ಸಾರಾಂಶ
ಸವಣೂರು: ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿ ಮಾಡಲು ಮತ್ತೊಂದು ಆಯೋಗವನ್ನು ರಚಿಸಿರುವ ಕಾಂಗ್ರೆಸ್ ಸರ್ಕಾರ ಮೂರು ಕ್ಷೇತ್ರದಲ್ಲಿ ನಡೆಯುತ್ತಿರುವ ವಿಧಾನಸಭಾ ಉಪ ಚುನಾವಣೆಯಲ್ಲಿ ಎಡಗೈ ಸಮಾಜದ ಮತ ಕೇಳಲು ಕಾಂಗ್ರೆಸ್ ಹಕ್ಕನ್ನು ಕಳೆದುಕೊಂಡಿದೆ ಎಂದು ಲಿಡಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್. ಮಾಳಗಿ ಹೇಳಿದರು.
ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಜಾರಿಗೆ ಮಾಡಲು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ ಮಾಡಿ ಮೂರು ತಿಂಗಳು ಗತಿಸಿದೆ. ಅ. ೨೮ರಂದು ಸಚಿವ ಸಂಪುಟದಲ್ಲಿ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಲು ನಿರ್ಣಯ ಮಾಡದೇ ಮತ್ತೊಂದು ಆಯೋಗವನ್ನು ರಚನೆ ಮಾಡಿದ್ದನ್ನು ನೋಡಿದರೆ ಸಿದ್ದರಾಮಯ್ಯ ರಾಜ್ಯದ ಎಡಗೈ ಸಮಾಜದಲ್ಲಿ ಬರುವ ಮಾದರ, ಸಮಗಾರ, ಡೋಹರ, ಮಚಗಾರ ಸಮಾಜದ ವಿರೋಧಿ ಎಂಬುದು ಸಾಬೀತಾಗಿದೆ ಎಂದು ಟೀಕಿಸಿದರು.ಸುಪ್ರೀಂಕೋರ್ಟ್ ಆದೇಶ ಮಾಡಿದ ನಂತರ ಮತ್ತೊಂದು ಆಯೋಗ ರಚಿಸಿ ಅದರ ವರದಿ ಪಡೆಯುವ ಅಗತ್ಯ ಇರಲಿಲ್ಲ. ಸಂಸದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಇದ್ದ ಅವಧಿಯಲ್ಲಿ ಅಂದಿನ ಕಾನೂನು ಸಚಿವ ಮಾಧುಸ್ವಾಮಿ ನೇತೃತ್ವದಲ್ಲಿ ಸಚಿವ ಸಂಪುಟದ ಉಪ ಸಮಿತಿಯನ್ನು ರಚಿಸಿ, ಅದರ ವರದಿ ಆಧಾರವಾಗಿಟ್ಟುಕೊಂಡು ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳು ಸಮಗ್ರವಾಗಿ ಪರಿಶೀಲಿಸಿ ಮೂಲ ಪರಿಶಿಷ್ಟರಿಗೆ ಘೋರ ಅನ್ಯಾಯವಾಗಿದ್ದನ್ನು ಮನಗಂಡು ತುಳಿತಕ್ಕೆ ಒಳಗಾದ ಮತ್ತು ಕಳೆದ ೩೦ ವರ್ಷಗಳಿಂದ ಹೋರಾಟ ಮಾಡುತ್ತ ಬಂದ ನೊಂದ ಜೀವಿಗಳಿಗೆ ಪುನರ್ ಜನ್ಮನೀಡಿದ್ದಾರೆ.
ಮಾದಿಗರೆಂದರೆ ಕಾನೂನಿನ ಅರಿವು ಇರುವುದಿಲ್ಲ, ಸಂವಿಧಾನದ ಬಗ್ಗೆ ತಿಳಿದುಕೊಂಡಿಲ್ಲ, ಈ ಸಮಾಜಕ್ಕೆ ರಾಜಕೀಯ ಅರಿವಿಲ್ಲ ಎಂದುಕೊಂಡು ಸಿಎಂ ಸಿದ್ದರಾಮಯ್ಯ ಚೆಲ್ಲಾಟವಾಡುತ್ತಿದ್ದಾರೆ. ನೊಂದ ಜೀವಿಗಳ ಶಾಪ ನಿಮ್ಮನ್ನು ಬಿಡುವುದಿಲ್ಲ. ಯಥಾವತ್ತಾವಾಗಿ ಸದಾಶಿವ ಆಯೋಗದ ವರದಿಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಬೇಕಾಗಿತ್ತು. ನೊಂದ ಮುಗ್ಧರಿಗೆ ಮೋಸ ಮಾಡಿದ್ದೀರಿ. ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮಾದಿಗರು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುತ್ತಾರೆ. ಮಾದಿಗರ ಗತ್ತು ನ. ೨೩ಕ್ಕೆ ಕಾಂಗ್ರೆಸ್‌ಗೆ ಗೊತ್ತಾಗುತ್ತದೆ ಎಂದರು.ತಾಪಂ ಮಾಜಿ ಸದಸ್ಯ ರಾಜು ಮಾದರ, ಪುರಸಭೆ ಮಾಜಿ ಸದಸ್ಯ ನಿಂಗಪ್ಪ ಮರಗಪ್ಪನವರ ಹಾಗೂ ಇತರರು ಇದ್ದರು.