ರೇಷ್ಮೆ ಹರಾಜು ಪ್ರಕ್ರಿಯೆ ವಿಳಂಬಕ್ಕೆ ಖಂಡನೆ, ರೈತರಿಂದ ಹೆದ್ದಾರಿಗೆ ರೇಷ್ಮೆಗೂಡು ಸುರಿದು ಪ್ರತಿಭಟನೆ

| Published : Apr 22 2024, 02:01 AM IST

ರೇಷ್ಮೆ ಹರಾಜು ಪ್ರಕ್ರಿಯೆ ವಿಳಂಬಕ್ಕೆ ಖಂಡನೆ, ರೈತರಿಂದ ಹೆದ್ದಾರಿಗೆ ರೇಷ್ಮೆಗೂಡು ಸುರಿದು ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಇಂಟರ್ ನೆಟ್ ಸಮಸ್ಯೆಯಿಂದ ಹರಾಜು ಪ್ರಕ್ರಿಯೆ ವಿಳಂಬವಾಗಿದೆ ಎಂದ ಮಾರುಕಟ್ಟೆ ಅಧಿಕಾರಿ ಸುರೇಶ್ ಅವರಿಗೆ ರೈತರು ತೀವ್ರ ತರಾಟೆಗೆ ತೆಗೆದುಕೊಂಡರು. ತಿಂಗಳಲ್ಲಿ ಸಾಕಷ್ಟು ಬಾರಿ ಇಂಥ ಸಮಸ್ಯೆಗಳಿಂದ ಬೆಳೆಗಾರರಿಗೆ ನಷ್ಟವಾಗುತ್ತಿದೆ. ಮತ್ತೊಂದೆಡೆ ದರ ಕುಸಿತದಿಂದಲೂ ಲಾಭ ಕಡಿಮೆಯಾಗುತ್ತಿದೆ ಎಂದು ರೈತರು ಕಿಡಿಕಾರಿದರು.

ಮಳವಳ್ಳಿ: ಹರಾಜು ಪ್ರಕ್ರಿಯೆ ವಿಳಂಬ ಖಂಡಿಸಿ ರೈತರು ತಾಲೂಕಿನ ಬುಗತಗಹಳ್ಳಿ ಬಳಿ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆ ಬಳಿಯ ಮದ್ದೂರು -ಮಳವಳ್ಳಿ ಹೆದ್ದಾರಿಗೆ ರೇಷ್ಮೆ ಗೂಡು ಸುರಿದು ಶನಿವಾರ ಕೆಲಕಾಲ ಪ್ರತಿಭಟನೆ ನಡೆಸಿದರು. ಸರ್ಕಾರಿ ರೇಷ್ಮೆ ಮಾರುಕಟ್ಟೆಯಲ್ಲಿ ಬೆಳಿಗ್ಗೆ 10.30ಕ್ಕೆ ಆರಂಭವಾಗಬೇಕಿದ್ದ ಹರಾಜು ಪ್ರಕ್ರಿಯೆ ತಾಂತ್ರಿಕ ಕಾರಣದಿಂದ ತಡವಾದ ಹಿನ್ನೆಲೆಯಲ್ಲಿ ವಿವಿಧ ತಾಲೂಕಿನ ರೇಷ್ಮೆಗೂಡು ತಂದಿದ್ದ ನೂರಾರು ರೈತರು ಅಧಿಕಾರಿಗಳು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ದಿಢೀರ್ ರಸ್ತೆಗೆ ಇಳಿದ ರೈತರು ಮದ್ದೂರು-ಮಳವಳ್ಳಿ ಹೆದ್ದಾರಿಗೆ ರೇಷ್ಮೆ ಗೂಡು ಸುರಿದು ಪ್ರತಿಭಟನೆಗೆ ಮುಂದಾದರು. ಕೂಡಲೇ ಸ್ಥಳಕ್ಕೆ ಬಂದ ಸಿಪಿಐ ಬಿ.ಎಸ್.ಶ್ರೀಧರ್, ಪಿಎಸ್ಐ ಶ್ರವಣ ದಾಸರಡ್ಡಿ ರೈತರನ್ನು ಮನವೊಲಿಸಿ ಮಾರುಕಟ್ಟೆಗೆ ಕರೆದುಕೊಂಡು ಬಂದು ಅಧಿಕಾರಗಳೊಂದಿಗೆ ಸಮಸ್ಯೆ ಬಗ್ಗೆ ಚರ್ಚಿಸಿದರು.

ಕುಂಟು ನೆಪಕ್ಕೆ ತರಾಟೆ:

ಇಂಟರ್ ನೆಟ್ ಸಮಸ್ಯೆಯಿಂದ ಹರಾಜು ಪ್ರಕ್ರಿಯೆ ವಿಳಂಬವಾಗಿದೆ ಎಂದ ಮಾರುಕಟ್ಟೆ ಅಧಿಕಾರಿ ಸುರೇಶ್ ಅವರಿಗೆ ರೈತರು ತೀವ್ರ ತರಾಟೆಗೆ ತೆಗೆದುಕೊಂಡರು. ತಿಂಗಳಲ್ಲಿ ಸಾಕಷ್ಟು ಬಾರಿ ಇಂಥ ಸಮಸ್ಯೆಗಳಿಂದ ಬೆಳೆಗಾರರಿಗೆ ನಷ್ಟವಾಗುತ್ತಿದೆ. ಮತ್ತೊಂದೆಡೆ ದರ ಕುಸಿತದಿಂದಲೂ ಲಾಭ ಕಡಿಮೆಯಾಗುತ್ತಿದೆ ಎಂದು ಕಿಡಿಕಾರಿದರು.

ಅಧಿಕಾರಿಯ ಅಸಡ್ಡೆ ಉತ್ತರದಿಂದ ಕೆಲಕಾಲ ಕೋಪಕೊಂಡ ರೈತರು ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಿಪಿಐ ಬಿ.ಎಸ್.ಶ್ರೀಧರ್ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದೆ ಈ ರೀತಿ ಸಮಸ್ಯೆಯಾಗದಂತೆ ಕ್ರಮ ವಹಿಸುವಂತೆ ಸೂಚಿಸಿದರು. ಮಾಹಿತಿ ತಿಳಿದು ಚುನಾವಣಾ ಕರ್ತವ್ಯದಲ್ಲಿದ್ದ ರೇಷ್ಮೆ ಸಹಾಯಕ ನಿರ್ದೇಶಕ ಸ್ವಾಮಿ ವಿವೇಕಾನಂದ ಮಾರುಕಟ್ಟೆ ಭೇಟಿ ನೀಡಿ ಹರಾಜು ಪ್ರಕ್ರಿಯೆ ನಡೆಸಿದರು.