ಕನ್ನಡಪ್ರಭ ವಾರ್ತೆ ಬೀದರ್

ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ದೇಶದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅವ್ಯವಸ್ಥೆಯನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ವತಿಯಿಂದ ಗುರುವಾರ ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಯಿತು.

ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಗಳಿಗೆ ಬರೆದ ಮನವಿ ಸಲ್ಲಿಸಿ ದೇಶದ ಪರೀಕ್ಷಾ ವ್ಯವಸ್ಥೆಯಲ್ಲಿ ಹೆಚ್ಚುತ್ತಿರುವ ಅವ್ಯವಸ್ಥೆಗಳು ವಿದ್ಯಾರ್ಥಿಗಳ ಭವಿಷ್ಯವನ್ನು ಆತಂಕಕ್ಕೆ ದೂಡುತ್ತಿವೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ವಿವಿಧ ಪರೀಕ್ಷಾ ಅಕ್ರಮಗಳಿಗೆ ಕೇಂದ್ರ ಸರ್ಕಾರ ನೈತಿಕ ಹೊಣೆ ಹೊತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ದೆಹಲಿ ಜಂತರ್-ಮಂತರ್‌ನಲ್ಲಿ ಸೋನಮ್ ವಾಂಗ್ಚುಕ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಹಾಗೂ ಟಿಯರ್ ಗ್ಯಾಸ್ ಪ್ರಯೋಗಿಸಿರುವುದನ್ನು ತೀವ್ರವಾಗಿ ಖಂಡಿಸಿದರು. ಪರೀಕ್ಷಾ ಅಕ್ರಮಗಳಿಂದ ಸಂಕಷ್ಟಕ್ಕೊಳಗಾದ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕು ಹಾಗೂ ಜೀವ ಕಳೆದುಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಿಸಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದ ಅವರು, ನ್ಯಾಯ ಸಿಗುವವರೆಗೆ ಶಾಂತಿಯುತ ಹೋರಾಟವು ಮುಂದುವರಿಸುವುದಾಗಿ ತಿಳಿಸಿದರು.


ಪ್ರತಿಭಟನೆಯಲ್ಲಿ ಡಿಎಸ್‌ಎಸ್ ರಾಜ್ಯ ಸಂಚಾಲಕ ಮಾರುತಿ ಬೌದ್ಧೆ, ಜಿಲ್ಲಾ ಸಂಚಾಲಕ ರಾಜಕುಮಾರ ವಾಘಮಾರೆ ಹಾಗೂ ಅರುಣ ಪಟೇಲ್, ತಾಲ್ಲೂಕು ಸಂಚಾಲಕರಾದ ಝರೆಪ್ಪಾ ವರ್ಮಾ, ವಾಮನರಾವ್ ಮೈಸಲಗೆ, ಶಿವರಾಜ ತಡಪಳ್ಳಿ, ಶಿರೋಮಣಿ ಹಲಗೆ, ಸತೀಶ್ ರತ್ನಾಕರ್, ರಮೇಶ್ ಬೆಲ್ದಾರ್, ಉದಯ ನಾಯಕ, ವಿಜಯಕುಮಾರ್ ಭಾವಿಕಟ್ಟಿ, ರಾಹುಲ್ ಹಾಲಹಿಪ್ಪರ್ಗಾ, ಮಹೇಶ್ ಗೋರನಾಳಕರ್, ಬಾಬುರಾವ ಹೊನ್ನಾ, ಮುಕೇಶ್ ರಾಯ್, ವಿನೋದ್ ಭಂಗೆ, ಬಸವರಾಜ ಭಾವಿದೊಡ್ಡಿ, ಗೌತಮ್ ಮುತ್ತಂಗಿಕರ್, ರಾಜು ಕಾಂಬಳೆ, ಜಯಭೀಮ್ ಚೀಮನಾಯಕ್, ಶ್ರೀನಿವಾಸ್ ದಯಾಳ್, ವಿನಯ್ ಮಾಳಗೆ, ಬಾಬು ಟೈಗರ್, ಓಂಪ್ರಕಾಶ್ ರೊಟ್ಟೆ, ಜಗದೀಶ್ ಬಿರಾದಾರ್, ವಿಠ್ಠಲದಾಸ್ ಪ್ಯಾಗೆ, ದಶರಥ ಗುರು, ರಮೇಶ್ ಜಿ. ಉಮಾಪುರೆ, ಅನೇಕ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.* ಜಂತರ್‌ಮಂತರ್‌ನಲ್ಲಿ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯಕ್ಕೆ ಕಿಡಿಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ನೀಟ್ ಪರೀಕ್ಷೆಯಲ್ಲಿ ಪದೇ ಪದೇ ನಡೆಯುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಆಕ್ರಮಗಳು, ಶಿಕ್ಷಣ ವ್ಯವಸ್ಥೆಯಲ್ಲಿನ ವೈಫಲ್ಯಗಳು ಹಾಗೂ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ನಡೆಯುತ್ತಿರುವ ಅನ್ಯಾಯ ಖಂಡಿಸಿ, ಜೊತೆಗೆ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯವನ್ನು ಬುಲ್ಡೋಜರ್ ಮೂಲಕ ನೆಲಸಮಗೊಳಿಸುವ ಆದೇಶ ವಿರೋಧಿಸಿ, ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ ಹಾಗೂ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಅವರ ಸಂಯುಕ್ತಾಶ್ರಯದಲ್ಲಿ ಗುರುವಾರ ಬಸವಕಲ್ಯಾಣ ನಗರದಲ್ಲಿ ಬೃಹತ್ ಪ್ರತಿಭಟನಾ ರ್‍ಯಾಲಿ ಹಾಗೂ ಸಾರ್ವಜನಿಕ ಸಭೆ ನಡೆಯಿತು.

ನಗರದ ಗಾಂಧಿ ವೃತ್ತದಿಂದ ಆರಂಭವಾದ ಪ್ರತಿಭಟನಾ ರ್‍ಯಾಲಿಗೆ ಜಾವೇದ್ ಮತೀನ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಿಯಾಜ್ ಪಟೇಲ್ ಮಾತನಾಡಿ, ಶಿಕ್ಷಣವು ಪ್ರತಿಯೊಬ್ಬ ವಿದ್ಯಾರ್ಥಿಯ ಮೂಲಭೂತ ಹಕ್ಕು. ಆದರೆ ಇಂದು ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮಗಳು ಮತ್ತು ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದಿಂದ ಲಕ್ಷಾಂತರ ವಿದ್ಯಾರ್ತಿಗಳ ಭವಿಷ್ಯ ಅಪಾಯದಲ್ಲಿದೆ. ಸರ್ಕಾರ ವಿದ್ಯಾರ್ಥಿಗಳ ಧ್ವನಿಯನ್ನು ಆಲಿಸಿ ಶಿಕ್ಷಣ ವ್ಯವಸ್ಥೆಯಲ್ಲಿ ವಿಶ್ವಾಸವನ್ನು ಮರುಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ರ್‍ಯಾಲಿ ಬಸವೇಶ್ವರ ವೃತ್ತ ತಲುಪಿದ ಬಳಿಕ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಅಧ್ಯಕ್ಷ ಡಾ.ಜಬಿಯುಲ್ಲಾ ಖಾನ್ ಮಾತನಾಡಿ, ದೆಹಲಿಯಲ್ಲಿ ತಮ್ಮ ಹಕ್ಕುಗಳಿಗಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಖಂಡಿಸಿದರು. ಪರೀಕ್ಷೆಯಲ್ಲಿನ ಅಕ್ರಮಗಳ ಕುರಿತು ಸ್ವತಂತ್ರ ತನಿಖೆ ನಡೆಸಬೇಕು ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಎಸ್‌ಐಒ ಅಧ್ಯಕ್ಷ ಮುಜ್ತಾಹಿದ್ ಓಮರ್ ಮಾತನಾಡಿ, ಶಿಕ್ಷಣವು ಎಲ್ಲರಿಗೂ ಸಮಾನವಾಗಿ ದೊರೆಯಬೇಕಾದ ಹಕ್ಕಾಗಿದ್ದು, ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುವ ಯಾವುದೇ ವ್ಯವಸ್ಥೆಯನ್ನು ದೇಶದ ಯುವ ಜನತೆ ಒಪ್ಪುವುದಿಲ್ಲ ಎಂದರು. ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯವನ್ನು ನೆಲಸಮಗೊಳಿಸುವ ಆದೇಶವು ಶಿಕ್ಷಣ, ನ್ಯಾಯ ಹಾಗೂ ಸಂವಿಧಾನದ ಮೇಲಿನ ದಾಳಿಯಾಗಿದೆ ಎಂದು ಅವರು ಹೇಳಿದರು.

ವಕೀಲರಾದ ರಾಜಶ್ರೀ ಮಾತನಾಡಿ, ಶಿಕ್ಷಣವು ಸಂವಿಧಾನ ನೀಡಿರುವ ಮೂಲಭೂತ ಹಕ್ಕು. ಯಾವುದೇ ವಿದ್ಯಾರ್ಥಿಯ ಶಿಕ್ಷಣದ ಹಕ್ಕಿಗೆ ಧಕ್ಕೆಯಾಗದಂತೆ ಸರ್ಕಾರ ನಡೆದುಕೊಳ್ಳಬೇಕು ಎಂದು ಹೇಳಿದರು. ಜಿಐಓ ಪ್ರತಿನಿಧಿ ಜೋಹಾ, ಕರ್ನಾಟಕ ವಿದ್ಯಾರ್ಥಿ ಸಂಘದ ಸಂದೀಪ್ ಮುಖುಂದೆ, ಜುಲ್ಫಿಕಾರ್ ಚಬುಕಸವಾರ್, ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ರಾಜ್ಯ ಕಾರ್ಯದರ್ಶಿ ಅಸದ್ ಉಲ್ಲಾ ಖಾನ್, ಡಾ. ಜಬಿಯುಲ್ಲಾ ಖಾನ್, ಜಾವೇದ್ ಮತೀನ್ ಮತ್ತಿತರರು ಇದ್ದು ಪ್ರತಿಭಟನೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.