ಕಾಂಗ್ರೆಸ್‌ಗೆ ಪ್ರಧಾನಿ ಯಾರಂತ ಗೊತ್ತಿಲ್ಲ

| Published : Apr 14 2024, 01:48 AM IST

ಸಾರಾಂಶ

ಬೆಳಗಾವಿ: ನಾವು ನಮ್ಮ ನಾಯಕರು ಮೋದಿಯವರು ಅಂತಾ ಹೇಳುತ್ತೇವೆ. ಕಾಂಗ್ರೆಸ್‌ನವರಿಗೆ ಪ್ರಧಾನಿ ಯಾರು ಅಂತಾ ಗೊತ್ತಿಲ್ಲ ಎಂದು ಮಾಜಿ ಸಿಎಂ, ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ವ್ಯಂಗ್ಯವಾಡಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿಂಡಲಗಾದಲ್ಲಿ ಶನಿವಾರ ನಡೆದ ಬೂತ್‌ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಐಎನ್‌ಡಿ ಒಕ್ಕೂಟ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಒಪ್ಪುತ್ತಿಲ್ಲ. ಕಾಂಗ್ರೆಸ್‌ನವರು ಇಂದು ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ನಾವು ನಮ್ಮ ನಾಯಕರು ಮೋದಿಯವರು ಅಂತಾ ಹೇಳುತ್ತೇವೆ. ಕಾಂಗ್ರೆಸ್‌ನವರಿಗೆ ಪ್ರಧಾನಿ ಯಾರು ಅಂತಾ ಗೊತ್ತಿಲ್ಲ ಎಂದು ಮಾಜಿ ಸಿಎಂ, ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ವ್ಯಂಗ್ಯವಾಡಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿಂಡಲಗಾದಲ್ಲಿ ಶನಿವಾರ ನಡೆದ ಬೂತ್‌ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಐಎನ್‌ಡಿ ಒಕ್ಕೂಟ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಒಪ್ಪುತ್ತಿಲ್ಲ. ಕಾಂಗ್ರೆಸ್‌ನವರು ಇಂದು ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.

ಬಿಜೆಪಿಗೆ ದಿನೇ ದಿನೇ ಬೆಂಬಲ ಹೆಚ್ಚಾಗುತ್ತಿದೆ. ಎಲ್ಲರನ್ನೂ ಮನೆಗೆ ಕಳುಹಿಸುವ ಮೋದಿಯವರ ಸುಂಟರಗಾಳಿ ಹೆಚ್ಚಾಗುತ್ತಿದೆ. ಕಾಂಗ್ರೆಸ್ ದಿನದಿಂದ ದಿನಕ್ಕೆ ಅವನತಿಯ ಹಾದಿ ಹಿಡಿಯುತ್ತಿದೆ. ಜಮ್ಮು ಕಾಶ್ಮೀರದಲ್ಲಿ ಇನ್ನೊಂದು ಕಪ್ಪು ಚುಕ್ಕೆ ಪಿಒಕೆ ಇದೆ. 400 ಸೀಟ್ ಗೆದ್ದ ಬಳಿಕ ಪಾಕ್ ಆಕ್ರಮಿತ ಕಾಶ್ಮೀರವನ್ನು ಕೂಡ ವಾಪಸ್ ಪಡೆಯುತ್ತಾರೆ‌. ಇಡೀ ದೇಶದಲ್ಲಿರುವ ಎಲ್ಲ ನಾಯಕರಿಗೆ ಒಂದೇ ಕಾನೂನು ಮಾಡುತ್ತಾರೆ. ಈ ಕಾರಣಕ್ಕೆ ದೇಶಕ್ಕೆ ಇಂದು ನರೇಂದ್ರ ಮೋದಿಯವರು ಅವಶ್ಯ ಇದೆ. ಅವರೇ 3ನೇ ಬಾರಿಗೆ ದೇಶದ ಪ್ರಧಾನಿಯಾಗುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಮಾತನಾಡಿ, ರಾಜ್ಯದಲ್ಲಿ ಆದಷ್ಟು ಶೀಘ್ರ ಕಾಂಗ್ರೆಸ್‌ ಸರ್ಕಾರ ಪತನವಾಗಲಿದ್ದು, ಡಬಲ್ ಇಂಜಿನ್ ಸರ್ಕಾರ ಮಾಡುತ್ತೇವೆ ಎಂದು ಗುಡುಗಿದರು.

ಕಾಂಗ್ರೆಸ್ ಸರ್ಕಾರದ ಸುಳ್ಳು ಭರವಸೆಗಳಿಗೆ ಯಾರೂ ಬಲಿಯಾಗಬೇಡಿ. ಗ್ಯಾರಂಟಿ ನಂಬಿ ಕೆಟ್ಟ ಸರ್ಕಾರವನ್ನು ತಂದಿದ್ದೀರಿ. ಚುನಾವಣೆ ನಂತರ ಕರೆಂಟ್ ಹೋಗುತ್ತದೆ, ಬಸ್ ನಿಲ್ಲುತ್ತದೆ. ₹2 ಸಾವಿರ ಬಂದ್ ಆಗುತ್ತದೆ ಎಂದು ಭವಿಷ್ಯ ನುಡಿದರು.

ಮಹಾರಾಷ್ಟ್ರದಲ್ಲಿ ನಮ್ಮ ಸರ್ಕಾರ ಇರುವುದರಿಂದ ಬೆಳಗಾವಿ ಪಶ್ಚಿಮ ಭಾಗದಲ್ಲಿ ನೀರಾವರಿ ಯೋಜನೆ ಮಾಡುವುದಿದೆ. ಬೆಳಗಾವಿ ಗ್ರಾಮೀಣ ಭಾಗದಲ್ಲಿ ಇಪ್ಪತ್ತೈದು ಸಾವಿರ ಲೀಡ್ ಆಗುತ್ತದೆ. ಶೆಟ್ಟರ್ ಅವರು 2 ರಿಂದ 2.5 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಧನಂಜಯ ಜಾಧವ್, ಸಂಜಯ್ ಪಾಟೀಲ್, ನಾಗೇಶ್ ಮನ್ನೋಳಕರ್ ಸೇರಿದಂತೆ ಎಲ್ಲ ಬಿಜೆಪಿ ನಾಯಕರು ಈ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ನಾನು ಈ ಚುನಾವಣೆಯಲ್ಲಿ ಮಾತನಾಡುವುದಿಲ್ಲವೆಂದು ನನ್ನ ತಮ್ಮ ಬಾಲಚಂದ್ರನಿಗೆ ಮಾತು ಕೊಟ್ಟಿದ್ದೇನೆ. ಅದಕ್ಕೆ ಹೆಚ್ಚಿಗೆ ಮಾತಾಡುವುದಿಲ್ಲ. ಹೆದರಿ ಮಾತಾಡೋದನ್ನು ಬಿಟ್ಟಿಲ್ಲ. ಚುನಾವಣೆ ಫಲಿತಾಂಶದ ಬಳಿಕ ಎಲ್ಲವನ್ನೂ ಮಾತಾಡುತ್ತೇನೆ ಎಂದು ತಿಳಿಸಿದರು.

ಈ ವೇಳೆ ಸಂಸದೆ ಮಂಗಲ ಅಂಗಡಿ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ, ಡಾ.ಸೋನಾಲಿ ಸರ್ನೋಬತ್ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಉಪಸ್ಥಿತರಿದ್ದರು.

----------------

ಬಾಕ್ಸ್‌.....

ಸಚಿವೆ ಹೆಬ್ಬಾಳಕರ್‌ ಒಂದು ಎಕ್ಸ್‌ಸ್ಟ್ರಾ ಪೆಗ್‌ ಹೊಡಿಬೇಕು!

ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ವಿರುದ್ಧ ಮಾಜಿ ಶಾಸಕ ಸಂಜಯ ಪಾಟೀಲ ನಾಲಿಗೆ ಹರಿಬಿಟ್ಟಿದ್ದಾರೆ. ಇಂದು ರಾತ್ರಿ ಹೆಬ್ಬಾಳಕರ್‌ ಒಂದು ಎಕ್ಸ್‌ಸ್ಟ್ರಾ ಪೆಗ್‌ ಹೊಡೆಯಬೇಕಾಗುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಅವರು, ಸಮಾವೇಶದಲ್ಲಿ ಇಷ್ಟೊಂದು ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಸೇರಿಕೊಂಡಿರುವುದನ್ನು ನೋಡಿದರೇ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ಗೆ ಇಂದು ರಾತ್ರಿ ನಿದ್ದೆ ಮಾಡುವುದಿಲ್ಲ. ನಿದ್ದೆ ಮಾತ್ರೆ ತೆಗೆದುಕೊಂಡು ಮಲಬೇಕಾಗುತ್ತದೆ. ಸಮಾವೇಶಕ್ಕೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಬಂದಿರುವುದನ್ನು ನೋಡಿದರೇ ಅ‍ವರಿಗೆ ಕಷ್ಟ ಆಗುತ್ತದೆ. ಇಂದು ರಾತ್ರಿ ಹೆಬ್ಬಾಳಕರ್‌ ಒಂದು ಎಸ್ಟ್ರಾ ಪೆಗ್‌ ಹೊಡೆಯಬೇಕಾಗುತ್ತದೆ ಎಂದು ಕಿಚಾಯಿಸಿದರು.-----

ಕೋಟ್‌...

ನನಗೂ ಬೆಳಗಾವಿಗೆ 30 ವರ್ಷಗಳ ನಂಟಿದೆ. ಸುರೇಶ್ ಅಂಗಡಿ ನಾವು ಸೇರಿ ಬಿಜೆಪಿ ಕಟ್ಟುವ ಕೆಲಸ ಮಾಡಿದ್ದೇವೆ. ಈ ಭಾಗದ ಅಭಿವೃದ್ಧಿಗೆ ಅಸೆಂಬ್ಲಿಯಲ್ಲಿ ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ. ಬೆಳಗಾವಿ ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಕಾರ್ಯ ಮುಂದುವರಿಸುವ ಕೆಲಸ ಮಾಡುತ್ತೇನೆ. ಬೆಳಗಾವಿ ನಗರ ಸುಂದರ ಮಾಡಲು ಪಣ ತೊಡುತ್ತೇನೆ.

-ಜಗದೀಶ ಶೆಟ್ಟರ್‌, ಬೆಳಗಾವಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ.

----------------------

ಬೆಳಗಾವಿಯಲ್ಲಿ ಕಾಂಗ್ರೆಸ್‌ ಸೋಲು ಖಚಿತ. ಬಿಜೆಪಿ ಗೆಲುವು ನಿಶ್ಚಿತವಾಗಿದೆ. ಮಾಜಿ ಸಿಎಂ ಜಗದೀಶ ಶೆಟ್ಟರ್‌ ಗೆಲ್ಲುತ್ತಾರೆ. ಮೋದಿಯವರು 3ನೇ ಬಾರಿಗೆ ಪ್ರಧಾನಿಯಾಗುತ್ತಾರೆ. ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸೇರಿಸಿ ಜಗದೀಶ್ ಶೆಟ್ಟರ್ ತ್ರಿವಳಿ ನಗರ ಮಾಡುತ್ತಾರೆ. ವಿಮಾನ ನಿಲ್ದಾಣ ಅಭಿವೃದ್ಧಿ ಮಾಡಲು ಪ್ರಯತ್ನ ಮಾಡುತ್ತೇವೆ. ಬೆಂಗಳೂರು ಚೆನ್ನೈ ಮಾದರಿಯಲ್ಲಿ ಇಂಡಸ್ಟ್ರಿ ಕಾರಿಡಾರ್ ಮಾಡುತ್ತೇವೆ.

-ರಮೇಶ ಜಾರಕಿಹೊಳಿ, ಶಾಸಕರು.