ಸಾರಾಂಶ
ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಯಾವವೂ ನಿಂತಿಲ್ಲ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ ಎಂದು ಸಚಿವ ಬೋಸರಾಜ್ ಹೇಳಿದರು.
ಸಂಡೂರು: ಕಾಂಗ್ರೆಸ್ ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿದೆ. ಕಾಂಗ್ರೆಸ್ ನುಡಿದಂತೆ ನಡೆದಿದೆ ಮತ್ತು ತನ್ನ ಮಾತನ್ನು ಉಳಿಸಿಕೊಂಡಿದೆ ಎಂದು ಸಚಿವ ಬೋಸರಾಜ್ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಯಾವವೂ ನಿಂತಿಲ್ಲ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ರಾಜ್ಯ ಸರ್ಕಾರ ₹೫೦೦೦ ಕೋಟಿ ಅನುದಾನ ನೀಡಿದೆ. ಇದರಿಂದ ಪ್ರತಿ ಕ್ಷೇತ್ರಕ್ಕೆ ಕನಿಷ್ಠ ₹೧೦೦ ಕೋಟಿ ಅನುದಾನ ದೊರೆಯಲಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ೩೭೧ಜೆ ತಿದ್ದುಪಡಿ ಕಾಂಗ್ರೆಸ್ ಕೊಡುಗೆ. ಇದರಿಂದ ಈ ಭಾಗದ ಜನತೆಯ ಶಿಕ್ಷಣ, ಉದ್ಯೋಗ, ಮೂಲ ಸೌಕರ್ಯಗಳ ಅಭಿವೃದ್ಧಿಗೆ ತುಂಬಾ ಅನುಕೂಲವಾಗಿದೆ. ಕಾಂಗ್ರೆಸ್ ಜನಪರ ಯೋಜನೆಗಳು ಹಾಗೂ ಕ್ಷೇತ್ರದಲ್ಲಿ ಈ. ತುಕಾರಾಂ ಅವರ ಅಭಿವೃದ್ಧಿ ಕಾರ್ಯಗಳು, ಅವರ ಉತ್ತಮ ನಡವಳಿಕೆ, ಎಲ್ಲ ಸಮಾಜಗಳೊಂದಿಗೆ ಅವರು ಹೊಂದಿರುವ ಉತ್ತಮ ಬಾಂಧವ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈ. ಅನ್ನಪೂರ್ಣಾ ತುಕಾರಾಂ ಅವರ ಗೆಲುವಿಗೆ ಸಹಕಾರಿಯಾಗಲಿವೆ. ಅವರು ಖಂಡಿತ ಗೆಲವು ಸಾಧಿಸಲಿದ್ದಾರೆ ಎಂದರು.ವಿಧಾನಪರಿಷತ್ ಸದಸ್ಯರು ಹಾಗೂ ಪ್ರವರ್ಗ ೧ರ ಜಾತಿಗಳ ಒಕ್ಕೂಟದ ಅಧ್ಯಕ್ಷ ಡಿ.ಟಿ. ಶ್ರೀನಿವಾಸ್ ಮಾತನಾಡಿ, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳನ್ನು ಟೀಕಿಸುವವರೆ ಅವುಗಳನ್ನು ಅನುಸರಿಸತೊಡಗಿದ್ದಾರೆ. ದೇಶದಲ್ಲಿ ಸಾಮಾಜಿಕ ನ್ಯಾಯವನ್ನು ಒದಗಿಸಿರುವುದು ಕಾಂಗ್ರೆಸ್ ಮಾತ್ರ. ಗ್ಯಾರಂಟಿ ಯೋಜನೆಗಳು ಹಾಗೂ ರಾಜ್ಯ ಸರ್ಕಾರದ ಜನಪರ ಯೋಜನೆಗಳು, ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್ ಅಭ್ಯರ್ಥಿ ಈ. ಅನ್ನಪೂರ್ಣಾ ತುಕಾರಾಂ ಅವರ ಕೈಹಿಡಿಯಲಿವೆ. ರಾಜ್ಯದ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದರು.
ಮುಖಂಡರಾದ ವೆಂಕಟರಾವ್ ಘೋರ್ಪಡೆ, ಕೆಪಿಸಿಸಿ ಜನರಲ್ ಸೆಕ್ರೆಟರಿ ವಿಠಲ್ ಯಾದವ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ಇ. ಚಿದಾನಂದಪ್ಪ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಆಶಾಲತಾ ಸೋಮಪ್ಪ, ಬುಳ್ಳಪ್ಪ, ತಾಲೂಕು ಯಾದವ ಸಂಘದ ಅಧ್ಯಕ್ಷ ಬುಳ್ಳಪ್ಪ, ಕಾರ್ಯದರ್ಶಿ ಹನುಮಂತು, ಎನ್. ನರಸಿಂಹಮೂರ್ತಿ, ಗೋಪಾಲಕೃಷ್ಣ ಮುಂತಾದವರು ಉಪಸ್ಥಿತರಿದ್ದರು.