ಸಾರಾಂಶ
ಕನ್ನಡಪ್ರಭ ವಾರ್ತೆ ಕೊಪ್ಪ
ತಾಯ್ತನ ಎನ್ನುವುದು ಒಂದು ಜೀವ ಭೂಮಿಗೆ ತರುವ ಪ್ರಕ್ರಿಯೆಯಾಗಿದೆ. ಆರೋಗ್ಯವಂತ ಮಗುವಿನ ಜನನ ಮತ್ತು ಸಹಜ ಹೆರಿಗೆ ಬಯಸುವ ಗರ್ಭಿಣಿ ತಾಯಂದಿರು ಆಹಾರ ಕ್ರಮ ಮತ್ತು ಜೀವನಕ್ರಮಗಳ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ಆದರ್ಶ ಆಸ್ಪತ್ರೆಯ ಡಾ. ಅನಿತಾ ಎನ್.ರಾವ್ ಹೇಳಿದರು.ಭಾರತೀಯ ವೈದ್ಯಕೀಯ ಸಂಘ ಮತ್ತು ಆದರ್ಶ ಆಸ್ಪತ್ರೆ ಕೊಪ್ಪ, ಲಯನ್ಸ್ ಕ್ಲಬ್ ಕೊಪ್ಪ ಸಹ್ಯಾದ್ರಿ, ಹಾಗೂ ಕೊಪ್ಪ ವಿಪ್ರ ಮಹಿಳಾ ವೇದಿಕೆ ಸಹಯೋಗದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಪಟ್ಟಣದ ಶಾಲಿನಿ ಡಯೋಗ್ನೋಸಿಸ್ ಸೆಂಟರ್‌ನಲ್ಲಿ ಏರ್ಪಡಿಸಿದ್ದ ಸಹಜ ಹೆರಿಗೆಗೆ ಸುಲಭೋಪಾಯಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಗರ್ಭಿಣಿಯರಿಗೆ ಜೀವನಶೈಲಿ, ಆಹಾರ ಪದ್ಧತಿ ಯೋಗ ಹಾಗೂ ವ್ಯಾಯಾಮಗಳ ಕುರಿತು ಸಲಹೆ ನೀಡಲು ಈ ಕಾರ್ಯಕ್ರಮ ಆಯೋಜಿಸಲಾಗಿದ್ದು ಮಹಿಳಾ ಆರೋಗ್ಯ ಸಲಹೆಗಾರರಾದ ಪ್ರಸೂತಿ ತಜ್ಞೆ ಡಾ.ವೀಣಾ ಎಸ್.ಭಟ್‌ರವರು ಈ ಬಗ್ಗೆ ನೀಡುವ ಮಾಹಿತಿಯನ್ನು ಗರ್ಭಿಣಿ ಮಹಿಳೆಯರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಡಾ.ವೀಣಾ ಎಸ್.ಭಟ್ ಮಾತನಾಡಿ, ಗರ್ಭಿಣಿ ಮಹಿಳೆಯರು ತಮ್ಮ ಮನಸ್ಸನ್ನು ಒತ್ತಡದಿಂದ ದೂರ ಇಡಲು ಪ್ರಯತ್ನಿಸಬೇಕು. ಒಳ್ಳೆಯ ಪುಸ್ತಕ ಓದುವಿಕೆ, ಪ್ರೀತಿ ಪಾತ್ರರೊಂದಿಗೆ ಒಡನಾಟ, ಮಾನಸಿಕ ಆರೋಗ್ಯ ಸದೃಢಗೊಳಿಸುತ್ತದೆ. ತಾಯಿ ಮಾನಸಿಕ ಆರೋಗ್ಯ ಮಗುವಿನ ಆರೋಗ್ಯದ ಮೇಲೂ ಪ್ರಭಾವ ಬೀರಲಿದೆ. ಹೆರಿಗೆ ಸಂದರ್ಭದಲ್ಲಿ ಮಗುವಿನ ಬೆಳವಣಿಗೆಗೆ ಆಮ್ಲಜನಕದ ಪೂರೈಕೆ ಅತ್ಯಗತ್ಯವಾಗಿರುವುದರಿಂದ ಗರ್ಭಿಣಿಯರು ಧ್ಯಾನ ಮತ್ತು ಉಸಿರಾಟದ ವ್ಯಾಯಾಮ ಮಾಡುತ್ತಿರಬೇಕು. ಯಾವುದೇ ಕಿರಿಕಿರಿ ಇಲ್ಲದೆ ದಿನಕ್ಕೆ ೮ರಿಂದ ೧೦ ಗಂಟೆಗಳ ಕಾಲ ನಿದ್ರಿಸುವುದು ಗರ್ಭಿಣಿಯರಿಗೆ ಅತ್ಯಗತ್ಯ. ಸುಖ ನಿದ್ರೆ ಮಗುವಿನ ಉತ್ತಮ ಬೆಳವಣಿಗೆಗೆ ಅಗತ್ಯವಾಗಿದೆ. ನಿದ್ರೆಯಿಂದ ಮನಸ್ಸು ಕೂಡ ಶಾಂತವಾಗಿರುತ್ತದೆ. ಗರ್ಭಿಣಿಯರು ಯಥೇಚ್ಛವಾಗಿ ನೀರು ಕುಡಿಯುವುದನ್ನು ರೂಢಿಮಾಡಿಕೊಳ್ಳಬೇಕು. ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಮೂತ್ರಕೋಶದ ಸೋಂಕನ್ನು ತಡೆಯಲು ಇದು ಸಹಕಾರಿಯಾಗುತ್ತದೆ. ಗರ್ಭಿಣಿಯರು ಕೊಬ್ಬಿನಾಂಶವುಳ್ಳ ಆಹಾರದಿಂದ ದೂರವಿದ್ದು ಯಥೇಚ್ಛವಾಗಿ ಪೌಷ್ಟಿಕಾಂಶವುಳ್ಳ ಹಣ್ಣು ತರಕಾರಿಗಳ ಸೇವನೆಯನ್ನು ರೂಢಿಸಿಕೊಳ್ಳಿ. ಗರ್ಭಾವಸ್ಥೆಯಲ್ಲಿ ಮಗುವಿನ ಬೆಳವಣಿಗೆ ಮತ್ತು ಸಹಜ ಹೆರಿಗೆಗಾಗಿ ಹಲವಾರು ವ್ಯಾಯಾಮ ಯೋಗಾಸನಗಳಿದ್ದು ಮಾರ್ಗದರ್ಶಕರಿಂದ ಮಾಹಿತಿ ಪಡೆದು ಮಾಡಬಹುದು ಎಂದ ಅವರು ಹಲವಾರು ವ್ಯಾಯಾಮ ಯೋಗಾಸನಗಳನ್ನು ಪ್ರಾತ್ಯಕ್ಷಿಕವಾಗಿ ವೇದಿಕೆಯಲ್ಲಿ ತೋರಿಸಿಕೊಟ್ಟರು.
ಮಾಹಿತಿ ಕಾರ್ಯಕ್ರಮದ ನಂತರ ಪಟ್ಟಣದ ಹೊರವಲಯದ ಅಮ್ಮಡಿ ಭಾರತೀಯ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರೊಂದಿಗೆ ಸಂವಾದ ಮತ್ತು ಯೋಗಾಸನ ಕಾರ್ಯಕ್ರಮ ನಡೆಯಿತು. ಆದರ್ಶ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ನಟರಾಜ್, ಡಾ.ಅನಿತಾ ನಟರಾಜ್, ಲಯನ್ಸ್ ಕ್ಲಬ್ ಕೊಪ್ಪ ಸಹ್ಯಾದ್ರಿ ಮತ್ತು ವಿಪ್ರ ಮಹಿಳಾ ವೇದಿಕೆಯ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.