ಕನ್ನಡಪ್ರಭವಾರ್ತೆ ಸುಂಟಿಕೊಪ್ಪ

ಭಾರಿ ಮಳೆಯ ಸಂದರ್ಭ ರಜೆ ಘೋಷಿಸುವಲ್ಲಿ ವಿಳಂಬ ಮತ್ತು ಗೊಂದಲದ ನೀತಿ ಅನುಸರಿಸಲಾಗುತ್ತಿರುವ ಕುರಿತು ಪೋಷಕರು ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಾರಿಯ ಮಳೆಗಾಲ ವಿಳಂಬವಾಗಿ ಆರಂಭಗೊಂಡಿದ್ದು, ಕಳೆದ ೨ ದಿನಗಳಿಂದ ಮಳೆ ತೀವ್ರತೆ ಹೆಚ್ಚಿದೆ . ಈ ಮೊದಲು ಜಿಲ್ಲಾಡಳಿತ ನೇರವಾಗಿ ಜಿಲ್ಲೆಯಾದ್ಯಂತ ರಜೆ ಘೋಷಣೆ ಮಾಡುತ್ತಿತ್ತು. ಪ್ರಸ್ತುತ ದಕ್ಷಿಣ ಕೊಡಗು ಮತ್ತು ಉತ್ತರ ಕೊಡಗಿನ ಮಳೆ ಹಂಚಿಕೆಯಲ್ಲಿ ತೀವ್ರ ವ್ಯತ್ಯಾಸವಾಗಿದ್ದು, ಜಿಲ್ಲಾಡಳಿತವು ತಾಲೂಕು ದಂಡಾಧಿಕಾರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಸಮಾಲೋಚಿಸಿ ಶಾಲಾ ಮುಖ್ಯೋಪಾದ್ಯಾಯರು ರಜೆ ಕುರಿತ ತೀರ್ಮಾನವನ್ನು ತೆಗೆದುಕೊಳ್ಳುವಂತೆ ತೀರ್ಮಾನಿಸಲಾಗಿತ್ತು. ಆದರೆ ಪ್ರಸ್ತುತ ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ, ಅನುದಾನರಹಿತ ಶಿಕ್ಷಣ ಸಂಸ್ಥೆಗಳಲ್ಲಿ ರಜೆ ಘೋಷಣೆ ಕುರಿತು ಗೊಂದಲ ಎದುರಾಗಿದೆ. ಶುಕ್ರವಾರ ಜಿಲ್ಲೆಯಾದ್ಯಂತ ಮಳೆ ತೀವ್ರತೆ ಹೆಚ್ಚಿತು. ಆದರೆ ಕೇವಲ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕುಗಳಿಗೆ ಮಾತ್ರ ರಜೆ ಘೋಷಣೆಯಾಯಿತು. ಈ ನಡುವೆ ಕುಶಾಲನಗರ ತಾಲೂಕಿಗೆ ರಜೆ ಎಂದು ಘೋಷಿಸಿ ನಂತರ ಹಿಂಪಡೆಯಲಾಯಿತು. ಅಲ್ಲದೆ ರಾತ್ರಿ ವೇಳೆ ಶಾಲೆಗಳಿಗೆ ರಜೆ ಘೋಷಣೆ ಮಾಡುತ್ತಿದ್ದು, ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಜಿಲ್ಲಾಡಳಿತ, ತಾಲೂಕು ಆಡಳಿತವಾಗಲಿ ಈ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಈ ಬಗ್ಗೆ ಜಿಲ್ಲಾದ್ಯಂತ ಶಿಕ್ಷಣ ಸಂಸ್ಥೆಗಳು ಸರ್ಕಾರಿ ಶಾಲೆಯ ಮುಖ್ಯಸ್ಥರು ಶಿಕ್ಷಣ ಇಲಾಖೆಗೆ ವಸ್ತುನಿಷ್ಠ ವರದಿ ನೀಡಿದ್ದರೂ ಮೇಲಾಧಿಕಾರಿಗಳ ಬೇಜವಾಬ್ದಾರಿಯಿಂದ ರಜೆ ಘೋಷಣೆ ಕುರಿತು ಅರ್ಧಂಬರ್ಧ ಮಾಹಿತಿ ಬರುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಪ್ರಸಾರವಾಗುತ್ತಿರುವುದನ್ನು ಪೋಷಕರು ಮತ್ತು ಸಾರ್ವಜನಿಕರು ಉಲ್ಲೇಖಿಸಿದ್ದಾರೆ. ಭಾರಿ ಮಳೆ ವೇಳೆ ರಜೆ ನೀಡದಿದ್ದರೆ ಗುಡ್ಡಗಾಡು ಪ್ರದೇಶದಲ್ಲಿ ಶಾಲಾ ವಾಹನಗಳು ದುರಂತಕ್ಕೆ ಯಾರು ಹೊಣೆ ಎಂಬುದನ್ನು ಪೋಷಕರು ಮತ್ತು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.