ಸಾರಾಂಶ
ಶೀಘ್ರದಲ್ಲೇ ಅಂತರ್ಜಾತಿ ಮತ್ತು ಅಂತರ ಧರ್ಮೀಯ ವಿವಾಹಿತರ ಸಮಾವೇಶ ಆಯೋಜಿಸಲು ಚಿಂತಕರ ಸಮ್ಮುಖದಲ್ಲಿ ನಿರ್ಣಯಿಸಲಾಗಿದೆ. ಇವತ್ತಿನ ಜಾತಿ ವ್ಯವಸ್ಥೆಯನ್ನು ಸಡಿಲಗೊಳಿಸಲು ಅಂತರ್ಜಾತಿ ಮತ್ತು ಅಂತರ ಧರ್ಮೀಯ ವಿವಾಹ ಪ್ರೋತ್ಸಾಹಿಸಬೇಕಿದೆ. ಇತ್ತೀಚಿಗೆ ಮರ್ಯಾದೆಗೇಡು ಹತ್ಯೆಗಳು ಹೆಚ್ಚಾಗುತ್ತಿದ್ದು ಶ್ರೀ ಸಾಮಾನ್ಯರಿಗೆ ತಿಳವಳಿಕೆ ನೀಡಬೇಕಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ನೇತೃತ್ವದ ಜನಸ್ಪಂದನ ಟ್ರಸ್ಟ್ ಹಾಗೂ ಮಾನವ ಮಂಟಪ ಸಹಭಾಗಿತ್ವದಲ್ಲಿ ಕುವೆಂಪು ನಗರದ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪದಲ್ಲಿ ಸಮಾನ ಮನಸ್ಕರು ಮತ್ತು ಪ್ರಗತಿಪರ ಚಿಂತಕರ ಉಪಸ್ಥಿತಿಯಲ್ಲಿ ಅಂತರ್ಜಾತಿ ವಿವಾಹಿತರನ್ನು ಪ್ರೋತ್ಸಾಹಿಸುವ ಮತ್ತು ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಲು ಚಿಕ್ಕಮ್ಮಾನಿಕೇತನ ಕಲ್ಯಾಣಮಂಟಪದಲ್ಲಿ ಸಭೆ ಆಯೋಜಿಸಲಾಗಿತ್ತು.ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಮಾತನಾಡಿ, ಶೀಘ್ರದಲ್ಲೇ ರಾಜ್ಯಾದ್ಯಂತ ಅಂತರ್ಜಾತಿ ಮತ್ತು ಅಂತರ್ಧರ್ಮೀಯ ವಿವಾಹಿತರನ್ನು ಸಂಘಟಿಸಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಗಾಗಿ ಸರ್ಕಾರದಲ್ಲಿ ಒತ್ತಾಯಿಸುವ ನಿಟ್ಟಿನಲ್ಲಿ ರಾಜ್ಯ ಮತ್ತು ಪ್ರತಿ ಜಿಲ್ಲೆಗಳಲ್ಲೂ ಪ್ರವಾಸ ಮಾಡಿ ಸಂಘಟಿಸಲು ತೀರ್ಮಾನಿಸಲಾಯಿತು ಎಂದು ತಿಳಿಸಿದರು.
ಶೀಘ್ರದಲ್ಲೇ ಅಂತರ್ಜಾತಿ ಮತ್ತು ಅಂತರ ಧರ್ಮೀಯ ವಿವಾಹಿತರ ಸಮಾವೇಶ ಆಯೋಜಿಸಲು ಚಿಂತಕರ ಸಮ್ಮುಖದಲ್ಲಿ ನಿರ್ಣಯಿಸಲಾಗಿದೆ. ಇವತ್ತಿನ ಜಾತಿ ವ್ಯವಸ್ಥೆಯನ್ನು ಸಡಿಲಗೊಳಿಸಲು ಅಂತರ್ಜಾತಿ ಮತ್ತು ಅಂತರ ಧರ್ಮೀಯ ವಿವಾಹ ಪ್ರೋತ್ಸಾಹಿಸಬೇಕಿದೆ. ಇತ್ತೀಚಿಗೆ ಮರ್ಯಾದೆಗೇಡು ಹತ್ಯೆಗಳು ಹೆಚ್ಚಾಗುತ್ತಿದ್ದು ಶ್ರೀ ಸಾಮಾನ್ಯರಿಗೆ ತಿಳವಳಿಕೆ ನೀಡಬೇಕಿದೆ. ಆ ದಿಕ್ಕಿನಲ್ಲಿ ಈ ವಿಷಯದ ಬಗ್ಗೆ ಹೆಚ್ಚು ಹೆಚ್ಚು ವಿಚಾರ ಸಂಕಿರಣ, ಚರ್ಚೆಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.ಅಂತರ್ಜಾತಿ ಮತ್ತು ಅಂತರ ಧರ್ಮೀಯ ವಿವಾಹಿತರ ಪರವಾಗಿ ಸಮಾಜದಲ್ಲಿ ಗಟ್ಟಿ ಧ್ವನಿಯಾಗಿ ನಾವೆಲ್ಲರೂ ನಿಲ್ಲಬೇಕಿದೆ ಎಂದು ಅಭಿಪ್ರಾಯಪಟ್ಟರು.
ಅಂತಹ ಸಂದರ್ಭದಲ್ಲಿ ನೆರವು ಮತ್ತು ಸಲಹೆ, ರಕ್ಷಣೆ, ಕಾನೂನಿನ ನೆರವು ನೀಡಲು ವೆಬ್ ಸೈಟ್ ಬಿಡುಗೊಡೆಗೊಂಡಿದ್ದು ಅದರ ವಿಳಾಸ www.janaspandana.org.in ಅಥವಾ ಮೊ. 90353 94274 ಸಂಪರ್ಕಿಸಿ ನೋಂದಾಯಿಸಿಕೊಳ್ಳಲು ತಿಳಿಸಲಾಗಿದೆ ಎಂದು ತಿಳಿಸಿದರು.ಸಭೆಯಲ್ಲಿ ಚಿಂತಕ ಸ್ವಾಮಿ ಆನಂದ್, ಪ್ರೊ. ಭದ್ರಪ್ಪ, ಪ್ರೊ. ಕಾಳಚನ್ನೇಗೌಡ, ಮೈಲ್ಯಾಕ್ ಮಾಜಿ ಅಧ್ಯಕ್ಷ ಎಚ್.ಎ. ವೆಂಕಟೇಶ್, ಹೋರಾಟಗಾರ ಉಗ್ರ ನರಸಿಂಹೇಗೌಡ, ಒಡನಾಡಿ ಸೇವಾ ಸಂಸ್ಥೆಯ ಸ್ಟ್ಯಾನ್ಲಿ, ಧನಂಜಯ ಎಲಿಯೂರು, ಭೈರಪ್ಪ, ಮಹ್ಮದ್ ಫಾರೂಖ್, ನದೀಂ, ಅಭಿಷೇಕ್ ಇದ್ದರು.