ಐದು ವರ್ಷಕ್ಕೊಮ್ಮೆ ಸಾಹಿತ್ಯ ಸಮ್ಮೇಳನ ನಡೆಸಿ: ಕೆ.ವಿವೇಕಾನಂದ

| Published : Feb 09 2025, 01:15 AM IST

ಸಾರಾಂಶ

ರಾಜ್ಯ ಸರ್ಕಾರ ಪ್ರತಿ ವರ್ಷ ನಡೆಸುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ೩೦ ಕೋಟಿ ಹಣ ನೀಡುತ್ತದೆ. ಇದಕ್ಕೆ ಬದಲು ಐದು ವರ್ಷಕ್ಕೊಮ್ಮೆ ಸಮ್ಮೇಳನ ನಡೆಸಿದರೆ ಸಾಕು. ವಾರ್ಷಿಕವಾಗಿ ಖರ್ಚಾಗುವ 150 ಕೋಟಿ ರು. ಹಣವನ್ನು ಶಿಥಿಲಗೊಂಡಿರುವ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬಳಸಬಹುದು. ಇದರಿಂದ ಒಂದೊಂದು ತಾಲೂಕಿಗೆ ೫ ರಿಂದ ೧೦ ಕೋಟಿ ರು. ಹಣ ಸಿಗಲಿದೆ. ಸರ್ಕಾರಿ ಶಾಲೆಗಳನ್ನು ಸುಲಭವಾಗಿ ಪುನಶ್ಚೇತನ ಮಾಡಬಹುದು.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯದಲ್ಲಿ ಪ್ರತಿ ವರ್ಷ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸುವ ಬದಲು ಐದು ವರ್ಷಕ್ಕೆ ಒಂದು ಸಮ್ಮೇಳನ ನಡೆಸುವುದು ಉತ್ತಮ ಎಂದು ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನ ಚಿಕ್ಕಮಂಡ್ಯ ಸರ್ಕಾರಿ ಪ್ರೌಢಶಾಲಾ ಆವರಣದಲಿ ಶ್ರೀ ಹಳ್ಳಿಕೇಶ್ವರ ಮತ್ತು ಶ್ರೀಬೋರೇಶ್ವರ ದೇವಸ್ಥಾನ ಟ್ರಸ್ಟ್ ಹಾಗೂ ಸರ್ಕಾರಿ ಪ್ರೌಢಶಾಲೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣೆ, ಶಾಲಾ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜ್ಯ ಸರ್ಕಾರ ಪ್ರತಿ ವರ್ಷ ನಡೆಸುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ೩೦ ಕೋಟಿ ಹಣ ನೀಡುತ್ತದೆ. ಇದಕ್ಕೆ ಬದಲು ಐದು ವರ್ಷಕ್ಕೊಮ್ಮೆ ಸಮ್ಮೇಳನ ನಡೆಸಿದರೆ ಸಾಕು. ವಾರ್ಷಿಕವಾಗಿ ಖರ್ಚಾಗುವ 150 ಕೋಟಿ ರು. ಹಣವನ್ನು ಶಿಥಿಲಗೊಂಡಿರುವ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬಳಸಬಹುದು. ಇದರಿಂದ ಒಂದೊಂದು ತಾಲೂಕಿಗೆ ೫ ರಿಂದ ೧೦ ಕೋಟಿ ರು. ಹಣ ಸಿಗಲಿದೆ. ಸರ್ಕಾರಿ ಶಾಲೆಗಳನ್ನು ಸುಲಭವಾಗಿ ಪುನಶ್ಚೇತನಗೊಳಿಸಲು ಇದು ಉತ್ತಮ ಯೋಜನೆಯಾಗಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಚಿಂತನೆ ನಡೆಸುವುದು ಸೂಕ್ತ ಎಂದರು.

ರಾಜ್ಯದಲ್ಲಿ ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಶಾಲೆಗಳು ಬಹುತೇಕ ಶಿಥಿಲಗೊಂಡಿವೆ. ೧೫ ರಿಂದ ೫೦ ವರ್ಷಗಳಾಗಿರುವ ಕಟ್ಟಡಗಳಿವೆ. ಕಟ್ಟಡಗಳು ಸಂಪೂರ್ಣ ಶಿಥಿಲಗೊಂಡು ವಿದ್ಯಾರ್ಥಿಗಳು ಶಾಲೆಯೊಳಗೆ ಕೂರದಂತಹ, ಪಾಠ ಪ್ರವಚನ ಮಾಡಲು ಸಾಧ್ಯವಾಗದಂತಹ ದುಸ್ಥಿತಿಯಲ್ಲಿವೆ. ಹಲವಾರು ಸರ್ಕಾರಿ ಶಾಲೆಗಳಿಗೆ ಆಟದ ಮೈದಾನವೇ ಇಲ್ಲ. ವಾಸ್ತವ ಹೀಗಿರುವಾಗ ಸರ್ಕಾರಿ ಶಾಲೆಗಳಿಗೆ ಯಾರು ಮಕ್ಕಳನ್ನು ಸೇರಿಸುತ್ತಾರೆ ಎಂದು ಪ್ರಶ್ನಿಸಿದರು.

ಇಂದಿನ ಪರಿಸ್ಥಿತಿಯನ್ನು ಗಮನಿಸಿದರೆ ಮುಂದಿನ ೧೦ ವರ್ಷಗಳಲ್ಲಿ ಕನ್ನಡ ಶಾಲೆಗಳು, ಸರ್ಕಾರಿ ಶಾಲೆಗಳು ಸಂಪೂರ್ಣವಾಗಿ ಕಣ್ಮರೆಯಾಗುವ ಸಾಧ್ಯತೆಗಳಿವೆ. ಗ್ರಾಮೀಣ ಪ್ರದೇಶದ ಜನರೂ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಓದಿಸುವ ಮನಸ್ಸು ಹೆಚ್ಚಾಗಲು ಸರ್ಕಾರಿ ಶಾಲೆಗಳಲ್ಲಿನ ಇಂತಹ ಅವ್ಯವಸ್ಥೆಗಳೂ ಕಾರಣವಾಗಿವೆ ಎಂದರು.

ಇನ್ನಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಕನ್ನಡ ಸಾಹಿತ್ಯ ಸಮ್ಮೇಳನವನ್ನು ೫ ವರ್ಷಕ್ಕೊಮ್ಮೆ ಅದ್ಧೂರಿಯಾಗಿ ಆಚರಿಸಿ, ಪ್ರತಿ ವರ್ಷ ಸಾಹಿತ್ಯ ಸಮ್ಮೇಳನಕ್ಕೆ ನೀಡುವ ಹಣವನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬಳಸಿದರೆ ಸಾರ್ಥಕತೆ ಪಡೆಯುತ್ತದೆ ಎಂದು ಸಲಹೆ ನೀಡಿದರು.

ದೇವಸ್ಥಾನದ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ, ಗ್ರಾಮೀಣ ವಿದ್ಯಾರ್ಥಿಗಳು ವಿಜ್ಞಾನಿ, ತಂತ್ರಜ್ಞಾನಿಯಾಗುವ ಕನಸುಗಳನ್ನು ಕಾಣಬೇಕು, ಗುರಿ ಇಟ್ಟುಕೊಂಡು ಶಿಕ್ಷಣ ಪಡೆಬೇಕು, ಆಗ ಯಶಸ್ಸು ನಿಮ್ಮದಾಗುತ್ತದೆ ಎಂದರು.

ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ವಿದ್ಯಾರ್ಥಿ ದಿಸೆಯಲ್ಲಿಯೇ ಉನ್ನತ ಹುದ್ದೆಗಳಾದ ಕೆಎಎಸ್, ಐಪಿಎಸ್, ಐಎಎಸ್ ನಂತಹ ಸ್ಪರ್ಧಾತ್ಮಕ ಪರಿಕ್ಷೆ ಎದುರಿಸುವ ಸಂಕಲ್ಪ ಮಾಡಬೇಕು, ಈಗಿನಿಂದಲೇ ಗುರಿ ಇರಿಸಿಕೊಂಡು ಸಾಧನೆಯ ಹಾದಿಯಲ್ಲಿ ಸಾಗಿದರೆ ಯಶಸ್ಸು ನಿಮ್ಮದಾಗುತ್ತದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ತಾಪಂ ಇಒ ಎಂ.ಎಸ್.ವೀಣಾ, ಕ್ಷೇತ್ರಶಿಕ್ಷಣಾಧಿಕಾರಿ ಮಹದೇವು, ಶಾಲೆಯ ಮುಖ್ಯಶಿಕ್ಷಕ ಎಚ್.ಎನ್.ದೇವರಾಜು, ಟ್ರಸ್ಟ್ ಉಪಾಧ್ಯಕ್ಷ ಡಾ.ಕೆ.ಬಿ.ಬೋರಯ್ಯ, ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್, ಗ್ರಾಪಂ ಉಪಾಧ್ಯಕ್ಷೆ ಗೀತಾ, ಸದಸ್ಯೆ ಮಮತಾ, ಮಾಜಿ ಸದಸ್ಯೆ ಪ್ರಭಾವತಿ, ಪರಿಸರ ಸಂಸ್ಥೆ ಅಧ್ಯಕ್ಷ ಎಂ.ಯೋಗೇಶ್, ಶಿಕ್ಷಕರಾದ ದೇವರಾಜು, ಟ್ರಸ್ಟಿಗಳಾದ ಜವರೇಗೌಡ, ದೇವರಾಜ್, ಎಂ.ಎಲ್.ವೆಂಕಟೇಶ್, ಧನುಷ್‌ಗೌಡ, ದಿನೇಶ್, ವಿನಯ್‌ಕುಮಾರ್ ಮತ್ತಿತರರಿದ್ದರು.