ಮುಸ್ಲಿಂಮರ ಹೆಸರಲ್ಲಿ ಬಿಜೆಪಿಯಿಂದ ಗೊಂದಲ ಸೃಷ್ಟಿ: ಸಿ.ಎಂ. ಇಬ್ರಾಹಿಂ

| Published : Dec 03 2024, 12:30 AM IST

ಮುಸ್ಲಿಂಮರ ಹೆಸರಲ್ಲಿ ಬಿಜೆಪಿಯಿಂದ ಗೊಂದಲ ಸೃಷ್ಟಿ: ಸಿ.ಎಂ. ಇಬ್ರಾಹಿಂ
Share this Article
  • FB
  • TW
  • Linkdin
  • Email

ಸಾರಾಂಶ

ವಕ್ಫ್‌ ಕಾಯ್ದೆ ಜಾರಿ ತಂದಿದ್ದು ಕಾಂಗ್ರೆಸ್ ಅಲ್ಲ, ಇದನ್ನು ಜಾರಿಗೆ ತಂದವರು ಬ್ರಿಟಿಷರು. ಯಾವುದೇ ಆಸ್ತಿಯನ್ನು ವಕ್ಫ್‌ ಮಾಡಲು ಆಗುವುದಿಲ್ಲ. ಸಚಿವ ಜಮೀರ್ ಅಹ್ಮದ್ ಖಾನ್‌ ಅವರು ರಾಜ್ಯಾದ್ಯಂತ ವಕ್ಫ್‌ ಕುರಿತು ಲೋಕ್ ಅದಾಲತ್ ಮಾಡಲು ಹೋಗಿ ಬೀದಿಯಲ್ಲಿರುವ ಕಸವನ್ನು ಮೈಮೇಲೆ ಹಾಕಿಕೊಂಡರು.

ಹುಬ್ಬಳ್ಳಿ:

ರಾಜ್ಯ ರಾಜಕಾರಣ ಇಂದು ಹೊಲಸೆದ್ದು ಹೋಗಿದೆ. ಬಿಜೆಪಿ ಇಷ್ಟು ದಿನ ಶ್ರೀರಾಮನ ಹೆಸರಲ್ಲಿ ಮತ ಕೇಳುತ್ತಿದ್ದರು. ಈಗ ಮುಸ್ಲಿಂಮರ ಹೆಸರಲ್ಲಿ ಗೊಂದಲ ಸೃಷ್ಟಿಸುವ ಮೂಲಕ ಮತಕೇಳುತ್ತಿದ್ದಾರೆ. ಇಂತಹ ಕೆಟ್ಟ ಪರಿಸ್ಥಿತಿ ಬಿಜೆಪಿಗೆ ಬಂದಿರುವುದು ದುರ್ದೈವದ ಸಂಗತಿ ಎಂದು ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಆರೋಪಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಇಬ್ಬರ ಗಲಾಟೆಯಿಂದಾಗಿ ಬೇಸತ್ತು ಹೋಗಿದ್ದಾರೆ. ಮತ್ತೊಂದೆಡೆ ವಕ್ಫ್‌ ವಿಚಾರವಾಗಿ ಬಿಜೆಪಿ ಸಾಕಷ್ಟು ಗೊಂದಲ ಸೃಷ್ಟಿಸುತ್ತಿದೆ. ಇದರಲ್ಲಿ ಏನೂ ವಿಷಯವಿಲ್ಲದಿದ್ದರೂ ಬಿಜೆಪಿಯವರು ಸುಮ್ಮನೆ ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದರು.

ಜನರ ದಿಕ್ಕು ತಪ್ಪಿಸುತ್ತಿದೆ ಬಿಜೆಪಿ:

ವಕ್ಫ್‌ ಕಾಯ್ದೆ ಜಾರಿ ತಂದಿದ್ದು ಕಾಂಗ್ರೆಸ್ ಅಲ್ಲ, ಇದನ್ನು ಜಾರಿಗೆ ತಂದವರು ಬ್ರಿಟಿಷರು. ಯಾವುದೇ ಆಸ್ತಿಯನ್ನು ವಕ್ಫ್‌ ಮಾಡಲು ಆಗುವುದಿಲ್ಲ. ಸಚಿವ ಜಮೀರ್ ಅಹ್ಮದ್ ಖಾನ್‌ ಅವರು ರಾಜ್ಯಾದ್ಯಂತ ವಕ್ಫ್‌ ಕುರಿತು ಲೋಕ್ ಅದಾಲತ್ ಮಾಡಲು ಹೋಗಿ ಬೀದಿಯಲ್ಲಿರುವ ಕಸವನ್ನು ಮೈಮೇಲೆ ಹಾಕಿಕೊಂಡರು. ಉಪಚುನಾವಣೆ ಇದ್ದ ಹಿನ್ನೆಲೆಯಲ್ಲಿ ಈ ವಕ್ಫ್‌ ವಿಷಯ ಮುನ್ನಲೆಗೆ ಬಂದಿತು. ವಕ್ಫ್‌ ಹೆಸರಲ್ಲಿ ಜನರ ದಿಕ್ಕು ತಪ್ಪಿಸುವ ಕಾರ್ಯ ಬಿಜೆಪಿ ಮಾಡುತ್ತಿದೆ. ರಾಜ್ಯದ ಬಿಜೆಪಿ ನಾಯಕರು ಹೈಕಮಾಂಡ್‌, ಅಮಿತಾ ಶಾ ಅವರನ್ನು ಒಲಿಸಿಕೊಳ್ಳುವ ಸಲುವಾಗಿ ಹೈಕಮಾಂಡ್‌ ಎಂಬ ಹುಲಿ ಹಿಡಿಯಲು ವಕ್ಫ್‌ ಎಂಬ ಕುರಿ ಕಟ್ಟುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಮಹದಾಯಿ ಕುರಿತು ಚರ್ಚಿಸಿ:

ಶಿಗ್ಗಾಂವಿಯಲ್ಲಿ ಕಾಂಗ್ರೆಸ್‌ ಮುಸ್ಲಿಮರನ್ನು ನಿಲ್ಲಿಸಿರುವುದರಿಂದ ನಮ್ಮ ಅಭ್ಯರ್ಥಿ ಸೋಲು ಕಾಣಬೇಕಾಯಿತು ಎಂಬ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಇಬ್ರಾಹಿಂ, ಜೋಶಿ ಅವರೇ ಹಿಂದುತ್ವ ಕುರಿತು ಮಾತನಾಡುವುದರಿಂದ ಮತಗಳು ಬರುತ್ತವೆ ಎಂದುಕೊಂಡಿದ್ದರೆ ತಪ್ಪು. ಜನತೆಗೆ ನಿಮ್ಮ ಹಿಂದುತ್ವದ ಪದ ಕೇಳಿ ಸಾಕಾಗಿದೆ. ಇದನ್ನೆಲ್ಲ ಬಿಟ್ಟು ಮಹದಾಯಿ ಯೋಜನೆ ಕುರಿತು ಚರ್ಚಿಸಿ ಸಮಸ್ಯೆ ಪರಿಹರಿಸುವ ಕಾರ್ಯ ಮಾಡಲಿ. ಇದರಿಂದ ನಿಮಗೂ ಹಾಗೂ ರಾಜ್ಯದ ಜನತೆಗೂ ಸಹಕಾರಿಯಾಗಲಿದೆ ಎಂದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳಗೆ ಬಿಜೆಪಿಯಿಂದ ಶೋಕಾಸ್ ನೋಟಿಸ್ ಜಾರಿ ಮಾಡಿರುವ ಕುರಿತು, ಯತ್ನಾಳರಿಗೆ ನೋಟಿಸ್ ನೀಡುವುದರಿಂದ ಬಿಜೆಪಿಗೆ ಏನೂ ಪ್ರಯೋಜನವಾಗುವುದಿಲ್ಲ. ಈ ಹಿಂದೆ ಯಡಿಯೂರಪ್ಪ ಮೇಲೆ ಕ್ರಮಕೈಗೊಂಡರು. ಆಗ ಪಕ್ಷಕ್ಕೆ ಹಾನಿಯಾಗಿತ್ತು. ಇದನ್ನು ಬಿಎಸ್‌ವೈ ಸಾಬೀತು ಮಾಡಿ ತೋರಿಸಿದ್ದಾರೆ ಎಂದರು.

ಯತ್ನಾಳರನ್ನು ಹುಚ್ಚಾಸ್ಪತ್ರೆಗೆ ಸೇರಿಸಿ:

ಬಸವಣ್ಣನವರ ಬಗ್ಗೆ ಕೀಳಾಗಿ ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಇಬ್ರಾಹಿಂ, ಈ ಕೂಡಲೇ ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು. ಈಗಿನ ಘಟನೆಯನ್ನು ನೋಡಿದರೆ ಇವರೇ ಹೋಗಿ ಕೂಡಲಸಂಗಮದ ಹೊಳೆಗೆ ಹಾರುತ್ತಾರೆಯೋ ಎಂಬ ಅನುಮಾನ ಮೂಡಿದೆ. ಯತ್ನಾಳ ಅವರೇ ಇಷ್ಟೊಂದು ಪ್ರಮಾಣದ ಆಕ್ರೋಶಕ್ಕೆ ಒಳಗಾಗದಿರಿ. ಮೊದಲು ಸಿರಿಗೇರಿ ಮಠಕ್ಕೆ ಹೋಗಿ ಸಾಣೇಹಳ್ಳಿ ಶ್ರೀಗಳ ಹತ್ತಿರ ಕುಳಿತು ಬೆಳಗ್ಗೆ 3 ಗಂಟೆಗೆ ಎದ್ದು ತಣ್ಣೀರು ಸ್ನಾನ ಮಾಡಿ ಮಡಿ ಬಟ್ಟೆಯಲ್ಲಿ ಕುಳಿತು ಬಸವ ಆರಾಧನೆ ಮಾಡಿ. ಬಸವಣ್ಣನವರ ಕೃಪೆಯಿಂದ ನಿಮಗೆ ಜ್ಞಾನೋದಯವಾಗುತ್ತದೆ ಎಂದು ಸಲಹೆ ನೀಡಿದರು.