ಸಾರಾಂಶ
ಸಮ್ಮೇಳನವನ್ನು ಬೆಳಗ್ಗೆ 10 ಗಂಟೆಗೆ ಮೈಸೂರು ಸಂಸದ ಯದುವೀರ್ ಒಡೆಯರ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಹಿಂದುಳಿದ ಮೋರ್ಚಾದ ಅಧ್ಯಕ್ಷ ವಿಜಯ್ ಕುಮಾರ್ ಕೊಡವೂರು ವಹಿಸಲಿದ್ದು, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಉಪಸ್ಥಿತರಿರಲಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಕರಾವಳಿಯ ಸಾಹಿತಿಗಳು - ಕಲಾವಿದರು - ಲೇಖಕರು - ಕವಿಗಳು - ಚುಟುಕು ಬರಹಗಾರರ ಸಮ್ಮೇಳನವನ್ನು ಸೆ.29ರಂದು ಬೆಳಗ್ಗೆ ನಗರದ ಕುಂಜಿಬೆಟ್ಟುವಿನ ಶಾರದಾ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ.ಈ ಬಗ್ಗೆ ಬಿಜೆಪಿ ಹಿಂದುಳಿದ ಮೋರ್ಚಾದ ಅಧ್ಯಕ್ಷ ವಿಜಯ್ ಕುಮಾರ್ ಕೊಡವೂರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ದೇಶದ ವಿಚಾರ ಬಂದಾಗ ಸಮಾಜದ ವಿವಿಧ ಕ್ಷೇತ್ರಗಳ ಜನರು ಏನು ಮಾಡಬೇಕು, ಯಾವ ನಿಲುವು ತಳೆಯಬೇಕು, ಹಿಂದುತ್ವದ ವಿಷಯದಲ್ಲಿ ಸಾಹಿತಿಗಳು, ಕಲಾವಿದರು, ವಿವಿಧ ವೃತ್ತಿನಿರತರು ಹೇಗೆ ತಮ್ಮನ್ನು ತೊಡಗಿಸಿಕೊಳ್ಳಬೇಕು ಎನ್ನುವುದನ್ನು ಚರ್ಚಿಸಲು ಮತ್ತು ಪ್ರೇರೇಪಿಸಲು ಈ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ ಎಂದವರು ಹೇಳಿದರು.ಸಮ್ಮೇಳನವನ್ನು ಬೆಳಗ್ಗೆ 10 ಗಂಟೆಗೆ ಮೈಸೂರು ಸಂಸದ ಯದುವೀರ್ ಒಡೆಯರ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಹಿಂದುಳಿದ ಮೋರ್ಚಾದ ಅಧ್ಯಕ್ಷ ವಿಜಯ್ ಕುಮಾರ್ ಕೊಡವೂರು ವಹಿಸಲಿದ್ದು, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಉಪಸ್ಥಿತರಿರಲಿದ್ದಾರೆ.
ಸಮ್ಮೇಳನದಲ್ಲಿ ಎರಡು ಗೋಷ್ಠಿಗಳು ನಡೆಯಲಿವೆ. 11 ಗಂಟೆಗೆ ಮೊದಲ ಗೋಷ್ಠಿಯಲ್ಲಿ ‘ಬದಲಾದ ರಾಜಕಾರಣದಿಂದ ದಮನಗೊಳ್ಳುತ್ತಿರುವ ಹಿಂದೂಗಳ ಬದುಕು - ಸಾಹಿತ್ಯ’ ವಿಷಯದ ಕುರಿತಾಗಿ ಬರಹಗಾರ ಪ್ರೇಮ್ ಶೇಖರ್ ಹಾಗೂ ಚಿಂತಕ ದಯಾನಂದ್ ಕತ್ತಲ್‌ಸಾರ್ ಸಂವಾದ ನಡೆಸಲಿದ್ದಾರೆ.ಮಧ್ಯಾಹ್ನ 12 ಗಂಟೆಗೆ ಎರಡನೇ ಗೋಷ್ಠಿಯಲ್ಲಿ ‘ಭಯೋತ್ಪಾದನೆಯಲ್ಲಿ ನಲುಗುತ್ತಿರುವ ಹಿಂದುತ್ವ’ ವಿಷಯದ ಕುರಿತಾಗಿ ವಾಗ್ಮಿ ಡಾ. ಆರತಿ ಬಿ.ವಿ. ಮತ್ತು ಸಂವೇದನಾ ಫೌಂಡೇಶನ್ ಸಂಸ್ಥಾಪಕ ಪ್ರಕಾಶ್ ಮಲ್ಪೆ ಸಂವಾದಕರಾಗಲಿದ್ದಾರೆ. ಚಿಕ್ಕಮಗಳೂರಿನ ತನ್ಮಯಿ ಸಮನ್ವಯಕಾರರಾಗಲಿದ್ದಾರೆ ಎಂದವರು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ರವೀಂದ್ರ ತಿಂಗಳಾಯ, ಸುರೇಂದ್ರ ಕುಲಾಲ್, ಭಾರತಿ ಚಂದ್ರಶೇಖರ್, ಅರುಣ್ ಬಾಣ, ಆದರ್ಶ ನಾಯರಿ ಉಪಸ್ಥಿತರಿದ್ದರು.