ಸಾರಾಂಶ
- ಅಜ್ಜಂಪುರ ಪಟ್ಟಣದಲ್ಲಿ ಶ್ರೀ ಬೀರಲಿಂಗೇಶ್ವರಸ್ವಾಮಿ ದೇವಾಲಯ ಪ್ರವೇಶೋತ್ಸವ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಶ್ರೀ ಭಕ್ತ ಕನಕದಾಸರ ಪ್ರತಿಮ ಲೋಕಾರ್ಪಣೆ ಕನ್ನಡಪ್ರಭ ವಾರ್ತೆ, ಅಜ್ಜಂಪುರ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ದುಡ್ಡಿನ ಕೊರತೆಯಿಲ್ಲ ಎಂದು ಕರ್ನಾಟಕ ಸರ್ಕಾರ ನಗರಾಭಿವೃದ್ಧಿ ಸಚಿವರು ಭೈರತಿ ಸುರೇಶ್ ಹೇಳಿದರು.ಬುಧವಾರ ಅಜ್ಜಂಪುರ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಬೀರಲಿಂಗೇಶ್ವರ ಸ್ವಾಮಿ ದೇವಾಲಯ ಪ್ರವೇಶೋತ್ಸವ ಮತ್ತು ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಪ್ರತಿಮೆ ಹಾಗೂ ಶ್ರೀ ಭಕ್ತ ಕನಕದಾಸರ ಪ್ರತಿಮೆ ಅನಾವರಣ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ವಿರೋಧ ಪಕ್ಷ ಹೇಳಿದಂತೆ, ಸರ್ಕಾರದ ಖಜಾನೆ ಖಾಲಿಯಾಗಿಲ್ಲ ಎಂದು ಪ್ರತಿಪಾದಿಸಿದ ಅವರು, ಸಿದ್ದರಾಮಯ್ಯ ಅವರದ್ದು ಬರಿದಾಗುವ ಖಜಾನೆಯೂ ಅಲ್ಲ. ಬಿಜೆಪಿ ಅವಧಿಯಲ್ಲಿ ಪೋಲಾಗುತ್ತಿದ್ದ ಶೇ 40 ರಷ್ಟು ಕಮಿಷನ್ ಗೆ ಕಡಿವಾಣ ಹಾಕಿದ್ದೇವೆ. ಸೋರಿಕೆಯಾಗುತ್ತಿದ್ದ ಹಣ ಅಭಿವೃದ್ಧಿಗೆ ಸಾಕಾಗಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪೂರಕ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ ಪಟ್ಟಣದ ಶುದ್ಧ ಕುಡಿಯುವ ನೀರಿಗೆ 25 ಕೋಟಿ, ತರೀಕೆರೆಗೆ 50 ಕೋಟಿ ಮಂಜೂರಾಗಿದೆ. ತರೀಕೆರೆ ಪುರಸಭೆ ವ್ಯಾಪ್ತಿ ಅಭಿವೃದ್ಧಿಗೆ 150 ಕೋಟಿ ರು.ಅಗತ್ಯವಾಗಿದ್ದು, 25 ಕೋಟಿ ರು.ಬಿಡುಗಡೆಗೆ ಸರ್ಕಾರದಿಂದ ಹಸಿರು ನಿಶಾನೆ ಸಿಕ್ಕಿದೆ. ಕ್ಷೇತ್ರದ ಪಾರ್ಕ್ ಮತ್ತು ಕೆರೆ ಅಭಿವೃದ್ಧಿಗೆ 5 ಕೋಟಿ, ತರೀಕೆರೆ ಬಿ.ಎಚ್. ರಸ್ತೆ ಕಾಮಗಾರಿಗೆ 6 ಕೋಟಿ, ಬಸ್ ನಿಲ್ದಾಣ ಅಭಿವೃದ್ಧಿಗೆ 4 ಕೋಟಿಗೆ ಡಿಪಿಆರ್ ಸಿದ್ಧವಾಗಿದೆ. ಕ್ಷೇತ್ರಕ್ಕೆ ಹೆಚ್ಚು ಅನುದಾನ ಮಂಜೂರಾಗಲು ಸಚಿವ ಭೈರತಿ ಸುರೇಶ್ ಕಾರಣ ಎಂದು ಹೇಳಿದರು.ಬೈರತಿ ಸುರೇಶ್ ಅವರು ಸಮಾಜದ ದೀಮಂತ ನಾಯಕ. ರಾಜಕೀಯ ಚತುರ, ಅವರು ಭವಿಷ್ಯದ ಮುಖ್ಯಮಂತ್ರಿ. 2023 ರಲ್ಲಿ ಸಿಎಂ ಗಾದಿಗೇರಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹೊಸದುರ್ಗ ಶ್ರೀ ಕನಕ ಗುರು ಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಇಲ್ಲಿನ ಶ್ರೀ ಬೀರಲಿಂಗೇಶ್ವರ ಸ್ವಾಮಿಯವರನ್ನು ಎಲ್ಲಾ ಸಮಾಜದವರೂ ಆರಾಧಿಸುತ್ತಿದ್ದಾರೆ. ಆತನೂ, ಸರ್ವರನ್ನೂ ಸಮಾನವಾಗಿ ಕಾಣುತ್ತಾ, ರೋಗ- ರುಜಿನ-ಪೀಡೆ ನಿವಾರಿಸಿ, ವೈದ್ಯನಂತೆ ಕಾರ್ಯ ನಿರ್ವಹಿಸುತ್ತಿದ್ದಾನೆ. ಬೇಡಿದ್ದನ್ನು ಕರುಣಿಸಿ, ಸಂಕಷ್ಟ ಪರಿಹರಿಸಿ, ಎಲ್ಲರ ಭಕ್ತಿಗೆ ಪಾತ್ರನಾಗಿದ್ದಾರೆ, ಆಧುನಿಕ ಯುಗದಲ್ಲಿಯೂ ದೈವತ್ವದ ಶಕ್ತಿ ಮೇಲು ಎಂಬುದನ್ನು ತೋರಿಸುತ್ತಿರುವುದು ವಿಶೇಷ ಎಂದು ಹೇಳಿದರು.ಯಳನಾಡು ಸಂಸ್ಥಾನದ ಶ್ರೀ ಜ್ಞಾನಪ್ರಭು ಸಿದ್ದರಾಮೇಶ್ವರ ದೇಶೀಕೇಂದ್ರ ಮಹಾಸ್ವಾಮೀಜಿ, ಎಡೆಯೂರಿನ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ, ಹುಣಸಘಟ್ಟದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ದೇವಾಲಯ ಸಮಿತಿ ಅಧ್ಯಕ್ಷ ಟಿ.ಜಿ. ಶಶಾಂಕ್, ದೇವಾಲಯ ನಿರ್ಮಾಣ ಸಮಿತಿ ಅಧ್ಯಕ್ಷರು ಎಂ.ಕೃಷ್ಣಮೂರ್ತಿ, ಮುಖಂಡರಾದ ಜಿ.ನಟರಾಜ್ ಮಾತನಾಡಿದರು. ತಾವರೆಕೆರೆ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಹಣ್ಣೆ ಮಠದ ಶ್ರೀ ಮರುಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಪಟ್ಟಣದ ಶ್ರೀ ಶಿವಾನಂದ ಆಶ್ರಮ ಶ್ರೀ ಚಿದಾನಂದ ಗಿರಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ಶಾಸಕ ರಾಘವೇಂದ್ರ ಹಿಟ್ನಾಳ್, ಶಿವಣ್ಣ, ತಮ್ಮಯ್ಯ, ಕುರುಬರ ಸಂಘ ಜಿಲ್ಲಾ ಘಟಕ ಅಧ್ಯಕ್ಷ ಮಂಜುನಾಥ್, ಕನಕಶ್ರೀ ಪ್ರಶಸ್ತಿ ಪುರಸ್ಕೃತರಾದ ಮುಗಳಿ ಲಕ್ಷ್ಮೀದೇವಮ್ಮ, ಮುಖಂಡರಾದ ಟಿ.ವಿ.ಶಿವಶಂಕರಪ್ಪ, ಜೋಗಿ ಪ್ರಕಾಶ್, ಷಡಾಕ್ಷರಿ, ಮೆಡಿಕಲ್ ಶಿವಾನಂದ್, ತಿಪ್ಪೇಶ್ ಮಡಿವಾಳ್ ಮತ್ತಿತರರು ಇದ್ದರು.14ಕೆಟಿಆರ್.ಕೆ.4ಃ
ಅಜ್ಜಂಪುರ ಪಟ್ಟಣದಲ್ಲಿ ಬುಧವಾರ ನಡೆದ ಶ್ರೀ ಬೀರಲಿಂಗೇಶ್ವರ ಸ್ವಾಮಿ ದೇವಾಲಯ ಪ್ರವೇಶೋತ್ಸವ, ಶ್ರೀ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಪ್ರತಿಮೆ ಅನಾವರಣ ಹಾಗೂ ಶ್ರೀ ಭಕ್ತ ಕನಕದಾಸರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮವನ್ನು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಉದ್ಘಾಟಿಸಿದರು. ಶಾಸಕ ಜಿ.ಎಚ್.ಶ್ರೀನಿವಾಸ್ ಮತ್ತಿತರರು ಇದ್ದಾರೆ.