ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಸಹಕಾರಿ ಕ್ಷೇತ್ರ ಅತ್ಯಂತ ಪವಿತ್ರವಾದುದು. ಹಳ್ಳಿ ಹಳ್ಳಿಗಳಲ್ಲಿ ರೈತರು, ಜನಸಾಮಾನ್ಯರ ಪರಿಸ್ಥಿತಿಗೆ ಅನುಗುಣವಾಗಿ ಸೇವೆ ನೀಡುತ್ತಿರುವುದರಿಂದ ಕರಾವಳಿ ಭಾಗದಲ್ಲಿ ಸಹಕಾರಿ ಕ್ಷೇತ್ರ ಇಷ್ಟು ಎತ್ತರಕ್ಕೇರಲು ಸಾಧ್ಯವಾಗಿದೆ. ಜನರ ಆರ್ಥಿಕ ಸಬಲೀಕರಣಕ್ಕೂ ಸಹಕಾರಿ ಕ್ಷೇತ್ರ ಕಾರಣವಾಗಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ‘ಸಹಕಾರ ರತ್ನ’ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದ್ದಾರೆ.ನಗರದ ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ‘ಸಹಕಾರ ರತ್ನ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅಭಿವಂದನಾ ಸಮಿತಿ’ ವತಿಯಿಂದ ತಮ್ಮ 76ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ ಪ್ರಯುಕ್ತ ಏರ್ಪಡಿಸಿದ್ದ ಅಭಿವಂದನಾ ಕಾರ್ಯಕ್ರಮ ಹಾಗೂ ಸವಲತ್ತುಗಳ ವಿತರಣೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮೊಳಹಳ್ಳಿ ಶಿವರಾಯರು ಭದ್ರ ಬುನಾದಿ ಹಾಕಿರುವ ಅವಿಭಜಿತ ದ.ಕ. ಜಿಲ್ಲೆಯ ಸಹಕಾರಿ ಕ್ಷೇತ್ರ ಇಂದು ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದು ಹೆಮ್ಮೆಯ ಸಂಗತಿ. ಸಹಕಾರಿ ಕ್ಷೇತ್ರ ಉತ್ತಮವಾಗಿ ಕೆಲಸ ಮಾಡಿ ರೈತರನ್ನು ತಲುಪಲು ಸಾಧ್ಯವಾಗಿರುವ ಕಾರಣದಿಂದಲೇ ಅವಿಭಜಿತ ದ.ಕ. ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ನಡೆಯುತ್ತಿಲ್ಲ. ಮಾತ್ರವಲ್ಲದೆ, ಕಳೆದ 29 ವರ್ಷಗಳಿಂದ ಕೃಷಿ ಸಾಲ ಶೇ.100ರಷ್ಟು ಮರುಪಾವತಿ ಆಗುತ್ತಿದೆ. ಇಷ್ಟು ಸುದೀರ್ಘ ಕಾಲ ಈ ಸಾಧನೆಗೈದ ದೇಶದ ಏಕೈಕ ಜಿಲ್ಲೆಯೂ ಆಗಿದೆ ಎಂದು ಡಾ.ರಾಜೇಂದ್ರ ಕುಮಾರ್ ಹರ್ಷ ವ್ಯಕ್ತಪಡಿಸಿದರು.3.5 ಲಕ್ಷ ಮಹಿಳೆಯರ ಸ್ವಾವಲಂಬನೆ:
ಜನಸಾಮಾನ್ಯರೂ ಸಬಲರಾಗಬೇಕು, ಸಿರಿವಂತರಾಗಬೇಕು ಎಂಬ ಉದ್ದೇಶದಿಂದ 27 ವರ್ಷಗಳ ಹಿಂದೆ ನವೋದಯ ಸ್ವಸಹಾಯ ಸಂಘಗಳನ್ನು ಹುಟ್ಟುಹಾಕಿ 7 ಜಿಲ್ಲೆಗಳ 3.5 ಲಕ್ಷ ಮಹಿಳೆಯರು ಸ್ವಾವಲಂಬಿ ಜೀವನ ಆರಂಭಿಸಿದ್ದಾರೆ. ಜತೆಗೆ ಸಹಕಾರಿ ಸಂಘಗಳು ಎಲ್ಲೂ ಸಮಸ್ಯೆಯಾಗದಂತೆ ಉತ್ತಮ ವ್ಯವಹಾರ ನಡೆಸುತ್ತಾ ಜನರ ಆರ್ಥಿಕ ಸಬಲೀಕರಣಕ್ಕೆ ಕಾರಣವಾಗಿವೆ ಎಂದರು.ಮಾನವ ಜಾತಿಯೇ ನನ್ನ ಜಾತಿ:
ಮಾನವ ಜಾತಿಗಿಂತ ದೊಡ್ಡ ಜಾತಿ ಇಲ್ಲ. ನನ್ನ ಜಾತಿ ಮಾನವ ಜಾತಿ. ಎಲ್ಲರ ಸಬಲೀಕರಣದ ಕೆಲಸ ಮಾಡಿ, ಯುವಕರಿಗೆ ಮಾರ್ಗದರ್ಶನ ಮಾಡಿ ಔನ್ನತ್ಯಕ್ಕೇರಿಸುವ ಕೆಲಸ ಮಾನವ ಜಾತಿಯ ಶ್ರೇಷ್ಠ ಕಾಯಕ ಎಂದು ನಂಬಿದ್ದೇನೆ. ಸಹಕಾರಿ ಕ್ಷೇತ್ರ ಸೇರಿದಂತೆ ಎಲ್ಲರೂ ನನ್ನನ್ನು ಬೆಳೆಸಿದ್ದಾರೆ ಎಂದು ಡಾ.ರಾಜೇಂದ್ರ ಕುಮಾರ್ ಹೇಳಿದರು.ಮೊಳಹಳ್ಳಿ ಸಾಲಿಗೆ ಎಂಎನ್ನಾರ್:
ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸಹಕಾರಿ ಕ್ಷೇತ್ರವನ್ನು ಔನ್ನತ್ಯಕ್ಕೇರಿಸಿ ಮೊಳಹಳ್ಳಿ ಶಿವರಾಯರಂಥ ಸಹಕಾರಿ ಧುರೀಣರ ಸಾಲಿಗೆ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಸೇರಿದ್ದಾರೆ. 31 ವರ್ಷಗಳಿಂದ ಡಿಸಿಸಿ ಬ್ಯಾಂಕ್ ಮುನ್ನಡೆಸೋದು, 15 ಸಾವಿರ ಕೋಟಿ ರು.ಗೂ ಅಧಿಕ ವಾರ್ಷಿಕ ವ್ಯವಹಾರಕ್ಕೆ ಬ್ಯಾಂಕ್‌ನ್ನು ಅಭಿವೃದ್ಧಿಪಡಿಸೋದು ಸುಲಭದ ಮಾತಲ್ಲ ಎಂದು ಶ್ಲಾಘಿಸಿದರು.ಅತಿ ಹೆಚ್ಚು ಕಿಸಾನ್ ಕಾರ್ಡ್‌ಗಳನ್ನು ನೀಡಿದ ದೇಶದ ಅಗ್ರ ಬ್ಯಾಂಕ್ ಆಗಿ ಎಸ್ಸಿಡಿಸಿಸಿ ಬ್ಯಾಂಕ್ ಹೊರಹೊಮ್ಮಿರುವುದು ದೊಡ್ಡ ಸಾಧನೆ. ಮಹಿಳಾ ಸ್ವಸಹಾಯ ಸಂಘಗಳನ್ನು ಹುಟ್ಟುಹಾಕಿ ಅವರ ಜೀವನಕ್ಕೆ ದಾರಿ ತೋರಿಸಿಕೊಟ್ಟಿದ್ದಾರೆ. ಅಸಂಖ್ಯ ಬಡವರಿಗೆ ರಾಜೇಂದ್ರ ಕುಮಾರ್ ಆಶಾಕಿರಣ ಆಗಿದ್ದಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ಸ್ಮರಿಸಿದರು.
ಬ್ಯಾಂಕ್‌ಗಳನ್ನು ಮೀರಿ ಸಾಧನೆ:ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಮೀರಿ ಸಹಕಾರ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆಯನ್ನು ಡಾ.ರಾಜೇಂದ್ರ ಕುಮಾರ್ ಮಾಡುತ್ತಿದ್ದಾರೆ. ಸಹಕಾರ ಕ್ಷೇತ್ರ ಅವರ ನೇತೃತ್ವದಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡಲಿ ಎಂದು ಶುಭ ಹಾರೈಸಿದರು.
ಸಹಕಾರಿ ಕ್ಷೇತ್ರದ ಚಾಣಕ್ಯ:ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಡಾ.ರಾಜೇಂದ್ರ ಕುಮಾರ್ ಅವರು ಸಹಕಾರಿ ಕ್ಷೇತ್ರದ ಚಾಣಕ್ಯ ಹಾಗೂ ಅಜಾತಶತ್ರು. ಕೇವಲ ಸಹಕಾರಿ ಧುರೀಣ ಮಾತ್ರವಲ್ಲ, ಧಾರ್ಮಿಕ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅತಿ ಹೆಚ್ಚು ಜನರು ಉದ್ಯಮಿಗಳಾಗಲು ಕಾರಣಕರ್ತರಾದವರು. ಹಾಗಾಗಿ ರಾಜ್ಯದೆಲ್ಲೆಡೆಗಳಿಂದ ಅಭಿಮಾನಿಗಳನ್ನು ಹೊಂದಿರುವ ನಾಯಕರಾಗಿದ್ದಾರೆ ಎಂದು ಶ್ಲಾಘಿಸಿದರು.
ಯಾವ ಸರ್ಕಾರವೂ ಮಾಡಲಾಗದ ಕಾರ್ಯವನ್ನು ಡಾ.ರಾಜೇಂದ್ರ ಕುಮಾರ್ ನವೋದಯ ಸ್ವಸಹಾಯ ಸಂಘಗಳ ಮೂಲಕ ಮಾಡಿದ್ದಾರೆ. ಸಹಸ್ರಾರು ಮಹಿಳೆಯರು, ತಾಯಂದಿರಿಗೆ ಶಕ್ತಿ ತುಂಬಿದ್ದಾರೆ ಎಂದರು.ಜಾತಿ ಭೇದವೆನ್ನದೆ ಸೇವೆ:
ಉದ್ಯಮಿ ಕಣಚೂರು ಮೋನು ಮಾತನಾಡಿ, ರಾಜೇಂದ್ರ ಕುಮಾರ್ ಅವರ ಸೇವೆ ರಾಜ್ಯದ ಉದ್ದಗಲಕ್ಕೆ ಜಾತಿ- ಮತ ಭೇದವೆನ್ನದೆ ದೊರೆಯುತ್ತಿದೆ. ಅಸಂಖ್ಯ ಜನರಿಗೆ ಅವರು ಸಹಾಯಹಸ್ತ ಒದಗಿಸಿದ್ದಾರೆ. ಈ ಕಾರ್ಯ ಇನ್ನಷ್ಟು ಮುಂದುವರಿಯಲಿ ಎಂದರು.ಇತ್ತೀಚೆಗೆ ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿ ಸೊತ್ತು ವಶಪಡಿಸಿಕೊಂಡ ಪೊಲೀಸ್ ಇಲಾಖೆಗೆ ಗೌರವ ಸಲ್ಲಿಸುವ ಭಾಗವಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅನುಪಮ್ ಅಗ್ರವಾಲ್, ಇನ್ನೆಂದೂ ಕೋಟೆಕಾರು ಬ್ಯಾಂಕ್ ರೀತಿಯ ಪ್ರಕರಣಗಳು ನಡೆಯದಂತೆ ಭದ್ರತಾ ವ್ಯವಸ್ಥೆಯಲ್ಲಿ ಲೋಪವಾದಗಂತೆ ನೋಡಿಕೊಳ್ಳುವ ಅಗತ್ಯವಿದೆ ಎಂದು ಮನವಿ ಮಾಡಿದರು.
ಶಾಸಕ ಭರತ್ ಶೆಟ್ಟಿ, ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಉಡುಪಿ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಕೆಎಂಎಫ್ ಉಪಾಧ್ಯಕ್ಷ ಜಯರಾಮ್ ರೈ, ಅಭಿವಂದನಾ ಸಮಿತಿ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ, ಕಾರ್ಯಾಧ್ಯಕ್ಷ ಶಶಿಕುಮಾರ್ ರೈ ಬಾಲ್ಯೋಟ್ಟು, ಪ್ರಧಾನ ಕಾರ್ಯದರ್ಶಿ ಭಾಸ್ಕರ ಎಸ್. ಕೋಟ್ಯಾನ್, ಸಹಕಾರಿ ಉಪನಿಬಂಧಕ ರಮೇಶ್, ಡಾ.ರಾಜೇಂದ್ರ ಕುಮಾರ್ ಅವರ ಪುತ್ರ ಮೇಘರಾಜ್ ಜೈನ್, ಸೊಸೆ ಶಮಾ, ಬ್ಯಾಂಕಿನ ನಿರ್ದೇಶಕರು ಇದ್ದರು.........................ಮೈಕ್ರೋ ಫೈನಾನ್ಸ್ ಕುರಿತು ಸರ್ಕಾರ ಕಣ್ತೆರೆಯಲಿ: ಡಾ.ಎಂಎನ್‌ಆರ್
ಕ್ರಮಬದ್ಧ ಮೈಕ್ರೋ ಫೈನಾನ್ಸ್‌ಗಳಿಂದ ಯಾರಿಗೂ ತೊಂದರೆ ಆಗಿಲ್ಲ. ಈ ಕುರಿತು ಸರ್ಕಾರ ಕಣ್ತೆರೆಯಬೇಕು ಎಂದು ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.ನಾವು ಏಳು ಜಿಲ್ಲೆಗಳಲ್ಲಿ 10 ಮಂದಿ ಇರುವ ಗುಂಪುಗಳಿಗೆ ಸಾಲ ನೀಡುತ್ತಿದ್ದೇವೆ. ಶೇ.99.5ರಷ್ಟು ಸಾಲ ಮರುಪಾವತಿ ಆಗುತ್ತಿದೆ. ವಸೂಲಾತಿ ಎನ್ನುವ ಕ್ರಮವೇ ಇಲ್ಲ. ಇದನ್ನು ಸರ್ಕಾರ ಗಮನಿಸಬೇಕು. ಆದರೆ ಹೊರ ರಾಜ್ಯಗಳಿಂದ ಬಂದ ಅನೇಕರು ಬೇಕಾಬಿಟ್ಟಿ ಸಾಲ ನೀಡುತ್ತಿದ್ದಾರೆ. ಸರ್ಕಾರ ತನಿಖೆ ನಡೆಸಿದರೆ ನಿಜವಾದ ಕಳ್ಳರು ಸಿಕ್ಕಿಬೀಳುತ್ತಾರೆ ಎಂದರು..............
64 ಕೋಟಿ ರು. ಠೇವಣಿಯಿಂದ 7224 ಕೋಟಿವರೆಗೆ..ಡಾ.ರಾಜೇಂದ್ರ ಕುಮಾರ್ ಅವರು ಎಸ್‌ಸಿಡಿಸಿಸಿ ಬ್ಯಾಂಕಿನ ನೇತೃತ್ವ ವಹಿಸುವ ಮೊದಲು ಬ್ಯಾಂಕಿನ ಠೇವಣಿ 64 ಕೋಟಿ ರು. ಇದ್ದರೆ, 25 ಶಾಖೆಗಳು, ಲಾಭ 42 ಲಕ್ಷ ರು. ಇತ್ತು. ಇದೀಗ ಬ್ಯಾಂಕ್ 113 ಶಾಖೆಗಳೊಂದಿಗೆ 7224 ಕೋಟಿ ರು.ಗೂ ಅಧಿಕ ಠೇವಣಿ, 79.5 ಕೋಟಿ ರು. ಲಾಭ, 15,544 ಕೋಟಿ ರು.ಗೂ ಅಧಿಕ ಒಟ್ಟು ವ್ಯವಹಾರದ ದಾಖಲೆ ಸೃಷ್ಟಿ ಮಾಡಿದೆ ಎಂದು ಅಭಿವಂದನಾ ಸಮಿತಿ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ಹೇಳಿದರು.