ಪೂರ್ವಭಾವಿ ಸಭೆಗಳ 15 ದಿನ ಮುನ್ನವೇ ನಡೆಸಿ: ಶಾಸಕರ ಸೂಚನೆ

| Published : Jun 24 2024, 01:36 AM IST

ಪೂರ್ವಭಾವಿ ಸಭೆಗಳ 15 ದಿನ ಮುನ್ನವೇ ನಡೆಸಿ: ಶಾಸಕರ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ನಾಡಪ್ರಭು ಕೆಂಪೇಗೌಡರ 515 ನೇ ಜಯಂತಿ ಕಾರ್ಯಕ್ರಮ ಸಂಬಂಧ ಶಾಸಕ ಎಂ.ಆರ್. ಮಂಜುನಾಥ್ ನೇತೃತ್ವದಲ್ಲಿ ಹನೂರಿನಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಕೆಂಪೇಗೌಡ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು 3 ದಿನಗಳಿರುವಾಗ ಕರೆದ ಬಗ್ಗೆ ತೀವ್ರ ಆಕ್ಷೇಪಕನ್ನಡಪ್ರಭ ವಾರ್ತೆ ಹನೂರು

ನಾಡಪ್ರಭು ಕೆಂಪೇಗೌಡರ 515 ನೇ ಜಯಂತಿ ಕಾರ್ಯಕ್ರಮ ಸಂಬಂಧ ಶಾಸಕ ಎಂ.ಆರ್. ಮಂಜುನಾಥ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ನಂತರ ಶಾಸಕ ಎಂ ಆರ್ ಮಂಜುನಾಥ್ ಮಾತನಾಡಿ ರಾಜ್ಯ ಸರ್ಕಾರ ನಿಗದಿಪಡಿಸಿರುವ ಪ್ರತಿಯೊಬ್ಬ ಮಹಾನ್ ನಾಯಕರ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಹದಿನೈದು ದಿನಗಳಿಗೆ ಮುಂಚೆ ನಡೆಸಬೇಕು. ಎರಡು ಮೂರು ದಿನಗಳು ಇರುವಾಗ ಪೂರ್ವಭಾವಿ ಸಭೆ ಕರೆದರೇ ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಇದರಿಂದ ಮನಸ್ತಾಪಗಳು ಹೆಚ್ಚಾಗುತ್ತದೆ. ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮ ವಹಿಸಬೇಕು ಎಂದರು.

ಪಟ್ಟಣ ಪಂಚಾಯಿತಿ ಸದಸ್ಯ ಗಿರೀಶ್ ಮಾತನಾಡಿ ಪ್ರತಿ ಬಾರಿಯೂ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಮಾಡುವಾಗ ತಾಲೂಕು ಆಡಳಿತದವರು ಸರಿಯಾಗಿ ನಡೆದುಕೊಳ್ಳುತ್ತಿಲ್ಲ, ಎರಡು ಮೂರು ದಿನಗಳು ಇರುವಾಗ ಪೂರ್ವಭಾವಿ ಸಭೆ ಕರೆಯುತ್ತಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚು ಒಕ್ಕಲಿಗ ಸಮಾಜದವರು ಇರುವುದು ಹಾಗಾಗಿ ನೀವು ನಮಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು. ಇಲ್ಲದಿದ್ದರೆ ನೀವು ಜಯಂತಿ ಮಾಡುವುದೇ ಬೇಡ, ನಾವು ನಮ್ಮ ಸಮಾಜದ ವತಿಯಿಂದ ಜಯಂತಿ ಮಾಡಿಕೊಳ್ಳುತ್ತೇವೆ ಎಂದರು.

ಸಮಾಜದ ಮುಖಂಡ ಮಂಜೇಶ್ ಮಾತನಾಡಿ ನೀವು ನಾಮ್‌ಕೆವಸ್ಥೆಗೆ ಕೆಂಪೇಗೌಡ ಜಯಂತಿ ಮಾಡುವುದಾದರೆ ನೀವು ಜಯಂತಿ ಮಾಡುವುದೇ ಬೇಡ, ಕಳೆದ ವರ್ಷವೂ ಹಾಗಿರುವ ತಪ್ಪನ್ನು ಮುಂದೆ ಸರಿಪಡಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದೀರಾ. ಆದರೆ ಅಧಿಕಾರಿಗಳು ಈ ಬಾರಿಯೂ ನಿರ್ಲಕ್ಷ್ಯ ವಹಿಸಿದ್ದೀರಾ? ಇದು ಮತ್ತೊಮ್ಮೆ ಮರುಕಳಿಸಿದರೆ ತಾಲೂಕು ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪಟ್ಟಣ ಪಂಚಾಯತಿ ಸದಸ್ಯ ಹರೀಶ್ ಕುಮಾರ್ ಮಾತನಾಡಿ ಈಗಾಗಲೇ ಹನೂರು ಪಟ್ಟಣದಿಂದ ಎಲ್ಲೇಮಾಳ ಹಾಗೂ ಅಜ್ಜೀಪುರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸರ್ಕಲ್ ನಲ್ಲಿ ನಾಡಪ್ರಭು ಕೆಂಪೇಗೌಡ ವೃತ್ತ ನಿರ್ಮಾಣ ಮಾಡಲು ಪಟ್ಟಣ ಪಂಚಾಯಿತಿಯಲ್ಲಿ ಅನುಮೋದನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಟ್ಟಿದ್ದೇವೆ. ಜಿಲ್ಲಾಧಿಕಾರಿಗಳು ಸಹ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಹಾಗಾಗಿ ನೀವು ವೃತ್ತ ನಿರ್ಮಾಣ ಮಾಡಲು ಸಹಕಾರ ನೀಡಬೇಕು ಎಂದು ಶಾಸಕ ಎಂ ಆರ್ ಮಂಜುನಾಥ್ ರವರಿಗೆ ಮನವಿ ಮಾಡಿದರು. ಇದಲ್ಲದೆ ನಾಡ ಪ್ರಭು ಕೆಂಪೇಗೌಡ ವೃತ್ತ ಮಾಡಬೇಕಾಗಿರುವ ಸ್ಥಳದಲ್ಲಿ ಕೆಲವು ಖಾಸಗಿ ವ್ಯಕ್ತಿಗಳು ಸರ್ವೇ ನಂಬರ್ 96/ಬಿ ರಲ್ಲಿನ ಸರ್ಕಾರಿ ಜಮೀನನ್ನೇ ಒತ್ತುವರಿ ಮಾಡಿಕೊಂಡಿದ್ದಾರೆ .ಸರ್ಕಾರಿ ಜಮೀನು ಒತ್ತುವರಿ ತೆರವು ಗೊಳಿಸಿದರೆ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಆದ್ದರಿಂದ ಒತ್ತುವರಿ ತೆರವುಗೊಳಿಸಬೇಕು ಎಂದು ಮನವಿ ಮಾಡಿದರು.

ಶಾಸಕ ಎಂ.ಆರ್. ಮಂಜುನಾಥ್ ರವರು ಕೇಶಿಫ್ ಅಧಿಕಾರಿಗಳನ್ನು ಸಭೆಗೆ ಕರೆಯಿಸಿ ವೃತ್ತವನ್ನು ಅಗಲೀಕರಣ ಮಾಡಬೇಕು ಈಗಾಗಲೇ ತಹಸೀಲ್ದಾರ್ ರವರಿಗೆ ಸರ್ವೆ ಮಾಡಿ ಒತ್ತುವರಿ ತೆರವು ಗೊಳಿಸಲು ಸೂಚನೆ ನೀಡಿದ್ದೇನೆ. ಸರ್ವೆ ಕಾರ್ಯ ಮುಗಿದ ನಂತರ ಸಮಸ್ಯೆ ಬಗೆಯರಿಯಲಿದೆ ಎಂದರು.

ಕೆಂಪೇಗೌಡ ಜಯಂತಿ ಸಂಬಂಧಪಟ್ಟ ನಡೆದ ಪೂರ್ವಭಾವಿ ಸಭೆಯಲ್ಲಿ ಸಮಾಜದ ಮುಖಂಡರುಗಳು ನಾವು ನಮ್ಮ ಸಮಾಜದ ಕುಲವನ್ನು ಸೇರಿಸಿ ಆನಂತರ ದಿನಾಂಕ ನಿಗದಿ ಮಾಡುತ್ತೇವೆ ಎಂದು ಸಭೆಗೆ ತಿಳಿಸಿದರು.

ಸಭೆಯಲ್ಲಿ ತಹಸಿಲ್ದಾರ್ ವೈ. ಕೆ. ಗುರುಪ್ರಸಾದ್, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಪ್ರಸಾದ್ ಒಕ್ಕಲಿಗ ಸಮಾಜದ ಮುಖಂಡರುಗಳಾದ ರಾಜು ಗೌಡ, ಎಲ್ ನಾಗೇಂದ್ರ, ಸೋಮಣ್ಣ, ಲಿಂಗರಾಜು, ನಟರಾಜು, ರವಿ, ರಘು, ಪ್ರವೀಣ, ಗೋವಿಂದೇಗೌಡ, ಪ್ರಸಾದ್, ಸತೀಶ್, ಕೊಳ್ಳೇಗಾಲ ಯಳಂದೂರು ಒಕ್ಕಲಿಗ ಸಂಘದ ನಿರ್ದೇಶಕ ಮಂಜೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

----------

23ಸಿಎಚ್ಎನ್‌14

ಹನೂರು ಪಟ್ಟಣದಲ್ಲಿ ಕೆಂಪೇಗೌಡರ 515 ಜಯಂತಿ ಪೂರ್ವಭಾವಿ ಸಭೆ ಶಾಸಕ ಎಂ.ಆರ್. ಮಂಜುನಾಥ್ ನೇತತ್ವದಲ್ಲಿ ನಡೆಯಿತು.