ಸಾರಾಂಶ
ಗೊ.ರು.ಚನ್ನಬಸಪ್ಪ ಅವರು ಆಗಮಿಸುತ್ತಿದ್ದಂತೆ ಪೂರ್ಣಕುಂಭದೊಂದಿಗೆ ನಾದಸ್ವರ, ಡೊಳ್ಳು ಕುಣಿತ, ಪೂಜಾ ಕುಣಿತ ಒಳಗೊಂಡಂತೆ ಜಾನಪದ ಕಲಾತಂಡಗಳಿಂದ ಬರಮಾಡಿಕೊಳ್ಳಲಾಯಿತು.
ಮಂಡ್ಯ : 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾದ ಜಾನಪದ ವಿದ್ವಾಂಸರು, ನಾಡೋಜ ಗೊ.ರು. ಚನ್ನಬಸಪ್ಪ ಅವರು ಸಕ್ಕರೆ ನಾಡಿಗೆ ಆಗಮಿಸಿದಾಗ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಸಮ್ಮೇಳನ ನಡೆಯವ ಸ್ಯಾಂಜೋ ಆಸ್ಪತ್ರೆ ಸಮೀಪ ಗೊ.ರು.ಚನ್ನಬಸಪ್ಪ ಅವರು ಆಗಮಿಸುತ್ತಿದ್ದಂತೆ ಪೂರ್ಣಕುಂಭದೊಂದಿಗೆ ನಾದಸ್ವರ, ಡೊಳ್ಳು ಕುಣಿತ, ಪೂಜಾ ಕುಣಿತ ಒಳಗೊಂಡಂತೆ ಜಾನಪದ ಕಲಾತಂಡಗಳಿಂದ ಬರಮಾಡಿಕೊಳ್ಳಲಾಯಿತು.
ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಸಮ್ಮೇಳನಾಧ್ಯಕ್ಷರಿಗೆ ಮೈಸೂರು ಮಲ್ಲಿಗೆ ಹಾರ, ಕನ್ನಡದ ಶಾಲು ಹಾಕಿ, ಹೂಗುಚ್ಛ ನೀಡಿ ಸಕಲ ಗೌರವಗಳೊಂದಿಗೆ ಸ್ವಾಗತಿಸಿದರು.
ಈ ವೇಳೆ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರಾದ ನಾಡೋಜ ಮಹೇಶ್ ಜೋಶಿ, ಶಾಸಕರಾದ ಪಿ.ಎಂ. ನರೇಂದ್ರಸ್ವಾಮಿ, ಪಿ. ರವಿಕುಮಾರ್, ರಮೇಶ ಬಂಡಿಸಿದ್ದೇಗೌಡ, ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ. ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಂಚಾಲಕಿ ಮೀರಾ ಶಿವಲಿಂಗಯ್ಯ ಅವರು ಕೂಡ ಹೂಗುಚ್ಛ ನೀಡಿ ಸಕ್ಕರೆ ನಾಡು- ಜನಪದ ಬೀಡುಗೆ ಅದ್ಧೂರಿಯಾಗಿ ಬರಮಾಡಿಕೊಂಡರು.
ಸಮ್ಮೇಳನಾಧ್ಯಕ್ಷರು ಮಂಡ್ಯ ನಗರ ಪ್ರವೇಶಿಸುತ್ತಿದ್ದಂತೆ ಬೆಂಗಳೂರು ಮೈಸೂರು ರಸ್ತೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಸಮ್ಮೇಳನಾಧ್ಯಕ್ಷರಿಗೆ ಹೂ ನೀಡಿ ಸ್ವಾಗತ ಕೋರಿದರು. ನಂತರ ಜಿಲ್ಲಾಧಿಕಾರಿ ನಿವಾಸಕ್ಕೆ ಕರೆದೊಯ್ದು ಅತಿಥಿ ಸತ್ಕಾರ ನೀಡಲಾಯಿತು.
ನಾಡೋಜ ಡಾ.ಚನ್ನಬಸಪ್ಪರಿಗೆ ಅದ್ಧೂರಿ ಸ್ವಾಗತ
ಮದ್ದೂರು: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ನಾಡೋಜ ಡಾ.ಗೊ.ರು. ಚನ್ನಬಸಪ್ಪ ಅವರಿಗೆ ಗುರುವಾರ ಪಟ್ಟಣದಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು.
ಬೆಂಗಳೂರಿನಿಂದ ಮಧ್ಯಾಹ್ನ 3.30ರ ಸುಮಾರಿಗೆ ಪ್ರವಾಸಿ ಮಂದಿರದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತಕ್ಕೆ ಆಗಮಿಸಿದ ಗೊರುಚ ಅವರಿಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕೆ.ಟಿ.ಚಂದು, ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್. ಸುನಿಲ್ ಕುಮಾರ್, ಮಾಜಿ ಅಧ್ಯಕ್ಷ ಅಪೂರ್ವ ಚಂದ್ರ ಮತ್ತು ಪದಾಧಿಕಾರಿಗಳು ಗೊರುಚ ಅವರಿಗೆ ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ ಮಾಲಾರ್ಪಣೆ ಮಾಡಿ ಸಾಂಪ್ರದಾಯಕ ಸ್ವಾಗತ ಕೋರಿದರು.
ಬಳಿಕ ಕನ್ನಡಪ್ರಭದೊಂದಿಗೆ ಮಾತನಾಡಿದ ಗೊ.ರು. ಚನ್ನಬಸಪ್ಪ ಅವರು, ಕನ್ನಡ ಶ್ರೀಮಂತ ಭಾಷೆಯಾಗಿದೆ. ಕರ್ನಾಟಕದಲ್ಲಿ ನೆಲಸುವ ಪ್ರತಿಯೊಬ್ಬ ಕನ್ನಡೇತರರು ಕನ್ನಡ ಭಾಷೆ ಕಲಿಯಲು ಆಸಕ್ತಿ ಹೊಂದಬೇಕು ಎಂದರು.
ಈ ವೇಳೆ ಬಿಇಒ ಸಿ.ಕಾಳಿರಯ್ಯ, ತಾಲೂಕು ಕಸಾಪ ಪದಾಧಿಕಾರಿಗಳಾದ ಕೆ.ಪಿ.ಶ್ರೀಧರ, ಸೊಳ್ಳೆಪುರ ರಮೇಶ್, ಚನ್ನೇಗೌಡ ವಿದ್ಯಾ ಸಂಸ್ಥೆಯ ಶಿಕ್ಷಕ ವೃಂದ ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.