ಸಾರಾಂಶ
ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಖಂಡಿಸಿ ಹಾಗೂ ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪಿರಿಯಾಪಟ್ಟಣದಲ್ಲಿ ಶ್ರೀ ಧರ್ಮಸ್ಥಳ ಅಭಿಮಾನಿಗಳ ವೇದಿಕೆ ನೇತೃತ್ವದಲ್ಲಿ ಹಲವು ಪ್ರಗತಿಪರ ಸಂಘಟನೆ ಪ್ರತಿಭಟಿಸಿದರು.ಪಕ್ಷ ಜಾತಿ ಹಾಗೂ ಧರ್ಮ ಭೇದ ಮರೆತು ಅಪಾರ ಸಂಖ್ಯೆಯಲ್ಲಿ ಹಾಜರಿದ್ದ ಶ್ರೀ ಕ್ಷೇತ್ರ ಅಭಿಮಾನಿಗಳು ಪಟ್ಟಣದ ಡಿ. ದೇವರಾಜ ಅರಸು ಕಲಾಭವನ ಬಳಿಯಿಂದ ಬಿ.ಎಂ. ಮುಖ್ಯರಸ್ತೆ ಮುಖಾಂತರ ತಹಸೀಲ್ದಾರ್ ಕಚೇರಿವರೆಗೆ ಕಾಲ್ನಡಿಗೆಯಲ್ಲಿ ಸಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಪರ ಘೋಷಣೆಗಳನ್ನು ಕೂಗುತ್ತಾ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿ, ತಹಶೀಲ್ದಾರ್ ಅವರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಮಾಜಿ ಶಾಸಕ ಕೆ. ಮ ಹದೇವ್ ಮಾತನಾಡಿ, ಹಿಂದುಗಳ ಪ್ರಸಿದ್ಧ ದೇವಾಲಯ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಹಾಗೂ ಲಕ್ಷಾಂತರ ಮಂದಿ ಸ್ವಾವಲಂಬಿ ಜೀವನ ನಡೆಸಲು ಸಹಕಾರ ನೀಡುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗಡೆ ಅವರ ಜನಪ್ರಿಯತೆ ಸಹಿಸದೆ ಅವರ ವಿರುದ್ಧ ಪಿತೂರಿ ರೂಪಿಸುವ ಉದ್ದೇಶದಿಂದ ಹಿಂದುಗಳ ಧಾರ್ಮಿಕತೆಗೆ ಧಕ್ಕೆ ತರುವಂತೆ ಸಮಾಜದಲ್ಲಿ ಅಶಾಂತಿ ಉಂಟು ಮಾಡಿ ಧರ್ಮ ಧರ್ಮಗಳ ನಡುವೆ ದ್ವೇಷ ಭಾವನೆ ಉಂಟು ಮಾಡುತ್ತಿರುವ ಕೆಲ ದುಷ್ಟರ ವಿರುದ್ಧ ಸೂಕ್ತ ಕಾನೂನು ಕ್ರಮವಾಗುವಂತೆ ಅವರು ಆಗ್ರಹಿಸಿದರು.ಕೊಡಗು ಜಿಲ್ಲೆ ಧರ್ಮಸ್ಥಳ ಭಕ್ತರ ವೇದಿಕೆ ಸಂಚಾಲಕ ಧನಂಜಯ್ ಮಾತನಾಡಿ, ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಸರಿ ಸುಮಾರು 800 ವರ್ಷಗಳ ಇತಿಹಾಸವಿದ್ದು, ಇಲ್ಲಿಗೆ ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ ಧಾರ್ಮಿಕ ನಂಬಿಕೆಯುಳ್ಳ ಪುಣ್ಯಕ್ಷೇತ್ರದ ಮೇಲೆ ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಟಿ. ಜಯಂತ್ ಸೇರಿದಂತೆ ಕೆಲ ಸಾಮಾಜಿಕ ಜಾಲತಾಣಗಳು ಅಪಪ್ರಚಾರ ಮಾಡಿ ಅನಾಮಿಕ ವ್ಯಕ್ತಿಯ ಮೂಲಕ ಸರ್ಕಾರಕ್ಕೆ ಸುಳ್ಳು ದೂರು ನೀಡಿ ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡಿರುವುದು ಖಂಡನೀಯ.ಸುಳ್ಳು ಸುದ್ದಿ ಹಬ್ಬಿಸಿ ಸಮಾಜ ಒಡೆಯುವ ಕೆಲಸ ಮಾಡುತ್ತಿರುವುದಲ್ಲದೇ ಸಮಾಜ ಬಾಂಧವರಲ್ಲಿ ಭಿನ್ನಾಭಿಪ್ರಾಯ ಹುಟ್ಟು ಹಾಕುತ್ತಿದ್ದು ಇವರ ವಿರುದ್ಧ ಸೂಕ್ತ ಕಾನೂನು ಕ್ರಮವಾಗುವಂತೆ ಒತ್ತಾಯಿಸಿದರು.ಬಿಜೆಪಿ ತಾಲೂಕು ಅಧ್ಯಕ್ಷ ರಾಜೇಂದ್ರ, ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ. ಪ್ರಸನ್ನ, ಜನಜಾಗೃತಿ ವೇದಿಕೆ ಅಧ್ಯಕ್ಷ ಎ.ಟಿ. ರಂಗಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನವೀನ್ ಕುಮಾರ್, ಮುಖಂಡರಾದ ಆವರ್ತಿ ಚಂದ್ರಶೇಖರ್ ಮಾತನಾಡಿದರು.ಪುರಸಭಾ ಅಧ್ಯಕ್ಷ ಪ್ರಕಾಶ್ ಸಿಂಗ್ ಮತ್ತು ಸದಸ್ಯರು, ಜನಜಾಗೃತಿ ವೇದಿಕೆಯ ಎಚ್.ಡಿ. ರಾಜೇಂದ್ರ, ಷಣ್ಮುಖರಾವ್, ಚಂದ್ರಮೋಹನ್, ವಿವಿಧ ಸಂಘಟನೆ ಮುಖಂಡರಾದ ಪ್ರೀತಿ ಅರಸ್, ಎಂ.ಎಂ ರಾಜೇಗೌಡ, ನಳಿನಿ, ರಾಜೇಗೌಡ, ಪ್ರಸಾದ್, ಮಲ್ಲೇಶ್, ಅರುಣ್ ರಾಜೇ ಅರಸ್, ಮಂಜುನಾಥ್, ಸಂಜಯ್, ವಿವಿಧ ಹಿಂದೂಪರ ಮತ್ತು ಮಹಿಳಾ ಸಂಘಟನೆ ಪದಾಧಿಕಾರಿಗಳು, ಸದಸ್ಯರು ಇದ್ದರು.