ಸಾರಾಂಶ
ಈಶ್ವರ ಶೆಟ್ಟರ
ಕನ್ನಡಪ್ರಭ ವಾರ್ತೆ ಬಾಗಲಕೋಟೆಸ್ವಾತಂತ್ರ್ಯದ ನಂತರ ನಡೆದ ಎಲ್ಲ ಲೋಕಸಭೆ ಚುನಾವಣೆಗಳಲ್ಲೂ ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸುಳಿದ ಬಾಳೆಹಣ್ಣಿನಂತೆ ಇತ್ತು. ಆದರೆ, 1984ರಲ್ಲಿ ನಡೆದ ಚುನಾವಣೆಯಲ್ಲಿ ಮಾತ್ರ ಪ್ರಯಾಸದ ಗೆಲವು ಕಂಡಿತು. ಅದಕ್ಕೆ ಹತ್ತು ಹಲವಾರು ಕಾರಣಗಳಿದ್ದವು.
1984 ಇಸವಿ ಭಾರತದ ಇತಿಹಾಸದಲ್ಲಿ ಕರಾಳ ಘಟನೆಯೊಂದಕ್ಕೆ ಸಾಕ್ಷಿಯಾಯಿತು. ಆ ವರ್ಷ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆ ನಡೆಯಿತು. ಇದು ರಾಜಕೀಯದ ಮೇಲೂ ಪ್ರಭಾವ ಬೀರಿತು. ಇಂದಿರಾ ಹತ್ಯೆಯಿಂದಾಗಿ 7ನೇ ಲೋಕಸಭೆಯ ಅವಧಿ ಪೂರ್ಣಗೊಳ್ಳುವ ಮೊದಲೇ ವಿಸರ್ಜಿಸಲ್ಪಟ್ಟಿತ್ತು. 8ನೇ ಲೋಕಸಭೆಗೆ ಚುನಾವಣೆ ಸಂದರ್ಭದಲ್ಲಿ ದೇಶದೆಲ್ಲೆಡೆ ಕಾಂಗ್ರೆಸ್ ಪರ ಬಲವಾದ ಗಾಳಿ ಬೀಸಿತ್ತು. ಆದರೂ ಬಾಗಲಕೋಟೆ ಲೋಕಸಭೆ ಚುನಾವಣೆಯಲ್ಲಿ ಮಾತ್ರ ಅತ್ಯಲ್ಪ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಾಗಿದ್ದರು.ಅನೀರಿಕ್ಷಿತ ಟಿಕೆಟ್:ಕಾಂಗ್ರೆಸ್ ಹಾಗೂ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಉಭಯ ಅಭ್ಯರ್ಥಿಗಳು ಉತ್ತಮ ಸ್ನೇಹಿತರು. ಜೊತೆಗೆ ಚುನಾವಣೆಯನ್ನು ಸಹ ಅಷ್ಟೇ ಗಂಭೀರವಿಲ್ಲದೆ ನಡೆಸಿದವರು. ವಿಶೇಷವೆಂದರೆ ಚುನಾವಣೆ ಸಂದರ್ಭದಲ್ಲಿಯೂ ಪರಸ್ಪರ ವಿಶ್ವಾಸದಿಂದ ಇದ್ದೆವು ಎಂದು ನೆನಪಿಸಿಕೊಳ್ಳುತ್ತಾರೆ ಡಾ.ಎಂ.ಪಿ.ನಾಡಗೌಡ ಅವರು.
ವೀರೇಂದ್ರ ಪಾಟೀಲ ಅವರು ಬಾಗಲಕೋಟೆ ಲೋಕಸಭೆಯಿಂದ 1980ರಲ್ಲಿ ಚುನಾಯಿತರಾದ ನಂತರ 84ರಲ್ಲಿ ಬಾಗಲಕೋಟೆ ಬದಲಿಗೆ ಕಲಬುರ್ಗಿಯತ್ತ ಮುಖ ಮಾಡಿದರು. ಈ ಸಂದರ್ಭದಲ್ಲಿ ಬಾಗಲಕೋಟೆ ಲೋಕಸಭೆಯ ಕಾಂಗ್ರೆಸ್ ಅಭ್ಯರ್ಥಿಯ ಆಯ್ಕೆಗೆ ಹಲವರು ಲಾಬಿ ಮಾಡಿದ್ದರು. ವೀರೇಂದ್ರ ಪಾಟೀಲ ಅವರು ಬಾಗಲಕೋಟೆಯ ಡಾ.ಆರ್.ಕೆ.ಕಂಠಿ ಪರ ಒಲವು ಹೊಂದಿದ್ದರು. ಆದರೆ, ಎಚ್.ಬಿ.ಪಾಟೀಲ ಅವರು ಇವರನ್ನು ಹಿಂದಿಕ್ಕಿ ಬಂಗಾರಪ್ಪ ಹಾಗೂ ಗುಂಡೂರಾವ್ ಅವರ ಬೆಂಬಲ ಮತ್ತು ಜಿಲ್ಲೆಯ ಪ್ರಮುಖ ನಾಯಕರ ಸಹಕಾರದೊಂದಿಗೆ ಕಾಂಗ್ರೆಸ್ ಟಿಕೆಟ್ ತಂದು ಗೆಲವು ಕಂಡರು.ಜನತಾ ಪಕ್ಷದಿಂದ ಡಾ.ಎಂ.ಪಿ.ನಾಡಗೌಡ ಅವರನ್ನು ಚುನಾವಣೆಗೆ ನಿಲ್ಲಿಸಲು ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ನಿರ್ಧರಿಸಿದಾಗ ಅವರು ಇಳಕಲ್ಲ ಪಟ್ಟಣದಲ್ಲಿ ವೈದ್ಯಾಧಿಕಾರಿಯಾಗಿ ಸೇವೆಯಲ್ಲಿದ್ದರು. ಅವರ ಸರ್ಕಾರಿ ಸೇವೆಗೆ ರಾಜೀನಾಮೆ ಕೊಡಿಸಿ ಚುನಾವಣೆಗೆ ಸ್ಪರ್ಧಿಸುವಂತೆ ಮಾಡಿದ್ದು ಸಹ ವಿಶೇಷವಾಗಿತ್ತು.
ಪ್ರಚಾರಕ್ಕೆ ರಾಷ್ಟ್ರೀಯ ನಾಯಕರು:84ರ ಚುನಾವಣೆ ಬಾಗಲಕೋಟೆ ಲೋಕಸಭೆ ಮಟ್ಟಿಗೆ ಹೊಸತನ ಮತ್ತು ಪ್ರಚಾರಕ್ಕೆ ರಾಷ್ಟ್ರೀಯ ನಾಯಕರು ಬರುವಂತೆ ಮಾಡಿತ್ತು. ಕಾರಣ ಜನತಾ ಪಕ್ಷದ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದರು. ಆ ಪಕ್ಷದ ಪರ ಪ್ರಚಾರಕ್ಕೆ ಫಾರೂಕ್ ಅಬ್ದುಲ್ಲಾ, ಎಚ್.ಡಿ.ದೇವೇಗೌಡ ಸೇರಿದಂತೆ ಅನೇಕ ನಾಯಕರು ಬಂದರೆ ಕಾಂಗ್ರೆಸ್ ಪಕ್ಷದ ಪ್ರಚಾರಕ್ಕೆ ಬಂಗಾರಪ್ಪ, ಗುಂಡೂರಾವ್ ಸೇರಿದಂತೆ ಅನೇಕ ನಾಯಕರು ಪ್ರಚಾರದಲ್ಲಿ ಭಾಗಿಯಾಗಿದ್ದರು.
ಒಟ್ಟಾರೆ ಸಮಬಲದ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷ ಗೆಲವು ಕಂಡರೂ ಮುಂಬರುವ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯ ಶಕ್ತಿಯೊಂದು ಸದ್ದಿಲ್ಲದೆ ಜಿಲ್ಲೆಯಲ್ಲಿ ತಳವೂರಲೂ ಈ ಚುನಾವಣೆ ಕಾರಣವಾಯಿತು.ನೇರ ಸ್ಪರ್ಧೆ:
1984ರ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜನತಾ ಪಕ್ಷದಿಂದ ಮಾತ್ರ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರಿಂದ ನೇರ ಸ್ಪರ್ಧೆಯ ಕಣವಾಗಿ ಮಾರ್ಪಟ್ಟಿತ್ತು. ಎರಡು ಪಕ್ಷದ ಅಭ್ಯರ್ಥಿಗಳಿಗೆ ಲೋಕಸಭೆ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಸಮಬಲದ ಹೋರಾಟ ನಡೆದಿತ್ತು. ಅಂದು ನಡೆದ ಚುನಾವಣೆಯಲ್ಲಿ 4,87,671ರಷ್ಟು ಒಟ್ಟು ಮತದಾನವಾಗಿತ್ತು. ಕಾಂಗ್ರೆಸ್ ಎಚ್.ಬಿ.ಪಾಟೀಲವರು 2,34,955 ಮತಗಳನ್ನು ಪಡೆದು ಆಯ್ಕೆಯಾದರು. ಜನತಾ ಪಕ್ಷದ ಅಭ್ಯರ್ಥಿ ಡಾ.ಎಂ.ಪಿ.ನಾಡಗೌಡರು 2,24,443 ಮತಗಳನ್ನು ಪಡೆದಿದ್ದರು. ಗೆಲವಿನ ಅಂತರ 10,512 ರಷ್ಟಿತ್ತು.---