ಸಾರಾಂಶ
ಸರ್ಕಾರ ಹಾಗೂ ಚುನಾವಣೆ ಆಯೋಗ ಗ್ರಾಮ ಪಂಚಾಯಿತಿ ಚುನಾವಣೆ ಮುಂದೂಡದೇ ನಿಗದಿತ ಸಮಯಕ್ಕೆ ಚುನಾವಣೆ ಮಾಡಬೇಕು
ಕನ್ನಡಪ್ರಭ ವಾರ್ತೆ ಕಲಾದಗಿ
ಜನರ ಬದುಕಿಗೆ ಹತ್ತಿರವಾಗಿರುವ ಸ್ಥಳೀಯ ಸರ್ಕಾರವಾದ ಗ್ರಾಮ ಪಂಚಾಯಿತಿ ಮಹತ್ವ ಪಡೆದಿವೆ. ಸರ್ಕಾರ ಹಾಗೂ ಚುನಾವಣೆ ಆಯೋಗ ಗ್ರಾಮ ಪಂಚಾಯಿತಿ ಚುನಾವಣೆ ಮುಂದೂಡದೇ ನಿಗದಿತ ಸಮಯಕ್ಕೆ ಚುನಾವಣೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ಸತೀಶ ಕಾಡಶೆಟ್ಟಿಹಳ್ಳಿ ಒತ್ತಾಯಿಸಿದರು.ಖಜ್ಜಿಡೋಣಿ ಗ್ರಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾಮ ಪಂಚಾಯಿತಿಗಳು ಸಂವಿಧಾನಬದ್ಧವಾಗಿ ರಚನೆಯಾಗಿವೆ. ದೇಶದ ಅಭಿವೃದ್ಧಿ ಗ್ರಾಮಗಳ ಅಭಿವೃದ್ಧಿ ಅವಲಂಬಿಸಿದೆ. ಜನಪ್ರತಿನಿಧಿ ಆಯ್ಕೆಯಾದ ಮೊದಲ ಸಭೆಯಿಂದ ಅಧಿಕಾರ ಪಡೆಯುತ್ತೇವೆ. ಐದು ವರ್ಷಗಳ ಕಾಲಾವಧಿ ಹೊಂದಿರುತ್ತೇವೆ. ಡಿಸೆಂಬರ್ ತಿಂಗಳ ಅವಧಿ ಮುಗಿಯುತ್ತಿದ್ದು, ಚುನಾವಣೆ ಮುಂದೂಡಿಸುವ ಕೆಲಸವನ್ನು ಸರ್ಕಾರ ಮಾಡುತ್ತಿರುವುದು ಕಂಡು ಬರುತ್ತಿದೆ. ಸರ್ಕಾರ ಕಮೀಟಿ ಮಾಡಿ ಪಕ್ಷದ ಚಿಹ್ನೆಯಡಿ ಸ್ಪರ್ಧಿಸುವ, ವಾರ್ಡ್ ರಚನೆ ನೆಪದಲ್ಲಿ ಚುನಾವಣೆ ಮುಂದೂಡುವ ಸಂಚು ಮಾಡುತ್ತಿದೆ. ಸಂವಿಧಾನದ ವಿರುದ್ಧವಾಗಿ ಚುನಾವಣೆ ಮುಂದೂಡಿಸಬಾರದು. ಚುನಾವಣೆ ಮುಂದೂಡುವ ಸಂಚು ಮಾಡಿದರೆ ಎಲ್ಲ ರೀತಿಯ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಹಾಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಲಪತಿ, ಮುಖಂಡರಾದ ಪ್ರವೀಣ ಅರಕೇರಿ, ಎಂ.ಎಚ್.ಪಠಾಣ, ಮಮತಾ ತಳವಾರ, ಹೇಮಾ ಹೊಸುರಮಠ, ನಿಂಗಪ್ಪ ಆರೇರ, ಪಂಪಯ್ಯ, ಪದೀಪ ಪಾಟೀಲ, ಆನಂದ ಅವಳಣ್ಣನವರ ಇತರರು ಇದ್ದರು.