ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ ಬರ ಪರಿಸ್ಥಿತಿಯನ್ನು ನಿರ್ವಹಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಬದಲು ತಮಿಳುನಾಡಿಗೆ ನೀರು ಬಿಡುವುದರಲ್ಲಿ ಕಾಲಹರಣ ಮಾಡಿ, ರಾಜ್ಯದ ರೈತರನ್ನು ಸಂಕಷ್ಟಕ್ಕೆ ದೂಡಿದೆ ಎಂದು ಬಿಜೆಪಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಹಾಗೂ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎನ್‌ರಿಚ್ ಮಹದೇವಸ್ವಾಮಿ ತಿಳಿಸಿದರು.
ತಾಲೂಕಿನ ಸಂತೇಮರಹಳ್ಳಿಯಲ್ಲಿರುವ ಶ್ರೀ ಶಿವಕುಮಾರಸ್ವಾಮಿ ತೋಟದಲ್ಲಿ ಬಿಜೆಪಿ ರೈತ ಮೋರ್ಚಾದಿಂದ ನಡೆದ ರೈತರ ಪರಿಕ್ರಮ ಯಾತ್ರೆಯ ಸಮರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕೇಂದ್ರ ಸರ್ಕಾರ ನೆರವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ವಿಫಲವಾಗಿರುವ ರಾಜ್ಯ ಸರ್ಕಾರ, ಚುನಾವಣೆ ವೇಳೆ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಒಕ್ಕೂಟದ ವ್ಯವಸ್ಥೆಯ ಬಗ್ಗೆ ಗೌರವವಿಲ್ಲ. ಪದೇ ಪದೇ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವ ಸಿಎಂ ಕಳೆದ 9 ತಿಂಗಳಿಂದ ರೈತರಿಗೆ ಮಾಡಿರುವ ಅನುಕೂಲವಾದರು ಏನು ಎಂದು ಪ್ರಶ್ನೆ ಮಾಡಿದರು?.ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿ, ಈ ಯೋಜನೆಗಳಿಗೆ ಹಣ ಹೊಂದಾಣಿಕೆ ಮಾಡಲು ರೈತರು ಹಾಗೂ ರೈತ ಮಕ್ಕಳ ಜೇಬಿಗೆ ಕೈ ಹಾಕಗಿದೆ. ರೈತರಿಗೆ ಹೆಚ್ಚುವರಿ ತೆರಿಗೆಗಳ ಭಾರ. ಕೃಷಿ ಪರಿಕರಣಗಳು, ಬಿತ್ತನೆ ಬೀಜ, ಗೊಬ್ಬರ ಹಾಗೂ ರೈತರ ಜಮೀನುಗಳಿಗೆ ಖರೀದಿ ಹಾಗೂ ನೋಂದಾಣಿಗಳಿಗೆ ಹೆಚ್ಚುವರಿ ಶುಲ್ಕವನ್ನು ಹಾಕುತ್ತಿದೆ. ಅಲ್ಲದೇ ರೈತ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾನಿಧಿ ಸ್ಕಾಲರ್‌ಶಿಪ್ ಅನ್ನು ನಿಲ್ಲಿಸಿದೆ. ಅಲ್ಲದೇ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದ ೬ ಸಾವಿರ ಜೊತೆಗೆ ರಾಜ್ಯ ಸರ್ಕಾರ ನೀಡುತ್ತಿದ್ದ ೪ ಸಾವಿರ ರು.ಗಳನ್ನು ರದ್ದುಪಡಿಸಿ, ರೈತರಿಗೆ ನೀಡುತ್ತಿದ್ದ ಸಹಾಯಧನವನ್ನು ಈ ಸರ್ಕಾರ ಕಟ್ ಮಾಡಿದೆ ಎಂದರು. ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಮಳೆಗಾಲದ ಸಂದರ್ಭದಲ್ಲಿ ಸಮರ್ಪಕವಾಗಿ ನೀರು ಹರಿಸಿದ್ದರೆ ಈಗ ನಮ್ಮ ಭಾಗದಲ್ಲಿ ಭೀಕರ ಬರ ಬರುತ್ತಿರಲಿಲ್ಲ. ದೂರದೃಷ್ಟಿತ್ವದ ರೈತ ನಾಯಕರಾದ ಯಡಿಯೂರಪ್ಪ ಅವರು ಈ ಭಾಗದ ಬರ ಪರಿಸ್ಥಿತಿಯನ್ನು ಗಮನಿಸಿ, ೨೦೦೮ರಲ್ಲಿಯೇ ೨೦ಕ್ಕು ಹೆಚ್ಚು ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಜಾರಿ ಮಾಡಿದ್ದರು. ಈ ಯೋಜನೆಯಡಿಯಲ್ಲಿ ಚಾಲ್ತಿಯಲ್ಲಿರುವ ಪಂಪ್, ಮೋಟರ್‌ಗಳ ದುರಸ್ತಿ ಮಾಡಿ, ವಿದ್ಯುತ್ ಬಿಲ್ ಪಾವತಿ ಮಾಡಿ, ಕೆರೆಗಳಿಗೆ ನೀರು ಹರಿಸಿದ್ದರೆ ಇಂದು ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಬವಣೆ ತಪ್ಪುತ್ತಿತ್ತು. ಹನೂರು ಮಂಡಲದ ರೈತ ಮೋರ್ಚಾ ಅಧ್ಯಕ್ಷ ಜಡೇಸ್ವಾಮಿ ಮಾತನಾಡಿ, ಹನೂರು ಭಾಗದಲ್ಲಿ ಭೀಕರವಾದ ಬರ ಅವರಿಸಿದೆ, ಈ ಭಾಗದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮ ಜಾರಿಯಾಗಿಲ್ಲ. ಕಾಡಂಚಿನ ಪ್ರದೇಶಗಳಲ್ಲಿ ವನ್ಯ ಪ್ರಾಣಿಗಳು ಸಹ ನೀರಿಲ್ಲ. ಹಾಡಿ ಹಾಗೂ ಕುಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿದೆ. ರೈತ ಮೋರ್ಚಾದಿಂದ ರಾಜ್ಯ ಸರ್ಕಾರದ ವಿರುದ್ದ ಉಗ್ರ ಹೋರಾಟ ರೂಪಿಸುವುದಾಗಿ ತಿಳಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಮಾತನಾಡಿ, ರಾಜ್ಯ ಸರ್ಕಾರ ಜನವಿರೋಧ ನಿಲುವಿನ ವಿರುದ್ದ ಬಿಜೆಪಿ ರೈತ ಮೋರ್ಚಾ ಹಮ್ಮಿಕೊಂಡಿದ್ದ ಗ್ರಾಮ ಪರಿಕ್ರಮ ಯಾತ್ರೆ ಯಶಸ್ವಿಯಾಗಿದ್ದು, ಪ್ರತಿ ಮಂಡಲದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಗ್ರಾಮ ಹಾಗೂ ಬೂತ್ ಮಟ್ಟದಲ್ಲಿ ರೈತರನ್ನು ಸಂಘಟಿಸಿ, ಕೇಂದ್ರ ಸರ್ಕಾರ ಜನಪರ ಯೋಜನೆಗಳು ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆಗಳ ವಿರುದ್ದ ಕರ ಪತ್ರಗಳನ್ನು ಮನೆ ಮನೆಗೆ ಹಂಚುವ ಮೂಲಕ ಜಾಗೃತಿ ಮೂಡಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಚಾ.ನಗರ ರೈತ ಮೋರ್ಚಾ ಮಂಡಲದ ಅಧ್ಯಕ್ಷ ಅಯ್ಯನಪುರ ವಿಜಯೇಂದ್ರ, ಪ್ರಧಾನ ಕಾರ್ಯದರ್ಶಿ ಪುಣಜನೂರು ಚಂದ್ರಶೇಖರ್, ಕೊಳ್ಳೇಗಾಲ ಮಂಡಲದ ಅಧ್ಯಕ್ಷ ಕೆ.ಎನ್. ನಾಗೇಶ್, ನಗರ ಮಂಡಲದ ಅಧ್ಯಕ್ಷ ಕೆ.ಎಲ್. ಮಹದೇವಸ್ವಾಮಿ, ಮಹಾಶಕ್ತಿಕೇಂದ್ರದ ಅಧ್ಯಕ್ಷ ಎಸ್.ಎಂ. ಲೋಕೇಶ್, ಎಪಿಎಂಸಿ ನಿರ್ದೇಶಕಿ ಕಲಾವತಿ, ರೈತ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಮ್ಮ ಆಲೂರು ಪುಷ್ಪಲತಾ, ಗೀತಾ, ಆಲೂರು ರವಿ, ಹೊಮ್ಮ ಬಾಬು, ಬೂದಂಬಳ್ಳಿ ಬಾಬು ಮೊದಲಾದವರು ಇದ್ದರು.