ಸಾರಾಂಶ
ಕನಕಪುರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದ ಡಾ.ಸಿ.ಎನ್.ಮಂಜುನಾಥ್ ಅವರ ಅಭೂವಪೂರ್ವ ಗೆಲುವಿಗೆ ಶ್ರಮಿಸಿದ ಉಭಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಹಾಗೂ ಮತದಾರರಿಗೆ ಬಿಜೆಪಿ ನಗರ ಘಟಕದ ಅಧ್ಯಕ್ಷ ಮಂಜುನಾಥ್ ಅವರು ಕೃತಜ್ಞತೆ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಬಿಜೆಪಿ ಮತ್ತೊಮ್ಮೆ ಪ್ರಜ್ವಳಿಸಿದ್ದು, ಧೀಮಂತ ನಾಯಕ ನರೇಂದ್ರ ಮೋದಿ ಅವರು ಹ್ಯಾಟ್ರಿಕ್ ಪ್ರಧಾನಿಯಾಗಲಿದ್ದು ಕ್ಷೇತ್ರದ ನೂತನ ಸಂಸದ ಡಾ. ಮಂಜುನಾಥ್ ಮತ್ತು ಮೋದಿಯವರಿಗೆ ಅಭಿನಂದನೆಗಳನ್ನು ಅರ್ಪಿಸುತ್ತಿದ್ದೇವೆ. ಜಗತ್ತೇ ಭಾರತದತ್ತ ತಿರುಗಿ ನೋಡುವ ಕಾಲ ಬರಲಿದೆ ಎಂದು ಕಾಲಜ್ಞಾನಿ ನಾಷ್ಟ ರೋಡಾಮಸ್ ಭವಿಷ್ಯ ಹೇಳಿದ್ದು ನರೇಂದ್ರ ಮೋದಿ ಅವರಿಂದ ಅದು ನಿಜವಾಗುವ ಕಾಲ ಸನ್ನಿಹಿತವಾಗುತ್ತಿದೆ. ಮೂರನೇ ಬಾರಿಗೆ ಪ್ರಧಾನಿಯಾಗುತ್ತಿರುವ ನರೇಂದ್ರ ಮೋದಿಜಿ ಅಂತಹ ಆಡಳಿತ ಕೊಡಲಿದ್ದು ಭಾರತದಲ್ಲಿ ಸುವರ್ಣ ಯುಗ ಆರಂಭವಾಗಲಿದೆ ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಬಿಜೆಪಿಗೆ 2ನೇ ಗೆಲುವು:ಬಿಜೆಪಿ ಪಕ್ಷದಿಂದ 1998ರಲ್ಲಿ ಎಂ.ಶ್ರೀನಿವಾಸ್ ಗೆಲುವು ಸಾಧಿಸಿದ್ದರು. 2024 ಚುನಾವಣೆಯಲ್ಲಿ ಮಂಜುನಾಥ್ ಅವರು ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಎಲ್ಲ ಘಟಕದ ಮುಖಂಡರು, ಕಾರ್ಯಕರ್ತರು ಹಾಗೂ ಜೆಡಿಎಸ್ ಮುಖಂಡರು ಕಾರ್ಯಕರ್ತರು ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದರು. ನಮ್ಮೆಲ್ಲರ ಶ್ರಮದಿಂದ ಮಂಜುನಾಥ್ ಇಂತಹ ದೊಡ್ಡ ಮಟ್ಟದ ಗೆಲುವನ್ನು ಪಡೆದಿದ್ದಾರೆ. ಈವರೆಗೂ ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಹೊರತುಪಡಿಸಿ ಉಳಿದ ಪಕ್ಷಗಳ ಕಾರ್ಯಕರ್ತರು ಹಾಗು ಮುಖಂಡರು ಬೆಳೆಯುವುದು ಕಷ್ಟವಾಗಿತ್ತು. ಕಾಂಗ್ರೆಸ್ ನವರ ಅಟ್ಟಹಾಸ ಯಾವಾಗ ಕೊನೆಗೊಳ್ಳುತ್ತದೆ ಎಂದು ಕಾಯುತ್ತಿದ್ದ ನಮ್ಮ ಕೂಗನ್ನು ಕೇಳಿ ಧರ್ಮಸ್ಥಳದ ಶ್ರೀ ಮಂಜುನಾಥನೇ ಈ ಹೃದಯವಂತ ಮಂಜುನಾಥ್ ಅವರನ್ನು ಕಳುಹಿಸಿಕೊಟ್ಟಿದ್ದಾನೆ ಎಂದು ಹೇಳಿದರು. ಜಿಲ್ಲಾ ಉಪಾಧ್ಯಕ್ಷ ರಾಜೇಶ್ ಹಾಗೂ ಹಿರಿಯ ಮುಖಂಡ ಕಿಟ್ಟಣ್ಣ ಮಾತನಾಡಿ, ಈ ಚುನಾವಣೆಯಲ್ಲಿ ನಮ್ಮ ನಿರೀಕ್ಷೆಗೂ ಮೀರಿದ ಅಚ್ಚರಿಯ ಫಲಿತಾಂಶ ಬಂದಿದೆ. ಈ ಫಲಿತಾಂಶವನ್ನು ಯಾರು ಊಹಿಸಿರಲಿಲ್ಲ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಚುನಾವಣೆ ರಾಮ ರಾವಣನ ಸ್ಪರ್ಧೆ ಎಂದೇ ಬಿಂಬಿತವಾಗಿತ್ತು. ಅಂತಿಮವಾಗಿ ಸತ್ಯಕ್ಕೆ ಜಯ ಸಿಕ್ಕಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಮೊದಲ ಸಂಸತ್ ಸದಸ್ಯರಾಗಿದ್ದ ಎಂ.ಶ್ರೀನಿವಾಸ್ ಅವರು ಬೆಂಗಳೂರು ಮಾರ್ಗವಾಗಿ ತಮಿಳುನಾಡಿಗೆ ಸಂಪರ್ಕ ಕಲ್ಪಿಸಲು ರಾಷ್ಟ್ರೀಯ ಹೆದ್ದಾರಿ, ಚಾಮರಾಜನಗರದವರೆಗೂ ರೈಲ್ವೆ ಯೋಜನೆ ರೂಪಿಸಿರುವುದು ಕನಸಾಗಿತ್ತು. ಆದರೆ ಅದು ಇಂದಿಗೂ ಕೂಡ ಕಾರ್ಯಗತವಾಗಿಲ್ಲ. ಅದೀಗ ಮಂಜುನಾಥ್ ಅವರು ಕಾರ್ಯರೂಪಕ್ಕೆ ತರಬೇಕು ಎಂದು ಹೇಳಿದರು.
ಈ ವೇಳೆ ಯುವ ಮೋರ್ಚಾ ಅಧ್ಯಕ್ಷ ದಯಾನಂದ, ಎಸ್ಸಿ ಮೋರ್ಚಾ ಅಧ್ಯಕ್ಷ ರವಿಕುಮಾರ್, ಒಬಿಸಿ ಮೋರ್ಚಾ ಉಪಾಧ್ಯಕ್ಷ ಹರೀಶ್, ಪ್ರಧಾನ ಕಾರ್ಯದರ್ಶಿ ಗೋಪಾಲ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೇಯಸ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸ್ವಾಮಿಗೌಡ, ನಗರ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಪವಿತ್ರ, ಜಿಲ್ಲಾ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ವರಲಕ್ಷ್ಮಿ, ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯದರ್ಶಿ ಶ್ರೀವಲ್ಲಿ, ರೂಪಶ್ರೀ ಇತರರಿದ್ದರು. ಕೆ ಕೆ ಪಿ ಸುದ್ದಿ 03: ಕನಕಪುರದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಮಂಜುನಾಥ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಡಾ. ಮಂಜುನಾಥ್ ಗೆಲುವಿಗೆ ಶ್ರಮಿಸಿದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರಿಗೆ ಅಭಿನಂದನೆ ಸಲ್ಲಿಸಿದರು.;Resize=(128,128))
;Resize=(128,128))