ಸಾರಾಂಶ
ತುಮಕೂರು: ಸಂಸ್ಕಾರದ ಅರಿವಿದ್ದರೆ ಸಂಸ್ಕೃತಿಯ ಅರಿವು ಮನಸಿನಲ್ಲಿ ಮೂಡುತ್ತದೆ. ಸಂಸ್ಕಾರವಂತರಾದಾಗ ವ್ಯಕ್ತಿತ್ವ ಪ್ರಕಾಶಿಸುತ್ತದೆ. ಪಠ್ಯಗಳಲ್ಲಿ ಸೋತರೂ ಪಠ್ಯೇತರ ಚಟುವಟಿಕೆಗಳಲ್ಲಿ ಗೆಲ್ಲಬಹುದು ಎಂದು ಹರಿಕಥಾ ವಿದ್ವಾಂಸ ಡಾ. ಲಕ್ಷ್ಮಣದಾಸ್ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಸಾಂಸ್ಕೃತಿಕ ಚಟುವಟಿಕೆಗಳ ಘಟಕ ಆಯೋಜಿಸಿದ್ದ ಅಂತರ ವಿಭಾಗಗಳ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ಯಾವುದೇ ಕ್ಷೇತ್ರವನ್ನುಆಯ್ಕೆ ಮಾಡಿಕೊಂಡರು ಶ್ರದ್ಧೆ, ಭಕ್ತಿ ಬಹಳ ಮುಖ್ಯ. ನಮ್ಮ ದೇಶದ ಸಂಸ್ಕೃತಿಯನ್ನು ನೆನಪಿಸುವ ಕಾರ್ಯ ಸಾಂಸ್ಕೃತಿಕ ಸ್ಪರ್ಧೆಗಳು ಮಾಡುತ್ತಿವೆ. ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಗುರುತಿಸಿಕೊಳ್ಳಲು ಒಂದು ಮುಕ್ತ ವೇದಿಕೆ ಸಿಗಬೇಕು ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ವಿವಿ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು, ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಾದ ಸಾಂಸ್ಕೃತಿಕ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸುವಲ್ಲಿ ಸಹಕಾರಿಯಾಗಿದೆ. ವಿದ್ಯಾರ್ಥಿಗಳಲ್ಲಿರುವ ಸಾಮರ್ಥ್ಯವನ್ನು ಹೊರತರುವ ವೇದಿಕೆ ರೂಪಿಸುವುದು ನಮ್ಮ ವಿಶ್ವವಿದ್ಯಾನಿಲಯದ ಕರ್ತವ್ಯ. ಕಲಿಕೆಯಲ್ಲಿ ಶ್ರದ್ಧೆ, ಮಹತ್ವದ್ದನ್ನು ಸಾಧಿಸುತ್ತೇನೆ ಎಂಬ ಗುರಿಇರಬೇಕು ಎಂದರು.ತುಮಕೂರು ವಿವಿ ವಿದ್ಯಾರ್ಥಿ ಕ್ಷೇಮಪಾಲನ ಘಟಕದ ನಿರ್ದೇಶಕ ಪ್ರೊ. ಬಸವರಾಜ ಜಿ. ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಸಾಮರ್ಥ್ಯ ಅನಾವರಣವಾಗಲು ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಇದೆ. ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಗೂ ಇದು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಅಂತರ್ ವಿಭಾಗಗಳ ಸಾಂಸ್ಕೃತಿಕ ಸ್ಪರ್ಧೆಗಳ ಅಂಗವಾಗಿ ಜಾನಪದ ನೃತ್ಯ, ಶಾಸ್ತ್ರೀಯ ನೃತ್ಯ(ಭರತನಾಟ್ಯ), ಕ್ವಿಜ್, ಸಿದ್ಧ ಭಾಷಣ ಸ್ಪರ್ಧೆ, ಚರ್ಚಾಸ್ಪರ್ಧೆ, ಏಕಾಂಕ ನಾಟಕ, ಸ್ಕಿಟ್, ಮೈಮ್, ಮಿಮಿಕ್ರಿ, ಪೈಂಟಿಂಗ್, ಕ್ಲೇ ಮಾಡೆಲಿಂಗ್, ಕಾರ್ಟೂನ್, ರಂಗೋಲಿ, ಫೋಟೋಗ್ರಫಿ, ಶಾಸ್ತ್ರೀಯ ಸಂಗೀತ, ಸಂಗೀತ ವಾದ್ಯಗಳನ್ನು ನುಡಿಸುವುದು, ಭಾವಗೀತೆ, ಪಾಶ್ಚಾತ್ಯ ಸಂಗೀತ, ಭಾರತೀಯ ಹಾಗೂ ಪಾಶ್ಚಾತ್ಯ ಸಮೂಹ ಗಾಯನ ಸ್ಪರ್ಧೆಗಳನ್ನು ನಡೆಸಲಾಯಿತು.ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್ ಕೆ., ಸಾಂಸ್ಕೃತಿಕ ಚಟುವಟಿಕೆಗಳ ಘಟಕದ ಸಂಯೋಜಕ ಡಾ. ದೇವರಾಜು ಎಸ್. ಉಪಸ್ಥಿತರಿದ್ದರು.