ಕಾಂಗ್ರೆಸ್‌ ಸರ್ಕಾರಕ್ಕೆ ಹಾಲಿನ ಬಾಕಿ ಕೊಡಲು ಹಣ ಇಲ್ಲ

| Published : Apr 22 2024, 02:04 AM IST

ಸಾರಾಂಶ

ಮೋದಿ ತಮ್ಮ ತಾಯಿ ನಿಧನ ಹೊಂದಿದಾಗ ಕೇವಲ ಮೂರು ಗಂಟೆಯಲ್ಲಿ ಅಂತ್ಯಸಂಸ್ಕಾರ ಮಾಡಿ ಮತ್ತೆ ದೇಶದ ಕರ್ತವ್ಯಕ್ಕೆ ಹಾಜರಾದ ಅಪ್ಪಟ ದೇಶಪ್ರೇಮಿಯಾಗಿದ್ದಾರೆ

ಗದಗ: ಪ್ರಧಾನಿ ನರೇಂದ್ರ ಮೋದಿ ಅಪ್ಪಟ ದೇಶಭಕ್ತರಾಗಿದ್ದು, ಅವರು ದೇಶಕ್ಕಾಗಿ ದಿನದ 18 ಗಂಟೆ ನಿರಂತರ ಕೆಲಸ ಮಾಡುತ್ತಾರೆ ಎಂದು ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಶನಿವಾರ ತಾಲೂಕಿನ ಮಲ್ಲಸಂದ್ರ, ಅಸುಂಡಿ, ಬಿಂಕದಕಟ್ಟೆ, ಅಂತೂರು ಬೆಂತೂರು, ಹೊಸಳ್ಳಿ, ನೀಲಗುಂದ, ಚಿಂಚಲಿ ಹಾಗೂ ಕಲ್ಲೂರು ಗ್ರಾಮಗಳಲ್ಲಿ ರೋಡ್ ಶೋ ಮಾಡುವ ಮೂಲಕ ಅವರು ಮತಯಾಚನೆ ಮಾಡಿದರು.

ಬಲಿಷ್ಠ ದೇಶಕ್ಕೆ ಬಲಿಷ್ಠ ನಾಯಕತ್ವ ಬೇಕು. ಬಿಜೆಪಿ ಜಗತ್ತಿನ ಅತಿ ದೊಡ್ಡ ಪಕ್ಷವಾಗಿದೆ. ಪ್ರಧಾನಿ ನರೇಂದ್ರ ಮೋದಿ ದೇಶದ ಬಲಿಷ್ಠ ನಾಯಕರಾಗಿದ್ದಾರೆ. ಮೋದಿ ತಮ್ಮ ತಾಯಿ ನಿಧನ ಹೊಂದಿದಾಗ ಕೇವಲ ಮೂರು ಗಂಟೆಯಲ್ಲಿ ಅಂತ್ಯಸಂಸ್ಕಾರ ಮಾಡಿ ಮತ್ತೆ ದೇಶದ ಕರ್ತವ್ಯಕ್ಕೆ ಹಾಜರಾದ ಅಪ್ಪಟ ದೇಶಪ್ರೇಮಿಯಾಗಿದ್ದಾರೆ ಎಂದರು.

ಸಾಮಾಜಿಕವಾಗಿಯೂ ಮೋದಿ ಅವರು ಸಾಕಷ್ಟು ಸಹಾಯ ಮಾಡಿದ್ದಾರೆ. ಎಲ್ಲರಿಗೂ 10 ಕೆಜಿ ಅಕ್ಕಿ ಕೊಟ್ಟರು. ಕೋವಿಡ್ ಸಂದರ್ಭದಲ್ಲಿ ಎಲ್ಲರಿಗೂ ಮೂರು ಉಚಿತ ಲಸಿಕೆ ಹಾಕಿಸಿದರು. ನಮ್ಮ ದೇಶದಲ್ಲಿ ಯಾವುದೇ ಸಮಸ್ಯೆ ಇಲ್ಲ. ಮೋದಿ ನಾಲ್ಕು ಕೋಟಿ ಮನೆ ಕಟ್ಟಿಸಿದ್ದಾರೆ. ದೇಶದಲ್ಲಿ ನೂರು ಕೋಟಿ ಮನೆಗಳಿವೆ. ಎಲ್ಲ ಮನೆಗಳಿಗೂ ಜಲ ಜೀವನ್ ಮಿಷನ್ ಮೂಲಕ ನಳದ ನೀರು ಕೊಡುತ್ತಿದ್ದಾರೆ. ಮೋದಿ ಅವರು ಶಾಶ್ವತ ಗ್ಯಾರಂಟಿ ಯೋಜನೆ ನೀಡುತ್ತಿದ್ದಾರೆ ಎಂದರು.

ರಾಜ್ಯ ಆರ್ಥಿಕ ದಿವಾಳಿ:

ರಾಜ್ಯ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಆಡಳಿತ ಪಕ್ಷದ ಶಾಸಕರಿಗೆ ಅಭಿವೃದ್ಧಿಗೆ ಹಣ ಇಲ್ಲ ಎಂದು ಹೇಳುತ್ತಿದ್ದಾರೆ. ಬರ ಬಂದಿದೆ ರೈತರಿಗೆ ಕೇವಲ ಎರಡು ಸಾವಿರ ಪರಿಹಾರ ನೀಡಿ ಕೇಂದ್ರದ ಮೇಲೆ ಆರೋಪ ಮಾಡುತ್ತಿದ್ದಾರೆ. ಹಾಲು ಉತ್ಪಾದಕರಿಗೆ ಸುಮಾರು ₹1100 ಕೋಟಿ ಬಾಕಿ ಕೊಡಬೇಕಿದೆ. ಇದೊಂದು ರೈತ ವಿರೋಧಿ, ಬಡವರ, ದಲಿತರ ವಿರೋಧಿ ಸರ್ಕಾರ ಎಂದು ವಾಗ್ದಾಳಿ ನಡೆಸಿದರು. ಜನರ ತೆರಿಗೆ ಹಣವನ್ನು ಗ್ಯಾರಂಟಿಗಳಿಗೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಈ ವರ್ಷ ಒಂದು ಲಕ್ಷ ಐದು ಸಾವಿರ ಕೋಟಿ ಸಾಲ ಮಾಡಿದ್ದಾರೆ. ಪ್ರತಿಯೊಬ್ಬರ ತಲೆಯ ಮೇಲೆ ಐವತ್ತು ಸಾವಿರ ಸಾಲ ಹೇರಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಹಾಗೂ ಅನೇಕ ಮುಖಂಡರು ಹಾಜರಿದ್ದರು.