ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ನಡೆದು ಕಾಂಗ್ರೆಸ್‌ನ ಐವರು ಸದಸ್ಯರನ್ನು ಆಯ್ಕೆ ಮಾಡಿಕೊಂಡು ಬರುವಲ್ಲಿ ನೂತನ ಸರ್ಕಾರ ಯಶಸ್ವಿಯಾಗಿದೆ. ಆದರೆ, ಆಯ್ಕೆಯಾಗಿರುವ ಒಬ್ಬರೂ ಕಿತ್ತೂರ ಕರ್ನಾಟಕ ಭಾಗದವರಿಲ್ಲ.
ಶಿವಾನಂದ ಗೊಂಬಿ
ಹುಬ್ಬಳ್ಳಿ: ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ನಡೆದು ಕಾಂಗ್ರೆಸ್‌ನ ಐವರು ಸದಸ್ಯರನ್ನು ಆಯ್ಕೆ ಮಾಡಿಕೊಂಡು ಬರುವಲ್ಲಿ ನೂತನ ಸರ್ಕಾರ ಯಶಸ್ವಿಯಾಗಿದೆ. ಆದರೆ, ಆಯ್ಕೆಯಾಗಿರುವ ಒಬ್ಬರೂ ಕಿತ್ತೂರ ಕರ್ನಾಟಕ ಭಾಗದವರಿಲ್ಲ. ಇದು ಈ ಭಾಗದಲ್ಲಿ ಅಸಮಾಧಾನವನ್ನುಂಟು ಮಾಡುತ್ತಿದೆ. ಕಿತ್ತೂರ ಕರ್ನಾಟಕದ ಜನತೆ ಬರೀ ಜೈಕಾರ ಕೂಗಲು, ಬ್ಯಾನರ್, ಕಟೌಟ್ ಕಟ್ಟಲು ಮಾತ್ರ ಸೀಮಿತವಾ ಎಂಬ ಪ್ರಶ್ನೆಯನ್ನು ಮುಖಂಡರು ಎತ್ತಿದ್ದಾರೆ.ವಿಧಾನಸಭೆಯಿಂದ ಪರಿಷತ್‌ಗೆ 7 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಏಳರಲ್ಲಿ 5 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದ್ದರೆ, 2ರಲ್ಲಿ ಬಿಜೆಪಿ ಗೆದ್ದಿರುವುದುಂಟು. ಈ ಐದು ಸ್ಥಾನಗಳ ಪೈಕಿ ಒಂದು ಸ್ಥಾನವನ್ನಾದರೂ ಕಿತ್ತೂರು ಕರ್ನಾಟಕ ಭಾಗಕ್ಕೆ ಕೊಡಬೇಕಿತ್ತು ಎಂಬ ಅಭಿಪ್ರಾಯ ಈ ಭಾಗದ ಎರಡನೆಯ ಹಂತದ ನಾಯಕರದ್ದಾಗಿತ್ತು.
ಆದರೆ ಅಧಿಕಾರ ಹಂಚಿಕೆ, ಮುಖ್ಯಮಂತ್ರಿ ಅಧಿಕಾರ ಸ್ವೀಕಾರ ಎಂಬೆಲ್ಲ ಗೊಂದಲಗಳು ಇದ್ದವು. ಆಗ ಈ ಬಗ್ಗೆ ಹೆಚ್ಚು ಚರ್ಚೆಯಾಗಿರಲಿಲ್ಲ. ಆದರೂ ವಿಧಾನಸಭೆಯಿಂದ ಪರಿಷತ್‌ಗೆ ನಡೆಯುವ ಚುನಾವಣೆಗೆ ಈ ಭಾಗದ ಎರಡನೆಯ ಹಂತದ ನಾಯಕರನ್ನು ಪರಿಗಣಿಸಬೇಕು ಎಂಬ ಬೇಡಿಕೆಯನ್ನು ಕೈ ಕಮಾಂಡ್‌ಗೆ ಈ ಭಾಗದ ಮುಖಂಡರು ಸಲ್ಲಿಸಿದ್ದರು.ಆದರೆ ಕೈ ಕಮಾಂಡ್ ಮಾತ್ರ ನಾಲ್ಕು ಸ್ಥಾನಗಳನ್ನು ದಕ್ಷಿಣ ಭಾಗಕ್ಕೆ ಕೊಟ್ಟಿದೆ. ಗೆಲ್ಲುವ ಸಂಶಯ ಇದ್ದ 5ನೇ ಸ್ಥಾನಕ್ಕೂ ವಿನಯ್ ಕಾರ್ತಿಕ ಅವರ ಹೆಸರನ್ನು ಅಖೈರುಗೊಳಿಸಿತ್ತು. ಅವರೇ ಹೆಚ್ಚಿನ ಮತ ಪಡೆದು ಗೆದ್ದಿದ್ದಾರೆ.
ಇದೀಗ ಎದ್ದಿರುವ ಪ್ರಶ್ನೆ ಎಂದರೆ ಅಧಿಕಾರದಲ್ಲಿ ಕಾಂಗ್ರೆಸ್ ಸರ್ಕಾರವೇ ಇದೆ. ಆದರೂ ಕಿತ್ತೂರ ಕರ್ನಾಟಕ ಭಾಗಕ್ಕೆ ಒಬ್ಬರನ್ನೂ ಆಯ್ಕೆ ಮಾಡಿಲ್ಲವೇಕೆ ಎಂಬ ಪ್ರಶ್ನೆ ಕೇಳುತ್ತಿದ್ದಾರೆ.ಯಾರ್‍ಯಾರು ರೇಸ್‌ನಲ್ಲಿದ್ದರು!
ಹಾಗೆ ನೋಡಿದರೆ ಕಿತ್ತೂರ ಕರ್ನಾಟಕದಿಂದ ಸಾಕಷ್ಟು ಜನ ಆಕಾಂಕ್ಷಿಗಳಾಗಿದ್ದರು. ಈ ನಿಟ್ಟಿನಲ್ಲಿ ಕೆಲವರು ಪ್ರಯತ್ನವನ್ನೂ ನಡೆಸಿದ್ದರು. ಹುಬ್ಬಳ್ಳಿ-ಧಾರವಾಡ ಜಿಲ್ಲೆಯಿಂದ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಅನೀಲಕುಮಾರ ಪಾಟೀಲ, ಅಲ್ತಾಫ್ ಹಳ್ಳೂರ, ಸದಾನಂದ ಡಂಗನವರ, ಶರಣಪ್ಪ ಕೊಟಗಿ ಸೇರಿದಂತೆ ಹಲವರು ಪ್ರಯತ್ನಿಸಿದ್ದರೆ, ಗದಗ ಜಿಲ್ಲೆಯಿಂದ ಮಾಜಿ ಶಾಸಕ ಡಿ.ಆರ್. ಪಾಟೀಲ, ರಾಮಕೃಷ್ಣ ದೊಡ್ಡಮನಿ, ಹಾವೇರಿ ಜಿಲ್ಲೆಯಿಂದ ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ಪಶ್ಚಿಮ ಪದವೀಧರ ಕ್ಷೇತ್ರದ ಟಿಕೆಟ್ ಸಿಗದೇ ಅಸಮಾಧಾನಗೊಂಡಿರುವ ಆರ್.ಎಂ. ಕುಬೇರಪ್ಪ, ಸಂಜೀವಕುಮಾರ ನೀರಲಗಿ, ಬೆಳಗಾವಿಯಿಂದ ಸುನಿಲ ಹನುಮನ್ನವರ, ಪಿ. ದಯಾನಂದ, ಉತ್ತರ ಕನ್ನಡ ಜಿಲ್ಲೆಯಿಂದ ಎಸ್.ಕೆ. ಹೆಗಡೆ, ವಿ.ಎಸ್. ಪಾಟೀಲ ಸೇರಿದಂತೆ ಹಲವರು ತಮ್ಮನ್ನು ಪರಿಗಣಿಸಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಯಾರೊಬ್ಬರನ್ನು ಪರಿಗಣಿಸಿಲ್ಲ. ಇವರಲ್ಲಿ ಒಬ್ಬರನ್ನಾದರೂ ಗುರುತಿಸಬೇಕಿತ್ತು. ಕಡೆಪಕ್ಷ 5ನೆಯ ಸ್ಥಾನಕ್ಕಾದರೂ ಈ ಭಾಗದವರಿಗೆ ಅವಕಾಶ ಕೊಡಬೇಕಿತ್ತು ಎಂಬ ಮಾತು ಇದೀಗ ಕಾಂಗ್ರೆಸ್ ವಲಯದಿಂದಲೇ ಕೇಳಿ ಬರುತ್ತಿದೆ. ಇದರಿಂದ ಸಂಘಟನೆಗೆ ಹೆಚ್ಚಿನ ಆದ್ಯತೆ ಸಿಗುತ್ತಿತ್ತು. ಮುಂದೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಹೆಚ್ಚಿನ ಅನುಕೂಲವಾಗುತ್ತಿತ್ತು ಎಂಬುದು ಮುಖಂಡರ ಅಂಬೋಣವಾಗಿದೆ.ಅಸಮಾಧಾನ
ಎರಡನೆಯ ಹಂತದ ನಾಯಕರು ಬೆಳೆಯಬಾರದೇ? ನಾವು ಬರೀ ಮುಖಂಡರು ಬಂದಾಗ ಜೈಕಾರ, ಘೋಷಣೆ ಕೂಗಲು ಮಾತ್ರ ಸೀಮಿತವಾ? ಎಂಬ ಪ್ರಶ್ನೆ ಕೇಳುತ್ತಿದ್ದಾರೆ. ಇದೀಗ ಡಿ.ಕೆ. ಶಿವಕುಮಾರ ಮುಖ್ಯಮಂತ್ರಿ ಆಗಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿದ್ದವರು ಅವರು. ಹೀಗಾಗಿ ಕಾರ್ಯಕರ್ತರ ಮನಸ್ಥಿತಿ ಗೊತ್ತಿರುತ್ತದೆ. ಇನ್ನು ಮುಂದಾದರೂ ಎರಡನೆಯ ಹಂತದ ನಾಯಕರಿಗೆ ಅವಕಾಶ ಕೊಡಬೇಕು ಎಂಬ ಆಗ್ರಹ ಕಾರ್ಯಕರ್ತರದ್ದು.