ಗ್ರಾಮಸ್ಥರಾದ ಸಿದ್ದಯ್ಯ, ಚಿಕ್ಕಯ್ಯ, ಸಗನಯ್ಯ, ಚಂದ್ರಮ್ಮ, ಮಲ್ಲೇಶ್, ದ್ಯಾವಯ್ಯ, ದೊಡ್ಡಯ್ಯ ಉಪಸ್ಥಿತರಿದ್ದರು.