ನಗರಸಭೆ ಬಜೆಟ್‌ ಪೂರ್ವ ಸಭೆಯಲ್ಲಿ ಗೊಂದಲ

| Published : Feb 27 2025, 12:34 AM IST

ಸಾರಾಂಶ

ಸಭೆಯಲ್ಲಿ ಆಯ-ವ್ಯಯದ ವಿಷಯ ಬಂದಾಗ ಕಳೆದ ವರ್ಷ ೨ ಕೋಟಿಯ ಉಳಿತಾಯ ಬಜೆಟ್ ಮಂಡಿಸಲಾಗಿತ್ತು. ಆದರೆ ಪೌರಕಾರ್ಮಿಕರಿಗೆ ಸರಿಯಾಗಿ ಸಂಬಳ ಕೂಡ ನೀಡಲಿಲ್ಲ. ಮೂಲ ಸೌಕರ್ಯಗಳನ್ನು ಕೂಡ ಕಲ್ಪಿಸಲಾಗಿಲ್ಲ. ಹಾಗಾಗಿ ಕಳೆದ ವರ್ಷದ ಬಜೆಟ್ ಮೇಲೆ ಚರ್ಚೆಗಳು ನಡೆಯಲಿ, ಅದರಲ್ಲಿನ ತಪ್ಪು ಒಪ್ಪುಗಳನ್ನು ತಿದ್ದಿಕೊಂಡು ಈ ಸಾಲಿನ ಆಯವ್ಯಯದ ಬಗ್ಗೆ ಚರ್ಚಿಸಲು ಆಗ್ರಹ.

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ನಗರಸಭೆಯಲ್ಲಿ ೨೦೨೫-೨೬ನೇ ಸಾಲಿನ ಆಯ-ವ್ಯಯ ಪೂರ್ವಭಾವಿ ಸಭೆ ಹಾಗೂ ಇ-ಖಾತೆ ಅಭಿಯಾನದ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಇ-ಖಾತೆ ನೀಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಆದರೆ ಆಯವ್ಯಯದ ಬಗ್ಗೆ ಚರ್ಚೆ ನಡೆಯದೆ ಸಭೆ ಗೊಂದಲದಲ್ಲೇ ಕೊನೆಗೊಂಡಿತು.ನಗರಸಭೆ ಅಧ್ಯಕ್ಷ ಎಂ.ವಿ.ವೆಂಕಟಸ್ವಾಮಿ ಅಧ್ಯಕ್ಷತೆಯಲ್ಲಿ ನಗರಸಭೆ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕ್ಷೇತ್ರದ ಶಾಸಕ ಬಿ.ಎನ್. ರವಿಕುಮಾರ್, ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷೆ, ಸದಸ್ಯರು, ಅಧಿಕಾರಿಗಳು ಭಾಗವಹಿಸಿದ್ದರು. ಬಜೆಟ್‌ ಸಭೆಯಲ್ಲಿ ಗೊಂದಲ

ಸಭೆಯಲ್ಲಿ ಆಯ-ವ್ಯಯದ ವಿಷಯ ಬಂದಾಗ ಕಳೆದ ವರ್ಷ ೨ ಕೋಟಿಯ ಉಳಿತಾಯ ಬಜೆಟ್ ಮಂಡಿಸಲಾಗಿತ್ತು. ಆದರೆ ಪೌರಕಾರ್ಮಿಕರಿಗೆ ಸರಿಯಾಗಿ ಸಂಬಳ ಕೂಡ ನೀಡಲಿಲ್ಲ. ಮೂಲ ಸೌಕರ್ಯಗಳನ್ನು ಕೂಡ ಕಲ್ಪಿಸಲಾಗಿಲ್ಲ. ಹಾಗಾಗಿ ಕಳೆದ ವರ್ಷದ ಬಜೆಟ್ ಮೇಲೆ ಚರ್ಚೆಗಳು ನಡೆಯಲಿ, ಅದರಲ್ಲಿನ ತಪ್ಪು ಒಪ್ಪುಗಳನ್ನು ತಿದ್ದಿಕೊಂಡು ಈ ಸಾಲಿನ ಆಯವ್ಯಯದ ಬಗ್ಗೆ ಚರ್ಚಿಸೋಣ ಎಂದು ಸದಸ್ಯ ಅಪ್ಸರ್ ಪಾಷ ಸಭೆಯಲ್ಲಿ ಹೇಳಿದರು.ಪೌರಾಯುಕ್ತ ಮಂಜುನಾಥ್ ಅವರು ೨೦೧೭ ರಿಂದ ಪೌರಕಾರ್ಮಿಕರಿಗೆ ಸಾಕಷ್ಟು ಸಂಬಳ ಬಾಕಿ ಇತ್ತು. ಅದೆಲ್ಲವನ್ನೂ ನಾನು ಹಂತ ಹಂತವಾಗಿ ತೀರಿಸಿಕೊಂಡು ಬಂದಿದ್ದೇನೆ, ನನ್ನ ಅವಧಿಯಲ್ಲಿ ಯಾವುದೇ ಸಾಲ ಕೂಡ ಮಾಡಿಲ್ಲ ಎಂದು ವಿವರಿಸಿದರು.

ಅಷ್ಟರಲ್ಲಿ ಸದಸ್ಯ ಲಕ್ಷ್ಮಣ್, ನಗರಸಭೆ ನಿವೇಶನಗಳನ್ನು ಒತ್ತುವರಿ ಮಾಡಿಕೊಂಡಿದ್ದರೂ ನೀವು ಏನೂ ಮಾಡುತ್ತಿಲ್ಲ ಎಂದು ದೂರಿದರು. ಈ ಸಂದರ್ಭದಲ್ಲಿ ಮಾತಿನ ಜಟಾಪಟಿ ನಡೆದು ಸಭೆ ಗೊಂದಲದ ಗೂಡಾಯಿತು.