ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮೇ 3ರಂದು ನಡೆದ ನೀಟ್ ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವೈಫಲ್ಯ ಖಂಡಿಸಿ ಬುಧವಾರ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಸದಸ್ಯರು ಸಂಸದ ಬಿ.ವೈ.ರಾಘವೇಂದ್ರ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಘಟನೆ ನಡೆಯಿತು.ರಾಜಸ್ತಾನ ಮತ್ತು ಉತ್ತರಾಖಂಡದಲ್ಲಿ ನಡೆದ ನೀಟ್ ಯುಜಿ 2026 ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯ ವದಂತಿಗೆ ಪುಷ್ಟಿ ಕೊಡುವಂತೆ ಮೇ 3ರಂದು ನಡೆದ ಪರೀಕ್ಷೆಯ ಅಕ್ರಮಗಳ ಆರೋಪಗಳು ಸರಿಯಾಗಿದೆ ಎಂಬಂತೆ ಮತ್ತು ಪಾರದರ್ಶಕತೆ ಕಾಪಾಡಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಒಪ್ಪಿ ಪರೀಕ್ಷೆಯನ್ನೇ ರದ್ದು ಮಾಡಿದ ಕೇಂದ್ರದ ಬಿಜೆಪಿ ಸರ್ಕಾರ ಸುಮಾರು 23 ಲಕ್ಷ ವಿದ್ಯಾರ್ಥಿಗಳ ಬದುಕಿನ ಜತೆಗೆ ಚೆಲ್ಲಾಟವಾಡಿದೆ ಎಂದು ಆರೋಪಿಸಿದರು.
ಗ್ರಾಮೀಣ, ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ತಮ್ಮ ಕುಟುಂಬದ ಆರ್ಥಿಕ ಸಂಕಷ್ಟದ ನಡುವೆಯೂ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಕನಸು ಕಂಡು ಅನೇಕ ವರ್ಷಗಳ ಕಾಲ ಹಗಲು ರಾತ್ರಿ ಪರಿಶ್ರಮ ಪಟ್ಟು ಪರೀಕ್ಷೆ ಬರೆದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಮತ್ತು ಪೋಷಕರ ನಂಬಿಕೆ ಮತ್ತು ವಿಶ್ವಾಸವನ್ನೇ ಹಾಳು ಮಾಡಿದ ಕೇಂದ್ರ ಬಿಜೆಪಿ ಸರ್ಕಾರ ತನ್ಮ ಅವಧಿಯಲ್ಲಿ ಪದೇ ಪದೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿರುವುದು ಅದರ ವೈಫಲ್ಯವಾಗಿದ್ದು ಯುವ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದರು.2024ರಲ್ಲಿಯೂ ಪ್ರಶ್ನೆಪತ್ರಿಕೆ ವಿವಾದ ದೇಶಾದ್ಯಂತ ಕೇಳಿ ಬಂದಿತ್ತು. ಆಗ ಕೇಂದ್ರ ಸರ್ಕಾರ ಇದನ್ನು ಮುಚ್ಚಿಹಾಕಿತ್ತು. ಈವರೆಗೂ ವಿದ್ಯಾರ್ಥಿಗಳಲ್ಲಿ ಸಂಪೂರ್ಣ ವಿಶ್ವಾಸ ಮರುಸ್ಥಾಪನೆಯಾಗಿಲ್ಲ. ರಾಷ್ಟ್ರ ಮಟ್ಟದ ಪರೀಕ್ಷೆಯ ಭದ್ರತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಕೂಡಲೇ ಕೇಂದ್ರ ಸರ್ಕಾರವನ್ನು ವಜಾಗೊಳಿಸಿ ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ ಮತ್ತು ಸಾರ್ವಜನಿಕರಲ್ಲಿ ವಿಶ್ವಾಸ ಮೂಡುವಂತೆ ಮಾಡಬೇಕೆಂದು ಯುವ ಕಾಂಗ್ರೆಸ್ ರಾಷ್ಟ್ರಪತಿಗಳನ್ನು ಒತ್ತಾಯಿಸಿದೆ.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರ್ಷಿತ ಗೌಡ, ಯುವ ಮುಖಂಡ ಮಧುಸೂದನ್, ಪಾಲಿಕೆ ಮಾಜಿ ಸದಸ್ಯೆ ಯಮುನಾ ರಂಗೇಗೌಡ, ಪ್ರಮುಖರಾದ ಚರಣ್, ಪ್ರವೀಣ್, ಅಬ್ದುಲ್ ಸತ್ತಾರ್, ಮಲವಗೊಪ್ಪ ಶಿವು, ಆಕಾಶ್, ಗಿರೀಶ್, ಸಕ್ಲೇನ್, ಅಶೋಕ್, ರವಿ, ವಿಷ್ಣು, ಬಾಬು, ತೌಫಿಕ್, ಮನೋಜ್, ಅನಂತ್ ಮತ್ತಿತರರು ಇದ್ದರು.
ಸೋರಿಕೆಯಾದ ರಾಜ್ಯಗಳಲ್ಲಿ ಮಾತ್ರ ಮರು ಪರೀಕ್ಷೆ ಮಾಡಿ
ಪ್ರಶ್ನೆ ಪತ್ರಿಕೆ ಸೋರಿಕೆಯಾದ ರಾಜ್ಯಗಳಲ್ಲಿ ಮಾತ್ರ ಮರು ಪರೀಕ್ಷೆ ಮಾಡಿ. ಇಲ್ಲವಾದರೆ ಲಕ್ಷಾಂತರ ಬಡ ವಿದ್ಯಾರ್ಥಿಗಳ ಭವಿಷ್ಯಕ್ಕೆ ಹಾನಿಯಾಗಲಿದ್ದು, ಅವರ ವಿದ್ಯಾರ್ಥಿ ಜೀವನವೇ ಗೊಂದಲಕ್ಕೀಡಾಗುತ್ತದೆ. ನಮ್ಮ ರಾಜ್ಯದಲ್ಲೇ 2.5 ಲಕ್ಷ ಮಕ್ಕಳು ಪರೀಕ್ಷೆ ಬರೆದಿದ್ದಾರೆ. ನೀಟ್ ಪರೀಕ್ಷೆಯನ್ನು ರದ್ದು ಮಾಡಿ ಮೊದಲಿನ ಹಾಗೆ ರಾಜ್ಯಕ್ಕೆ ಪೂರ್ಣ ಅಧಿಕಾರ ನೀಡಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್ ಆಗ್ರಹಿಸಿದ್ದಾರೆ.ಪ್ರಧಾನಿ ಮೋದಿಯವರನ್ನು ಪ್ರಶ್ನೆ ಮಾಡಲು ಮತ್ತು ಯಾವುದೇ ಗಂಭೀರ ಸಮಸ್ಯೆಗಳನ್ನು ಪ್ರಧಾನಿಯ ಗಮನಕ್ಕೆ ತರಲು ವಿಫಲರಾದ ರಾಜ್ಯದ ಬಿಜೆಪಿ ಸಂಸದರ ಮನೆಗೆ ಮುತ್ತಿಗೆ ಹಾಕಿದ್ದೇವೆ. ಪರೀಕ್ಷೆಯ ಪಾವಿತ್ರ್ಯತೆಯನ್ನು ಕಾಪಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ.
ಚೇತನ್ ಗೌಡ ರಾಜ್ಯ ಜವಳಿ ನಿಗಮದ ಅಧ್ಯಕ್ಷ.