ಪಾಂಡವಪುರ ಪುರಸಭೆಯಲ್ಲಿನ ಭ್ರಷ್ಟಾಚಾರ, ಮುಖ್ಯಾಧಿಕಾರಿಗಳ ಸರ್ವಾಧಿಕಾರಿ ಧೋರಣೆ ಹಾಗೂ ಪಟ್ಟಣದಲ್ಲಿ ಇರುವ ಸಾವಿರಾರು ಬಡವರಿಗೆ ನಿವೇಶನ ಹಂಚುವಂತೆ ಆಗ್ರಹಿಸಿ ಮೇ 25ರಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪುರಸಭೆಯಲ್ಲಿನ ಭ್ರಷ್ಟಾಚಾರ, ಮುಖ್ಯಾಧಿಕಾರಿಗಳ ಸರ್ವಾಧಿಕಾರಿ ಧೋರಣೆ ಹಾಗೂ ಪಟ್ಟಣದಲ್ಲಿ ಇರುವ ಸಾವಿರಾರು ಬಡವರಿಗೆ ನಿವೇಶನ ಹಂಚುವಂತೆ ಆಗ್ರಹಿಸಿ ಮೇ 25ರಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪುರಸಭೆ ಮಾಜಿ ಸದಸ್ಯರಾದ ಎಂ.ಗಿರೀಶ್, ಆರ್.ಸೋಮಶೇಖರ್, ಹಾರೋಹಳ್ಳಿ ಕೃಷ್ಣ ತಿಳಿಸಿದರು.

ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಪುರಸಭೆ ಚುನಾವಣೆ ಹತ್ತಿರವಾಗುತ್ತಿದೆ ಎಂದು ಅವರ ಹಿಂಬಾಲಕರ ಮಾತು ಕೇಳಿಕೊಂಡು ಕೇವಲ ಹಾರೋಹಳ್ಳಿ ಬಳಿ ಇರುವ 170 ನಿವೇಶನಗಳನ್ನು ಹಂಚಿಕೆ ಮಾಡಲು ಮುಂದಾಗಿದ್ದಾರೆ. ಇದರಿಂದ ಪಟ್ಟಣದಲ್ಲಿ ಉಳಿದ ಸಾವಿರಾರು ಬಡವರಿಗೆ ಅನ್ಯಾಯವಾಗಲಿದೆ ಎಂದರು.

ಬಡವರಿಗೆ ನಿವೇಶನ ಹಂಚಿಕೆ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಕೇವಲ 170 ನಿವೇಶನ ಹಂಚುವುದಕ್ಕೆ ನಮ್ಮ ವಿರೋಧವಿದೆ. ಪಟ್ಟಣದಲ್ಲಿ ಸಾವಿರಾರು ಮಂದಿ ನಿವೇಶನ ವಂಚಿತ ಬಡವರಿದ್ದಾರೆ. ಇರುವ 170 ನಿವೇಶನದ ಜೊತೆಗೆ ಪಟ್ಟಣ ವ್ಯಾಪ್ತಿಯಲ್ಲಿ ಇರುವ ಸರ್ಕಾರಿ ಜಾಗವನ್ನು ಗುರುತಿಸಿ ಪಟ್ಟಣ ವ್ಯಾಪ್ತಿಯಲ್ಲಿ ಸಾವಿರಾರು ಮಂದಿ ಅರ್ಹ ಬಡವರಿಗೆ ನಿವೇಶನ ಹಂಚಿಕೆ ಮಾಡಬೇಕು ಎನ್ನುವುದು ನಮ್ಮ ಒತ್ತಾಯವಾಗಿದೆ ಎಂದರು.

ನಾವು ಪುರಸಭೆ ಸದಸ್ಯರಾಗಿದ್ದ ವೇಳೆ ಎಲ್ಲಾ ಸದಸ್ಯರು ಸಹ ಪಕ್ಷಾತೀತವಾಗಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಹೆಚ್ವುವರಿ ನಿವೇಶನ ಗುರುತಿಸಿ ಎಲ್ಲಾ ಬಡವರಿಗೂ ನಿವೇಶನ ಹಂಚಿಕೆ ಮಾಡಬೇಕು ಒತ್ತಾಯಿಸಿದ್ದವು. ಶಾಸಕರು ಸಹ ಮತ ವ್ಯಕ್ತಪಡಿಸಿದ್ದರು. ಈಗ ಅವರ ಹಿಂಬಾಲಕರ ಮಾತಿಗೆ ಕಟ್ಟುಬಿದ್ದು ನಿವೇಶನ ಹಂಚಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಶಾಸಕರಾಗಿದ್ದಾಗ ನಿವೇಶನ ಹಂಚಿಕೆ ಮಾಡಿ ಹಾರೋಹಳ್ಳಿ ಬಳಿ 270 ಸೈಟ್‌ಗಳನ್ನು ಬಾಕಿ ಉಳಿಸಿಕೊಂಡು ಇದರಲ್ಲಿ ಪೊಲೀಸರ ವಸತಿ ಗೃಹ ನಿರ್ಮಾಣಕ್ಕೆ 100 ನಿವೇಶನ, ಉಳಿದ 170 ನಿವೇಶನಗಳನ್ನು ಅಗ್ನಿಶಾಮಕ ದಳದ ಕಟ್ಟಡ ನಿರ್ಮಾಣಕ್ಕೆ ಭೂಮಿ ನೀಡಿರುವ ರೈತರಿಗೆ, ಜೊತೆಗೆ ಪಟ್ಟಣ ವ್ಯಾಪ್ತಿಯಲ್ಲಿ ರಸ್ತೆಗಳಿಗೆ ಜಮೀನು ನೀಡಿರುವ ಜನರಿಗೆ ನಿವೇಶನ ನೀಡಬೇಕಿದೆ. ಇವುಗಳೇ 30-40 ಸೈಟುಗಳು ಬೇಕಾಗುತ್ತವೆ. ಉಳಿಕೆ ನಿವೇಶನಕ್ಕಾಗಿ ಸದ್ಯ 700 ಅರ್ಜಿಗಳು ಬಂದಿವೆ ಎಂದರು.

ಇನ್ನೂ ನೂರಾರು ಮಂದಿ ಅರ್ಜಿಯನ್ನೇ ಸಲ್ಲಿಸಿಲ್ಲ. ಹಾರೋಹಳ್ಳಿ ನಿವಾಸಿಗಳು ಒಬ್ಬರು ಅರ್ಜಿ ಹಾಕಿಲ್ಲ. ಈ ಹಿಂದೆಯಿಂದಲೂ ನಿವೇಶನಕ್ಕೆ ಅರ್ಜಿಸಲ್ಲಿಸಿ ನಿವೇಶನ ನೀಡಿ ಹಿನ್ನೆಲೆಯಲ್ಲಿ ಬೇಸರಗೊಂಡ ಸಾಕಷ್ಟು ಮಂದಿ ಈ ಭಾರಿ ಅರ್ಜಿಯನ್ನೇ ಸಲ್ಲಿಸಿಲ್ಲ. ಹಿಂದಿನ ಶಾಸಕರಾದ ಸಿ.ಎಸ್.ಪುಟ್ಟರಾಜು ಅವರು ಕನಿಷ್ಠ 1 ಸಾವಿರ ಮಂದಿಗಾದರೂ ನಿವೇಶನ ಹಂಚಿಕೆ ಮಾಡಬೇಕೆಂದು 170 ಸೈಟುಗಳನ್ನು ಹಂಚಿಕೆ ಮಾಡದೆ, ಸರ್ಕಾರಿ ಜಾಗಗಳನ್ನು ಗುರುತಿಸುವ ಕೆಲಸ ಮಾಡಿದ್ದರು ಎಂದರು.

ಪಟ್ಟಣದ ಹೇಮಾವತಿ ಬಡಾವಣೆಯ ಹಿಂಭಾಗ ಸಾಕಷ್ಟು ಸರ್ಕಾರಿ ಜಾಗವಿದೆ ಅವುಗಳನ್ನು ಗುರುತಿಸಿ ನಿವೇಶನ ರಚಿಸಿ ಕನಿಷ್ಠ ಸಾವಿರ ಮಂದಿಗಾದರೂ ನಿವೇಶನ ಹಂಚಿಕೆ ಮಾಡಬೇಕು. ಅದನ್ನು ಬಿಟ್ಟು ಚುನಾವಣೆಗಾಗಿ ನಿವೇಶನ ಹಂಚಿಕೆ ಮಾಡಬೇಡಿ ಎಂದು ಒತ್ತಾಯಿಸಿದರು.

ಪುರಸಭೆಯಲ್ಲಿ ಆಡಳಿತ ಮಂಡಳಿ ಅವಧಿ ಮುಕ್ತಾಯವಾದ ಬಳಿಕ ಭ್ರಷ್ಟಾಚಾರ ತಾಂಡವಾಡುತ್ತಿದೆ. ಅಧಿಕಾರಿ ಸಿಬ್ಬಂದಿಯದ್ದೇ ದರ್ಬಾರ್ ಆಗಿದೆ. ಮುಖ್ಯಾಧಿಕಾರಿ ಸತೀಶ್ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಮಧ್ಯವರ್ತಿಗಳ ಮುಖಾಂತರ ಹೋದರಷ್ಟೆ ಸಾರ್ವಜನಿಕರ ಕೆಲಸವಾಗುತ್ತಿದೆ. ಸಾರ್ವಜನಿಕರ ತಮ್ಮ ಕೆಲಸಕ್ಕಾಗಿ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳುವ ಹಂತಕ್ಕೆ ಬಂದು ತಲುಪಿದೆ ಎಂದು ದೂರಿದರು.

ಇದನ್ನು ಮೇ 25ರಂದು ಪಟ್ಟಣದ ಪುರಸಭೆ ಎದುರು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಅಂದು ಪಟ್ಟಣದ ಐದು ದೀಪದ ವೃತ್ತದಲ್ಲಿ ಸೇರಿ ಬಳಿಕ ಪುರಸಭೆಯವರೆಗೂ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಪುರಸಭೆ ಮಾಜಿ ಸದಸ್ಯರಾದ ಆರ್.ಸೋಮಶೇಖರ್, ಎಂ.ಗಿರೀಶ್, ಹಾರೋಹಳ್ಳಿ ಕೃಷ್ಣ, ಚಂದ್ರು, ಶಿವಕುಮಾರ್, ಜ್ಯೋತಿ ಬಾಬು, ಸುನೀತ, ಯಶವಂತ್, ಟಿಎಪಿಸಿಎಂಎಸ್ ನಿರ್ದೇಶಕ ಪಿ.ಎಲ್.ಆದರ್ಶ, ಮುಖಂಡರಾದ ಸಗಾಯಂ, ಟೌನ್ ಚಂದ್ರು, ಉಮೇಶ್, ಆರುಮುಗಂ, ಪವನ್, ಗುರು ಇದ್ದರು.