ಯಕ್ಷಗಾನ ಕಲೆಯ ಕುರಿತ ಡಾ.ಬಿಳಿಮಲೆ ಹೇಳಿಕೆಗೆ ಖಂಡನೆ

| Published : Nov 23 2025, 02:30 AM IST

ಯಕ್ಷಗಾನ ಕಲೆಯ ಕುರಿತ ಡಾ.ಬಿಳಿಮಲೆ ಹೇಳಿಕೆಗೆ ಖಂಡನೆ
Share this Article
  • FB
  • TW
  • Linkdin
  • Email

ಸಾರಾಂಶ

ಯಕ್ಷಗಾನದ ಬಹುತೇಕ ಕಲಾವಿದರು ಸಲಿಂಗಕಾಮಿಗಳು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ನೀಡಿರುವ ಹೇಳಿಕೆ ಕೇವಲ ಕಲಾವಿದರಿಗೆ ಮಾತ್ರವಲ್ಲ ಕನ್ನಡದ ಶುದ್ದ ಕಲೆ ಯಕ್ಷಗಾನಕ್ಕೆ ಮಾಡಿದ ಅಪಚಾರ ಎಂದು ಯಕ್ಷ ಪ್ರಸಂಗಕರ್ತ ರಮೇಶ್ ಹೆಗಡೆ ಗುಂಡೂಮನೆ ಹೇಳಿದರು.

ಕನ್ನಡಪ್ರಭ ವಾರ್ತೆ ಸಾಗರ

ಯಕ್ಷಗಾನದ ಬಹುತೇಕ ಕಲಾವಿದರು ಸಲಿಂಗಕಾಮಿಗಳು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ನೀಡಿರುವ ಹೇಳಿಕೆ ಕೇವಲ ಕಲಾವಿದರಿಗೆ ಮಾತ್ರವಲ್ಲ ಕನ್ನಡದ ಶುದ್ದ ಕಲೆ ಯಕ್ಷಗಾನಕ್ಕೆ ಮಾಡಿದ ಅಪಚಾರ ಎಂದು ಯಕ್ಷ ಪ್ರಸಂಗಕರ್ತ ರಮೇಶ್ ಹೆಗಡೆ ಗುಂಡೂಮನೆ ಹೇಳಿದರು.

ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪುರುಷೋತ್ತಮ ಬಿಳಿಮಲೆ ಹೇಳಿಕೆ ಖಂಡಿಸಿ ತಕ್ಷಣ ಅವರನ್ನು ಪ್ರಾಧಿಕಾರದ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸುವುದಕ್ಕೆ ಆಗ್ರಹಿಸಿ ಯಕ್ಷಗಾನ ಅಭಿಮಾನಿಗಳ ಬಳಗದಿಂದ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿ, ಸಂಸ್ಕಾರಯುತ ಕಲೆ ಎಂದೇ ಗುರುತಿಸಿಕೊಂಡ ಯಕ್ಷಗಾನ ಕಲೆಯಲ್ಲಿ ಕಲಾವಿದರು ರಂಗದಲ್ಲಿ ಕೇವಲ ವ್ಯಕ್ತಿಯಾಗುವುದಕ್ಕಿಂತ ಪಾತ್ರದೊಳಗಿನ ಶಕ್ತಿಯಾಗಿ ಗುರುತಿಸಿಕೊಂಡಿರುವುದನ್ನು ಗಮನಿಸುತ್ತೇವೆ. ವಿಶೇಷವಾಗಿ ಆರಾಧನೆಯ ಕಲೆಯಾಗಿ ರೂಪುಗೊಂಡು ೬೦೦ ವರ್ಷಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಯಕ್ಷಗಾನದ ಕಲಾವಿದರನ್ನು ಅವಹೇಳನ ಮಾಡುವುದರಿಂದ ಕನ್ನಡದ ಸಂಸ್ಕೃತಿಗೆ ಅವಹೇಳನೆ ಮಾಡಿದಂತಾಗಿದೆ. ತಮ್ಮ ಸ್ಥಾನದಿಂದ ಯಾವ ಪ್ರಗತಿ ತೋರಿಸಲಾಗದ ಬಿಳಿಮಲೆ ವಿವಾದದ ಹೇಳಿಕೆಯಿಂದ ಪ್ರಚಾರ ಪಡೆಯುವ ಹುಚ್ಚಿಗೆ ಬಿದ್ದಿರುವುದು ನಿಜಕ್ಕೂ ವಿರ್ಯಾಯಸ ಎಂದರು.

ಯಕ್ಷಗಾನ ಕಲಾವಿದ ಶ್ರೀಧರ ಗೀಜಗಾರು ಮಾತನಾಡಿ, ಕನ್ನಡವನ್ನು ಆರಾಧಿಸುವ ಯಕ್ಷಗಾನ ಕಲಾವಿದರನ್ನು ಮಾನಸಿಕವಾಗಿ ಕುಗ್ಗಿಸುವ ಬಿಳಿಮಲೆಯವರ ಹೇಳಿಕೆ ಕ್ಷಮೆಗೆ ಅರ್ಹವಲ್ಲ ಬದಲಾಗಿ ಅವರನ್ನು ಸ್ಥಾನದಿಂದ ವಜಾಗೊಳಿಸಿ ಬಂಧಿಸಬೇಕು ಎಂದು ಹೇಳಿದರು.

ಹಿರಿಯ ಕಲಾವಿದ ಸಂಪ ಲಕ್ಷ್ಮೀನಾರಾಯಣ, ಯಕ್ಷಗಾನ ಅಭಿಮಾನಿ ಗಣೇಶ್ ಪ್ರಸಾದ್, ಪತ್ರಕರ್ತ ಹಿತಕರ್ ಜೈನ್ ಮಾತನಾಡಿದರು. ಹಿರಿಯ ಸಂಘಟಕರಾದ ಸತ್ಯನಾರಾಯಣ ಭಟ್ ಶುಂಠಿ, ವಿಜಯ ಹೆಗಡೆ, ಪ್ರಶಾಂತ ಹೆಗಡೆ, ಚಂದ್ರಮೋಹನ್ ಭಟ್, ರಾಘವೇಂದ್ರ ಬೆಳೆಯೂರು, ಕಲಾವಿದರಾದ ಶಿವಾನಂದ ಗೀಜಗಾರು, ದತ್ತಾತ್ರೇಯ ಹೆಗಡೆ ಮಡಸೂರು, ಗಣೇಶ್, ಪ್ರಸನ್ನ, ಸುಪ್ರತೀಕ್ ಭಟ್, ಕುಮಾರ್, ಸಂತೋಷ್, ಮೈತ್ರಿ ಪಾಟೀಲ್, ಮಧುರಾ ಶಿವಾನಂದ್, ದೇವೇಂದ್ರಪ್ಪ, ಪರಶುರಾಮ್, ಪ್ರಶಾಂತ್ ಕೆ.ಎಸ್., ಸಂತೋಷ್ ಶೇಟ್, ರಾಯಲ್ ಸಂತೋಷ್ ಇನ್ನಿತರರು ಹಾಜರಿದ್ದರು.