ಜನವರಿಯೊಳಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಪತನ - ಭವಿಷ್ಯ ಅಲ್ಲ ವಾಸ್ತವ : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

| Published : Nov 12 2024, 01:33 AM IST / Updated: Nov 12 2024, 08:49 AM IST

ಸಾರಾಂಶ

  ಜನವರಿಯೊಳಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಬೀಳಲಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿರುವುದು ಭವಿಷ್ಯ ಅಲ್ಲ, ವಾಸ್ತವ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪುನರುಚ್ಚರಿಸಿದರು.

ಚನ್ನಪಟ್ಟಣ: ಜನವರಿಯೊಳಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಬೀಳಲಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿರುವುದು ಭವಿಷ್ಯ ಅಲ್ಲ, ವಾಸ್ತವ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪುನರುಚ್ಚರಿಸಿದರು.

ಚನ್ನಪಟ್ಟಣದಲ್ಲಿ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ನಡೆದ ಬೃಹತ್ ಪ್ರಚಾರ ಸಭೆ ಉದ್ಘಾಟಿಸಿದ ಅವರು, ನನ್ನಂತೆಯೇ ಸೋಮಣ್ಣ ಅವರಿಗೂ ಜೋತಿಷ್ಯ ಕೇಳುವ ಅಭ್ಯಾಸ ಇದೆ. ಆದರೆ, ಅವರು ಸತ್ಯವನ್ನೇ ಹೇಳಿದ್ದಾರೆ. ಈ ಸರ್ಕಾರ ಬಹಳ ದಿನ ಇರುವುದಿಲ್ಲ ಎಂದರು.

ಒಂದು ಕಾಲದಲ್ಲಿ ನಾನು ಮತ್ತು ಯಡಿಯೂರಪ್ಪ ಕಿತ್ತಾಡಿದ್ದೆವು. ನಾನು ಪಾದಯಾತ್ರೆ ಮಾಡಿದರೆ, ಅವರು ಪಾದಯಾತ್ರೆ ಮಾಡುತ್ತಿದ್ದರು. ಆದರೆ, ನಾವಿಬ್ಬರು ಈಗ ಒಂದಾಗಿರುವುದೇ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೆಸೆಯಲು ಎಂದು ದೇವೇಗೌಡರು ಯಡಿಯೂರಪ್ಪ ಅವರ ಕೈ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.

ಹಾಸನದ ಪ್ರಕರಣವನ್ನು ಬಳಸಿಕೊಂಡು, ಇಡೀ ದೇವೇಗೌಡರ ಕುಟುಂಬ ಮುಗಿಸಲು ಹುನ್ನಾರ ನಡೆದಿತ್ತು. ಈ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೊಕ್ಕು ಮುರಿಯಲು ಚನ್ನಪಟ್ಟಣದ ಮಹಾಜನತೆ ನಿಖಿಲ್ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಪ್ರಧಾನಿ ಮೋದಿ ಹಾಗೂ ಕುಮಾರಸ್ವಾಮಿ ಅವರನ್ನು ಅರೆಸ್ಟ್ ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ಡಿಕೆಶಿ ಅವರಿಗೆ ಅವರ ಮಾತುಗಳೇ ಮುಳುವಾಗಲಿದೆ. ತಮ್ಮ ಮಗನನ್ನು ಚುನಾವಣೆಗೆ ನಿಲ್ಲಿಸಲು 50 ಕೋಟಿ ಹಣಕ್ಕಾಗಿ ಮಹಾನುಭಾವನೊಬ್ಬನಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇದೇ ಚನ್ನಪಟ್ಟಣದ ಮಹಾ ಜನತೆಯಿಂದಲೇ ಸಿಎಂ ಆಗಿದ್ದ ಕುಮಾರಸ್ವಾಮಿಗೆ ಅಂತಹ ಅನಿವಾರ್ಯತೆಯೇ ಇಲ್ಲ. ಕಾಂಗ್ರೆಸ್ ಎಂದಿಗೂ ನಂಬಿಕೆಗೆ ಅರ್ಹರಲ್ಲ ಎಂದು ಅವರ ಜತೆ ಸಹವಾಸವೇ ಬೇಡ ಎಂದು ಕುಮಾರಸ್ವಾಮಿಗೇ ಹೇಳಿದ್ದೆ. ಆದರೆ, ಅವರ ಮೇಲೆ ಒತ್ತಡ ಹಾಕಿ, ಕಾಂಗ್ರೆಸ್‌ನೊಂದಿಗೆ ಮೈತ್ರಿ ಸರ್ಕಾರ ರಚಿಸಲಾಗಿತ್ತು ಎಂದು ವಿಷಾದಿಸಿದರು.ನಿಖಿಲ್ ನಮ್ಮ ಅಭ್ಯರ್ಥಿ ಎಂದು 11 ದಿನದ ಹಿಂದೆ ಯಾರು ಹೇಳಿರಲಿಲ್ಲ. ಆದರೆ, 6 ತಿಂಗಳಿನಿಂದ ನಾನೇ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಿದ್ದ ಡಿ.ಕೆ.ಶಿವಕುಮಾರ್‌ಗೆ ಈಗ ಏನಾಗಿದೆ? ಅವರ ಬದಲು ಮತ್ತೊಬ್ಬರು ಅಖಾಡದಲ್ಲಿದ್ದಾರೆ ಎಂದು ಅವರು ತಿರುಗೇಟು ಕೊಟ್ಟರು.

ಸಿದ್ದರಾಮಯ್ಯ ಅವರನ್ನು ಹಣಕಾಸು ಸಚಿವರನ್ನಾಗಿ ಮಾಡಿದ್ದೆ ಈ ದೇವೇಗೌಡ. ಮತ್ತೆ ಅವರೇನು ಎಂದು ಹೇಳಲು ನಾನು ಹೋಗಲ್ಲ. ನಿಖಿಲ್ ನನ್ನ ಮೊಮ್ಮಗ ಎನ್ನುವ ಮಾತು ಬೇಕಿಲ್ಲ. ನಾಮಪತ್ರ ಸಲ್ಲಿಸುವವರೆಗೂ ನಿಖಿಲ್ ಹೆಸರನ್ನು ನಾನು ಉಲ್ಲೇಖಿಸಲೇ ಇಲ್ಲ. ಮಹಾನುಭಾವ ಎನ್ನುವ ಡಿ.ಕೆ.ಶಿವಕುಮಾರ್ ಸೊಕ್ಕು ಮುರಿಯಲು ನಿಖಿಲ್ ಗೆಲುವು ಅನಿವಾರ್ಯ. ಪುಣ್ಯಾತ್ಮರಾದ ಮತದಾರರ ನಿರ್ಣಯವೇ ಎಲ್ಲದಕ್ಕೂ ಉತ್ತರ ನೀಡಲಿದೆ ಎಂದರು.

ನಾನು ಮತ್ತೆ ಕ್ಷೇತ್ರಕ್ಕೆ ಬರುತ್ತೇನೆ. ಕ್ರಮ ಸಂಖ್ಯೆ 1ಕ್ಕೆ ಎಲ್ಲರೂ ತಪ್ಪದೇ ಮತದಾನ ಮಾಡಿ. ಇದೇ ತಿಂಗಳ 24ರ ಬೆಳಗ್ಗೆ ನಾನು ಹಾಗೂ ಯಡಿಯೂರಪ್ಪ ಅವರು ಒಟ್ಟಿಗೆ ಬಂದು ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಹೇಳಿದರು.

ಕೇಂದ್ರ ಸಚಿವರಾದ ಕುಮಾರಸ್ವಾಮಿ, ವಿ.ಸೋಮಣ್ಣ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ, ವಿಪಕ್ಷ ನಾಯಕ ಆರ್.ಅಶೋಕ್ , ಸಂಸದ ಡಾ.ಸಿ.ಎನ್ .ಮಂಜುನಾಥ್ , ಮಾಜಿ ಸಚಿವರಾದ ನಾರಾಯಣಗೌಡ, ಬಂಡಪ್ಪ ಕಾಶಂಪುರ್, ಸಾ.ರಾ.ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.