ಸಾರಾಂಶ
ಕೊಪ್ಪಳ (ಯಲಬುರ್ಗಾ):
ಕಾಂಗ್ರೆಸ್ ಸರ್ಕಾರದಿಂದ ಅಭಿವೃದ್ಧಿ ಮರೀಚಿಕೆ ಆಗಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸರ್ಕಾರ ಪರದಾಡುತ್ತಿದ್ದು ಅಭಿವೃದ್ಧಿ ಗ್ಯಾರಂಟಿಯನ್ನೇ ನೀಡುತ್ತಿಲ್ಲ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಸರ್ಕಾರವನ್ನು ಮಾತಿನಲ್ಲಿ ತಿವಿದರು.ಯಲಬುರ್ಗಾದ ಬಿಜೆಪಿ ಕಚೇರಿಯಲ್ಲಿ ಯಲಬುರ್ಗಾ ಬಿಜೆಪಿ ಮಂಡಲ ವತಿಯಿಂದ ಜರುಗಿದ ಸಕ್ರಿಯ ಸದಸ್ಯರ ನಮ್ಮ ನಡೆ ಹಳ್ಳಿಯ ಕಡೆಗೆ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರ್ಕಾರ ಜನರನ್ನು ಕತ್ತಲೆಗೆ ದೂಡುತ್ತಿದೆ. ದುಡಿವ ಕೈಗಳಿಗೆ ಶಕ್ತಿ ನೀಡುತ್ತಿಲ್ಲ. ಸ್ವಾವಲಂಬಿ ಬದುಕು ರೂಪಿಸುತ್ತಿಲ್ಲ. ಗ್ಯಾರಂಟಿ ಯೋಜನೆ ಜಾರಿಗೆ ತಂದು ರಾಜ್ಯದ ಅಭಿವೃದ್ಧಿಗೆ ಕೊಕ್ಕೆ ಹಾಕಿದೆ ಎಂದು ಕಿಡಿಕಾರಿದರು.ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ಸಿಗರು ಹುರುಳಿಲ್ಲದೆ ಆರೋಪ ಮಾಡಿದ್ದರು. ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯ ಸಹಿಸದೆ ಕಾಂಗ್ರೆಸ್‌ನವರು ಸುಳ್ಳು ಹೇಳಿದ್ದರು. ಸರಿಯಾದ ಸಾಕ್ಷಿ ಸಾಬೀತುಪಡಿಸಲಿಲ್ಲ. ಈಗ ಮುಡಾ ಹಗರಣ, ವಾಲ್ಮೀಕಿ ನಿಗಮದಿಂದ ಕೋಟಿಗಟ್ಟಲೆ ದುಡ್ಡು ಲೂಟಿ ಹೊಡೆದ ಇವರಿಗೆ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಜನಪರ ಕಾಳಜಿ ಇಲ್ಲದ ಇವರಿಂದ ಅಭಿವೃದ್ಧಿ ಹೇಗೆ ನಿರೀಕ್ಷೆ ಮಾಡಬೇಕು ಎಂದು ಕುಟುಕಿದರು. ಬಿಜೆಪಿ ದೇಶದಲ್ಲಿ ಅತಿ ಹೆಚ್ಚು ಕಾರ್ಯಕರ್ತರನ್ನು ಒಳಗೊಂಡ ದೊಡ್ಡ ಪಕ್ಷವಾಗಿದ್ದು ಕಾರ್ಯಕರ್ತರ ತಂಡ ದೇಶ ಸೇವೆಗಾಗಿ ದುಡಿಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗುವ ಮೂಲಕ ಜನರ ಪ್ರೀತಿ, ವಿಶ್ವಾಸ ಗಳಿಸಿದ್ದಾರೆ ಎಂದರು.
ಕೃಷ್ಣಾ ಬಿ ಸ್ಕೀಂ ನೀರಾವರಿ ಮೂಲಕ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸಲಾಗಿದೆ. ಕಾಂಗ್ರೆಸ್‌ನವರು ಸುಳ್ಳನ್ನೆ ಕಾಯಕ ಮಾಡಿಕೊಂಡಿದ್ದಾರೆ. ಅಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಯಲಬುರ್ಗಾ ಕ್ಷೇತ್ರಕ್ಕೆ ನೀರಾವರಿಗಾಗಿ ಹಾಕಿದ ಅಡಿಗಲ್ಲನ್ನು ಅಡ್ಡಗಲ್ಲೆಂದು ಅಪಮಾನ ಮಾಡುತ್ತಿದ್ದಾರೆ ಎಂದು ದೂರಿದರು.ಮುಂಬರುವ ಜಿಪಂ, ತಾಪಂ ಚುನಾವಣೆ ಪೂರ್ವಭಾವಿಯಾಗಿ ಬೂತ್ ಮಟ್ಟದಲ್ಲಿ ಸಂಘಟನೆಯಾಗಬೇಕಿದೆ. ಜನರ ನಂಬಿಕೆ, ವಿಶ್ವಾಸ ಗಳಿಸಿದಾಗ ಮಾತ್ರ ಜನಪ್ರನಿಧಿಗಳು ಆಗಲು ಸಾಧ್ಯ. ಕಾರ್ಯಕರ್ತರು ಜನರಿಗೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನರಸಿಂಹರಾವ್ ಕುಲಕರ್ಣಿ, ಉಪಾಧ್ಯಕ್ಷ ಕೆ. ಮಹೇಶ ಮಾತನಾಡಿದರು. ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ಗಾವರಾಳ, ಪ್ರಮುಖರಾದ ಬಸಲಿಂಗಪ್ಪ ಭೂತೆ, ಸಿ.ಎಚ್. ಪಾಟೀಲ್, ಶಿವಶಂಕರ ದೇಸಾಯಿ, ವೀರಣ್ಣ ಹುಬ್ಬಳ್ಳಿ, ಕೆ. ಮಹೇಶ, ಶಿವಪ್ಪ ವಾದಿ, ಫಕೀರಪ್ಪ ತಳವಾರ, ಸಿದ್ದು ಮಣ್ಣಿನವರ, ಅಮರೇಶ ಹುಬ್ಬಳ್ಳಿ, ಅಶೋಕ ಅರಕೇರಿ, ಶಿವಕುಮಾರ, ನಾಗಲಾಪುರಮಠ, ಶಕುಂತಲಾದೇವಿ ಮಾಲಿಪಾಟೀಲ್, ಅಯ್ಯಪ್ಪ ಗುಳೇದ, ವಸಂತ ಭಾವಿಮನಿ, ರಂಗನಾಥ ವಲ್ಮಕೊಂಡಿ, ಕಲ್ಲೇಶಪ್ಪ ಕರಮುಡಿ, ಗುಂಗಾಡಿ ಶರಣಪ್ಪ, ಭೀಮಜ್ಜ ಗುರಿಕಾರ, ಶೇಖರ ಗಡಾದ, ಶಂಕರ ಮೂಲಿ ಇತರರಿದ್ದರು.