ಸಾರಾಂಶ
ಪ್ರಧಾನಿ ಮೋದಿ ಗ್ಯಾರಂಟಿಗಳು ಹುಸಿ, ಕಾಂಗ್ರೆಸ್ ಗ್ಯಾರಂಟಿಗಳು ಎಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ನಿಜ ರಾಜ್ಯದಲ್ಲಿ 28 ಸ್ಥಾನಗಳಲ್ಲೂ ಕಾಂಗ್ರೆಸ್ ಪಕ್ಷ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗಪ್ರಧಾನಿ ಮೋದಿ ಅವರ ಗ್ಯಾರಂಟಿಗಳು ಹುಸಿಯಾಗಿದ್ದು, ಕಾಂಗ್ರೆಸ್ ಗ್ಯಾರಂಟಿಗಳು ನಿಜವಾಗಿರುವುದರಿಂದ ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೋದಿ ಅವರ ಗ್ಯಾರಂಟಿಗಳಲ್ಲಿ ಬಿಜೆಪಿಯ ಹೆಸರೇ ಇಲ್ಲ. ಆ ಗ್ಯಾರಂಟಿಗಳೆಲ್ಲಾ ಸುಳ್ಳು ಎಂಬುದು ಈಗಾಗಲೇ ಜನರಿಗೆ ಗೊತ್ತಾಗಿದೆ. ರಾಜ್ಯದ ಗ್ಯಾರಂಟಿಗಳ ಜೊತೆಗೆ ಕೇಂದ್ರ ಕಾಂಗ್ರೆಸ್‌ನ ಗ್ಯಾರಂಟಿಗಳು ಕೂಡ ಸೇರಿ ಈ ಬಾರಿ ಕಾಂಗ್ರೆಸ್‍ಗೆ ಗೆಲುವಾಗಲಿದೆ. ರಾಜ್ಯದಲ್ಲಿ ಎಲ್ಲಾ 28 ಸ್ಥಾನಗಳಲ್ಲೂ ಗೆಲ್ಲುವ ವಿಶ್ವಾಸವಿದೆ ಎಂದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶೇ.43 ರಷ್ಟು ಮತಗಳು ಲಭಿಸಿದ್ದವು. ಹಾಗಾಗಿ 135 ಸ್ಥಾನ ಲಭಿಸಿತ್ತು. ಇದರ ಆಧಾರದ ಮೇಲೆ ಸುಮಾರು 18 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಿರಾಯಾಸವಾಗಿ ಗೆಲುವು ಸಾಧಿಸಲಿದೆ. ಇನ್ನು ಆಡಳಿತಕ್ಕೆ ಬಂದ ತಕ್ಷಣ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಕೊಟ್ಟ ಮಾತಿ ನಂತೆ ಜಾರಿಗೆ ತಂದಿದೆ. ಇದರಿಂದಾಗಿ ಲೋಕಸಭಾ ಚುನಾವಣೆಯಲ್ಲಿ ಇನ್ನೂ ಶೇ.5 ರಿಂದ 6 ರಷ್ಟು ಮತಗಳು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚುವರಿಯಾಗಿ ಲಭಿಸಲಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ 28 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ಗೆ ಗೆಲುವು ಸಿಗಲಿದೆ ಎಂದರು.ಚುನಾವಣೆಗೂ ಮೊದಲು ಎಲ್ಲಾ 28 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳುತ್ತಿದ್ದರು. ಯಾವ ಆಧಾರದಲ್ಲಿ ಹಾಗೆ ಹೇಳುತ್ತಿದ್ದರೋ ಗೊತ್ತಿಲ್ಲ. ಆದರೆ, ಈಗ 20 ರಿಂದ 24 ಸ್ಥಾನ ಗೆಲ್ಲುವುದಾಗಿ ಹೇಳುತ್ತಿದ್ದಾರೆ ಈಗ ಅವರ ವಿಶ್ವಾಸ ಕುಂದು ಹೋಗಿದೆ ಎಂದು ಹೇಳಿದರು.ನಗರಕ್ಕೆ ಖರ್ಗೆ, ರಾಗಾ: ಗುರುವಾರ ನಗರಕ್ಕೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಗಮಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್. ರಮೇಶ್, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಎಂಎಲ್ಸಿ ಇನಾಯತ್ ಅಲಿ, ಪ್ರಮುಖರಾದ ಯು. ಶಿವಾನಂದ, ವಿಜಯ್‍ಕುಮಾರ್(ದನಿ), ಹಬೀಬ್ ಉಲ್ಲಾ, ದೇವಿಕುಮಾರ್, ಮೂರ್ತಿ, ಲಕ್ಷ್ಮಿ ವೆಂಕಟೇಶ್ ಇನ್ನಿತರರು ಇದ್ದರು.ಬಿಜೆಪಿಗೆ ಹೆಚ್ಚೆಂದರೆ 200 ಸ್ಥಾನ : ಚುನಾವಣೆ ಘೋಷಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಕೂಡ ಈ ಬಾರಿ 400 ಸ್ಥಾನ ಗೆಲ್ಲುವುದಾಗಿ ಹೇಳುತ್ತಿದ್ದರು. ಎರಡು ಹಂತದ ಚುನಾವಣೆ ಬಳಿಕ ಅದರ ಬಗ್ಗೆ ಮಾತೇ ಆಡುತ್ತಿಲ್ಲ. ಅವರಿಗೂ ಮತದಾನದ ಮಾಹಿತಿ ಸಿಕ್ಕಿರುತ್ತದೆ. ಬಿಜೆಪಿ ಹೆಚ್ಚೆಂದರೆ 200 ಸ್ಥಾನ ಗಳಿಸಬಹುದು ಎಂಬುದು ಅವರು ಗೊತ್ತಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಹೇಳಿದರು.