ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಪುರ
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಹಿಂದಿನಿಂದಲೂ ವಂಚನೆ ಮಾಡಿಕೊಂಡೆ ಬಂದಿದೆ ಎಂದು ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಆರೋಪಿಸಿದರು.ತಾಲೂಕಿನ ಕೂನೂರು ಗ್ರಾಮದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಮತ್ತು ಬಸವಣ್ಣ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ವಂಚನೆ ಮಾಡಿಕೊಂಡೆ ಬಂದಿದ್ದು, ಬಿಜೆಪಿ ಕೂಡ ಅಂಬೇಡ್ಕರ್ ಅವರನ್ನು ಕಡೆಗಣಿಸಿದೆ. 80 ರ ದಶಕದವರೆಗೂ ಅಂಬೇಡ್ಕರ್ ಅವರು ಯಾರು? ಅವರ ಆಚರಣೆ ಯಾವುದು ಇರಲಿಲ್ಲ. ದಲಿತರಲ್ಲಿ ಅಂಬೇಡ್ಕರ್ ಬಗ್ಗೆ ಒಂದು ಪ್ರಜ್ಞೆ ಬೆಳೆದ ನಂತರ ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ನೆನೆಸಿಕೊಳ್ಳಲು ಶುರು ಮಾಡಿದೆ ಎಂದರು.
ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಸ್ವಕ್ಷೇತ್ರದಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಣೆ ಮಾಡಿಲ್ಲ. ಡಿ.ಕೆ. ಶಿವಕುಮಾರ್ ಅವರ ಕ್ಷೇತ್ರದಲ್ಲಿ ಅವರ ಬೆಂಬಲಿಗರ ಒಕ್ಕಲಿಗರ ಬೀದಿಯಲ್ಲಿ ಆಚರಣೆ ಮಾಡಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವರ ಕ್ಷೇತ್ರದ ಕುರುಬರ ಬೀದಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ಮಾಡಿಲ್ಲ ಎಂದರು.ಈ ದೇಶದಲ್ಲಿ ಕ್ರಿಶ್ಚಿಯನ್, ಮುಸಲ್ಮಾನರು ಧಾರ್ಮಿಕ ಅಲ್ಪಸಂಖ್ಯಾತರು ಹಿಂದುಳಿದ ಜಾತಿಗಳಿಗೆ ಪ್ರತಿಯೊಬ್ಬರಿಗೂ ಅಂಬೇಡ್ಕರ್ ಸಂವಿಧಾನದ ಮೂಲಕ ತನ್ನದೇ ಆದ ಹಕ್ಕುಬಾಧ್ಯತೆಯ ಮೀಸಲಾತಿಯನ್ನು ಕೊಟ್ಟಿದ್ದರೂ ಸಹ ಚರ್ಚ್, ಮಸೀದಿಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನವನ್ನು ಎಂದೂ ಸಹ ಆಚರಣೆ ಮಾಡಿಲ್ಲ ಎಂಬುದು ನಾಚಿಕೆಗೇಡಿನ ವಿಷಯ. ಹಿಂದುಳಿದ ಜಾತಿಗಳು ಅಸ್ಪೃಶ್ಯರ ಒಳಗಡೆ ಇರುವ ಕೆಲವು ಜಾತಿಗಳು ಮುಸಲ್ಮಾನರು, ಕ್ರಿಶ್ಚಿಯನ್ನರು ಹಾಗೂ ಮಠಾಧೀಶರು ತಮ್ಮ ಜವಾಬ್ದಾರಿಯನ್ನು ಮರೆತು ರಾಷ್ಟ್ರ ನಾಯಕನನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದರು.
ರಾಷ್ಟ್ರೀಯವಾದಿ ಎಂದು ಹೇಳಿಕೊಳ್ಳುವ ಆರ್‌ಎಸ್‌ಎಸ್ ಕೂಡ ಅಂಬೇಡ್ಕರ್ ಜಯಂತಿಯನ್ನು ಆಚರಣೆ ಮಾಡುವುದಿಲ್ಲ. ರಾಷ್ಟ್ರೀಯ ನಾಯಕನ ಜಯಂತಿ ಆಚರಿಸದೆ ಇರುವ ಆರ್‌ಎಸ್‌ಎಸ್ ಸಂಘಟನೆಯನ್ನು ರಾಷ್ಟ್ರೀಯವಾದಿ ಸಂಘಟನೆಯನ್ನು ಎನ್ನಲು ಹೇಗೆ ಸಾಧ್ಯ. ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಕಾಟಾಚಾರಕ್ಕೆ ಎಂದು ಅಂಬೇಡ್ಕರ್ ಜಯಂತಿ ಆಚರಣೆ ಮಾಡುತ್ತಿದ್ದಾರೆ. ಸಮಾಜದ ಎಲ್ಲಾ ಸಮುದಾಯಗಳು ಅಂಬೇಡ್ಕರ್ ಅವರನ್ನು ಅಪ್ಪಿಕೊಂಡು ಅವರ ಜಯಂತಿ ಆಚರಣೆ ಮಾಡಬೇಕು. ಸರ್ಕಾರಿ ಕಚೇರಿಗಳಲ್ಲಿ ಅರ್ಥಪೂರ್ಣವಾಗಿ ಅಂಬೇಡ್ಕರ್ ಜಯಂತಿ ಆಚರಣೆ ಮಾಡುವ ಮೂಲಕ ರಾಷ್ಟ್ರನಾಯಕನಿಗೆ ಸಲ್ಲಬೇಕಾದ ಗೌರವವನ್ನು ಸಮರ್ಪಿಸಬೇಕು ಎಂದು ಆಗ್ರಹಿಸಿದರು.ಕೆ ಕೆ ಪಿ ಸುದ್ದಿ 01: ಕೂನೂರು ಗ್ರಾಮದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ನಗರದ ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಅದ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿದರು.