ವಿದ್ಯಾರ್ಥಿ ವೇತನ ತಡೆಗೆ ಖಂಡನೆ: ಎಸ್‌ಎಫ್‌ಐನಿಂದ ಪ್ರತಿಭಟನೆ

| Published : Aug 05 2024, 12:37 AM IST

ವಿದ್ಯಾರ್ಥಿ ವೇತನ ತಡೆಗೆ ಖಂಡನೆ: ಎಸ್‌ಎಫ್‌ಐನಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿ ವೇತನ ಮತ್ತು ಫೆಲೋಶಿಪ್ ವಿತರಣೆಯಲ್ಲಿನ ನಿರ್ಲಕ್ಷ್ಯ ಖಂಡಿಸಿ ಭಾರತೀಯ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ತಾಲೂಕು ಸಂಚಾಲಕ ಸಮಿತಿ ವತಿಯಿಂದ ಪ್ರತಿಭಟಿಸಿ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಸುರಪುರ

ವಿದ್ಯಾರ್ಥಿ ವೇತನ ಮತ್ತು ಫೆಲೋಶಿಪ್ ವಿತರಣೆಯಲ್ಲಿನ ನಿರ್ಲಕ್ಷ್ಯ ಖಂಡಿಸಿ ಭಾರತೀಯ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ತಾಲೂಕು ಸಂಚಾಲಕ ಸಮಿತಿ ವತಿಯಿಂದ ಪ್ರತಿಭಟಿಸಿ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಎಫ್‌ಐ ಜಿಲ್ಲಾ ಸಂಚಾಲಕ ಇಮಾಮಸಾಬ್ ನದಾಫ್, ಯಾದಗಿರಿ ಜಿಲ್ಲೆಯಲ್ಲಿ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗಿನ ಎಲ್ಲ ಸಮುದಾಯದ ವಿದ್ಯಾರ್ಥಿಗಳಿಗೆ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡದಿರುವುದು ಖಂಡನೀಯ. ಸರ್ಕಾರ ಕಡಿತ ಮಾಡಿರುವ ವಿದ್ಯಾರ್ಥಿ ವೇತನ ಮತ್ತು ಫೆಲೋಶಿಪ್ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದರು.

ಶೇ.60ರಿಂದ 74.99 ಫಲಿತಾಂಶ ಪಡೆದ ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳಿಗೆ ರದ್ದು ಮಾಡಿರುವ ಪ್ರೋತ್ಸಾಹ ಧನ, ಪ್ರತಿ ತಿಂಗಳು ಅಲ್ಪಸಂಖ್ಯಾತ ಸಮುದಾಯದ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ₹25000 ಪ್ರೋತ್ಸಾಹ ಧನ ಮುಂದುವರಿಸಬೇಕು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಡಲು ಇರುವ ತಾರತಮ್ಯ ನೀತಿಯ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಅಹಿಂದ ವರ್ಗಗಳ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಬೇಕು. ಸುರಪುರ ತಾಲೂಕಿನ ಎಲ್ಲ ಶಾಲೆಗಳಲ್ಲಿ ಶಿಕ್ಷಕರನ್ನು ನೇಮಿಸಬೇಕು. ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ಕೊಡಬೇಕು. ಪ್ರತಿ ಹಳ್ಳಿಗಳಿಗೆ ಸಮಯಕ್ಕೆ ಸರಿಯಾಗಿ ಶಾಲಾ ಮಕ್ಕಳಿಗೆ ಅನುಕೂಲಕ್ಕೆ ತಕ್ಕಂತೆ ಬಸ್ ಬಿಡಬೇಕು ಎಂದು ಆಗ್ರಹಿಸಿದರು.

ಸಂಚಾಲಕರಾದ ಶರಣಬಸವ ದೊಡ್ಮಮನಿ, ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ ದೊಡ್ಮಮನಿ, ಮಹೇಶ್, ಸೋಪಣ್ಣ, ಭೀಮಾಶಂಕರ್, ಭೀಮರಾಯ ಸೇರಿದಂತೆ ಇತರರಿದ್ದರು.