ವಿಧಾನಸೌಧ ಬಳಿ ಭುವನೇಶ್ವರಿ ಪ್ರತಿಮೆಗೆ ಇಂದು ಶಂಕು

| Published : Jun 20 2024, 01:00 AM IST

ಸಾರಾಂಶ

ವಿಧಾನಸೌಧದ ಆವರಣದಲ್ಲಿ ನಾಡದೇವತೆ ಭುವನೇಶ್ವರಿ ದೇವಿಯ 25 ಅಡಿಯ ಕಂಚಿನ ಪ್ರತಿಮೆ ಸ್ಥಾಪನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಭೂಮಿ ಪೂಜೆ.

ಕನ್ನಡಪ್ರಭ ವಾರ್ತೆ ಬೆಂಗಳೂರುವಿಧಾನಸೌಧದ ಆವರಣದಲ್ಲಿ ನಾಡದೇವತೆ ಭುವನೇಶ್ವರಿ ದೇವಿಯ 25 ಅಡಿಯ ಕಂಚಿನ ಪ್ರತಿಮೆ ಸ್ಥಾಪನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ (ಜೂನ್‌ 20) ಭೂಮಿಪೂಜೆ ನೆರವೇರಿಸಲಿದ್ದಾರೆ. ಮೈಸೂರು ರಾಜ್ಯವು ಕರ್ನಾಟಕ ಎಂದು ಮರುನಾಮಕರಣವಾಗಿ 2023 ನವೆಂಬರ್ 1ಕ್ಕೆ 50 ವರ್ಷ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ‘ಕರ್ನಾಟಕ ಸಂಭ್ರಮ 50’ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಅಭಿಯಾನದ ಅಂಗವಾಗಿ ವಿಧಾನಸೌಧದ ಆವರಣದಲ್ಲಿ ನಾಡದೇವಿ ಭುವನೇಶ್ವರಿ ದೇವಿಯ ಕಂಚಿನ ಪ್ರತಿಮೆ ಸ್ಥಾಪಿಸಲು ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಅಂದಾಜು 21.24 ಕೋಟಿ ರು.ವೆಚ್ಚದಲ್ಲಿ ಕಂಚಿನ ಪ್ರತಿಮೆ ನಿರ್ಮಾಣವಾಗಲಿದ್ದು, ನವೆಂಬರ್‌ 1ರೊಳಗೆ ಯೋಜನೆ ಪೂರ್ಣಗೊಳಿಸುವ ಗುರಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊಂದಿದೆ. ಈಗಾಗಲೇ ಭುವನೇಶ್ವರಿ ದೇವಿಯ ಪ್ರತಿಮೆ ಸ್ಥಾಪನೆ ಸಂಬಂಧ ಎಸ್‌.ಶಿವರಾಜು ಎನ್ನುವ ಗುತ್ತಿಗೆದಾರರು ಮತ್ತು ಗೊಂಬೆ ಮನೆ ಕೆ.ಶ್ರೀಧರಮೂರ್ತಿ ಎಂಬ ಶಿಲ್ಪಿಗಳಿಗೆ ಜವಾಬ್ದಾರಿ ವಹಿಸಲಾಗಿದೆ. ನಿಗದಿತ ಅವಧಿಯಲ್ಲಿ ಪೂರ್ಣಗೊಂಡ ಕಂಚಿನ ಪ್ರತಿಮೆಯನ್ನು ವಿಧಾನಸೌಧದ ಪಶ್ಚಿಮ ದಿಕ್ಕಿನ ಗೇಟ್‌ ನಂ.1 ಮತ್ತು 2 ನಡುವೆ ಇರುವ ವಾಹನ ನಿಲುಗಡೆ ಸ್ಥಳದಲ್ಲಿ ಅನಾವರಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಹೀಗಿರಲಿದೆ ಕಂಚಿನ ಪ್ರತಿಮೆ ರಾಜ್ಯ ಸರ್ಕಾರ 2022ರಲ್ಲಿ ನಾಡದೇವಿಯ ಪ್ರಮಾಣಿತ ಹಾಗೂ ಅಧಿಕೃತ ಚಿತ್ರ ರಚಿಸಬೇಕೆಂದು ಲಲಿತ ಕಲಾ ಅಕಾಡೆಮಿಯ ಅಧ್ಯಕ್ಷರಾಗಿದ್ದ ಡಿ.ಮಹೇಂದ್ರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಈ ಸಮಿತಿ ಕಲಾವಿದರಾದ ಕೆ.ಸೋಮಶೇಖರ್‌ ರಚಿಸಿದ ಚಿತ್ರದ ಜಾರಿಗೆ ಶಿಫಾರಸು ಸಲ್ಲಿಸಿತ್ತು. ಅದೇ ಚಿತ್ರಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಈ ಕಲಾಕೃತಿಯಲ್ಲಿ ನಾಡದೇವಿಯು ಕುಳಿತಿರುವ ಭಂಗಿಯಲ್ಲಿ ಇದೆ. ದೇವಿಯ ಹಿನ್ನೆಲೆಯಲ್ಲಿ ಕರ್ನಾಟಕದ ನಕ್ಷೆ, ಮುಖದಲ್ಲಿ ಸ್ವಾಭಾವಿಕ ಸೌಂದರ್ಯ ಮತ್ತು ದೈವಿ ಭಾವವಿದೆ. ದ್ವಿಭುಜ ಅಂದರೆ ಎರಡು ಕೈಗಳಿದ್ದು, ಬಲಗೈಯಲ್ಲಿ ಅಭಯ ಮುದ್ರೆ, ಎಡಗೈನಲ್ಲಿ ತಾಳೆಗರಿ(ಕನ್ನಡ ಭಾಷಾ ಸಂಪತ್ತು, ಜ್ಞಾನ ಸಮೃದ್ಧಿ) ಇರುವಂತೆ ಚಿತ್ರಿಸಲಾಗಿದೆ. ದೇವಿಯ ಎಡ ಭುಜದ ಮೇಲೆ ಕನ್ನಡ ಧ್ವಜ ರಾರಾಜಿಸುತ್ತಿದೆ. ಈ ಕಲಾಕೃತಿಯಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭುವನೇಶ್ವರಿಯ ಕಂಚಿನ ಪ್ರತಿಮೆ ನಿರ್ಮಿಸಲು ನಿರ್ಧರಿಸಿದೆ.ಪ್ರತಿಮೆ ನಿರ್ಮಾಣದ ಕಾಮಗಾರಿ:

ಭುವನೇಶ್ವರಿಯ ಕಂಚಿನ ಪ್ರತಿಮೆ ಎತ್ತರ 25 ಅಡಿ ಇರಲಿದೆ. ಕಂಚಿನ ಕರ್ನಾಟಕ ನಕ್ಷೆಯ ಉಬ್ಬು ಶಿಲ್ಪದ ಎತ್ತರ 30 ಅಡಿ, ಒಟ್ಟಾರೆ ಎತ್ತರ ನೆಲಮಟ್ಟದಿಂದ 41 ಅಡಿ ಇರಲಿದೆ. ಪ್ರತಿಮೆಯ ಕಲ್ಲಿನ ಪೀಠದ ಉದ್ದಳತೆ ಮತ್ತು ಎತ್ತರ 20.60 ಅಡಿ ಮತ್ತು 29 ಅಡಿ ಹಾಗೂ 6 ಅಡಿ ನಿರ್ಮಾಣಗೊಳ್ಳಲಿದೆ. ಭುವನೇಶ್ವರಿ ಪ್ರತಿಮೆ ಹಾಗೂ ಕರ್ನಾಟಕ ನಕ್ಷೆಯ ಒಟ್ಟು ತೂಕ 31.50 ಟನ್‌ ಇರಲಿದೆ. ಭುವನೇಶ್ವರಿ ದೇವಿಯ ಒಟ್ಟು ವಿಸ್ತೀರ್ಣ (ಫೆಡ್ಟಾಲ್‌, ಪಾತ್‌ ವೇ ಮತ್ತು ಉದ್ಯಾನ ವನ ಸೇರಿದಂತೆ ) 4500 ಚದರ ಮೀಟರ್‌ ಇದೆ.

ಕಲ್ಲು ಕಟ್ಟಡದ ಪೀಠವು ಗ್ರೇ ಗ್ರಾನೈಟ್‌ ಕಲ್ಲಿನ ಹೊಯ್ಸಳ ಶೈಲಿಯ ಪೀಠ ಮತ್ತು ಪ್ರದಕ್ಷಣ ಪಥದ ಸುತ್ತ ಕರ್ಣಕೂಡ ಮತ್ತು ಅಲಂಕಾರಿಕ ಕಲ್ಲಿನ ಕೈಪಿಡಿ ನಿರ್ಮಿಸಲು ಉದ್ದೇಶಿಸಲಾಗಿದೆ.