ಕಾಂಗ್ರೆಸ್ಸಿನಿಂದ ಅಂಬೇಡ್ಕರರಿಗೆ ಅವಮಾನ: ಬೊಮ್ಮಾಯಿ

| Published : Jan 25 2025, 01:00 AM IST

ಕಾಂಗ್ರೆಸ್ಸಿನಿಂದ ಅಂಬೇಡ್ಕರರಿಗೆ ಅವಮಾನ: ಬೊಮ್ಮಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಇತಿಹಾಸ ನೋಡಿದಾಗ ಹೆಜ್ಜೆ ಹೆಜ್ಜೆಗೂ ಅಂಬೇಡ್ಕರ್ ಬೆಳವಣಿಗೆ ಕಾಂಗ್ರೆಸ್ ಸಹಿಸದ ಕಾಲದಲ್ಲಿ ಅವರ ಸಹಕಾರಕ್ಕೆ ಹುಬ್ಬಳ್ಳಿಯ ಸರ್. ಸಿದ್ದಪ್ಪ ಕಂಬಳಿ ಬಂದರು

ಗದಗ: ಕಾಂಗ್ರೆಸ್ ಪಕ್ಷದಿಂದ ಅಂಬೇಡ್ಕರ್‌ ಅವರಿಗೆ ಸಾಕಷ್ಟು ಅವಮಾನವಾಗಿದೆ. ಕಾಂಗ್ರೆಸ್ ಬಹುಮತವಿದ್ದ ಮುಂಬೈ ಬಾರ್ ಅಸೋಸಿಯೇಷನ್ ನಲ್ಲಿ ಅಂಬೇಡ್ಕರಗೆ ಸದಸ್ಯತ್ವ ನೀಡಲಿಲ್ಲ. ಹಾಗಾಗಿ ಅವರು ಪ್ರಾಕ್ಟೀಸ್ ಮಾಡಲು ಸಾಧ್ಯವಾಗಲಿಲ್ಲ. ಈಗ ಅಂಬೇಡ್ಕರ ಹೆಸರು ಹೇಳಿಕೊಂಡು ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಶುಕ್ರವಾರ ಗದಗ ವಿಠ್ಠಲಾರೂಢ ಸಭಾಭವನದಲ್ಲಿ ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ಗದಗ ಹಾಗೂ ಬಿಜೆಪಿ ಸಹಯೋಗದಲ್ಲಿ ಏರ್ಪಡಿಸಿದ್ದ ಸಂವಿಧಾನ ಸನ್ಮಾನ ಮತ್ತು ಪುಸ್ತಕ ಲೋಕಾರ್ಪಣೆ ಹಾಗೂ ವಿಚಾರಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇತಿಹಾಸ ನೋಡಿದಾಗ ಹೆಜ್ಜೆ ಹೆಜ್ಜೆಗೂ ಅಂಬೇಡ್ಕರ್ ಬೆಳವಣಿಗೆ ಕಾಂಗ್ರೆಸ್ ಸಹಿಸದ ಕಾಲದಲ್ಲಿ ಅವರ ಸಹಕಾರಕ್ಕೆ ಹುಬ್ಬಳ್ಳಿಯ ಸರ್. ಸಿದ್ದಪ್ಪ ಕಂಬಳಿ ಬಂದರು. ತದ ನಂತರ ಅಂಬೇಡ್ಕರ್‌ ವೃತ್ತಿಯಲ್ಲಿ ನಿರತರಾಗಲು ಅನುಕೂಲವಾಯಿತು. ಅದಕ್ಕೆ ಪೂರಕವಾಗಿ ಸಂವಿಧಾನ ರಚನೆಯಾಯಿತು. 1947ರಲ್ಲಿ ಭಾರತದೊಂದಿಗೆ ವಿಶ್ವದಲ್ಲಿ 19 ದೇಶಕ್ಕೆ ಸ್ವತಂತ್ರ ಬಂದಿವೆ. ಆಗ ಎಲ್ಲ ದೇಶಗಳು ಪ್ರಜಾಪ್ರಭುತ್ವ ಒಪ್ಪಿಕೊಂಡವು. ಆದರೆ, ಭಾರತದಲ್ಲಿ ಹೊರತು ಪಡಿಸಿ 1947ರಲ್ಲಿ ಸ್ವತಂತ್ರಗೊಂಡ ಯಾವ ದೇಶಗಳಲ್ಲೂ ಪ್ರಜಾಪ್ರಭುತ್ವ ಇಲ್ಲ ಅಂತಹ ಭದ್ರ ಸಂವಿಧಾನ ನೀಡಿದ ಅಂಬೇಡ್ಕರಗೆ ಕಾಂಗ್ರೆಸ್ ಅನ್ಯಾಯ ಮಾಡಿದ್ದಕ್ಕಾಗಿ ಕ್ಷಮೆ ಕೇಳಬೇಕು ಎಂದರು.

ಶಾಸಕ ಸಿ.ಸಿ. ಪಾಟೀಲ, ಪಿ.ರಾಜೀವ, ರವಿ ದಂಡಿನ, ವಿಪ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಶಾಸಕ ಕಳಕಪ್ಪ ಬಂಡಿ, ಚಂದ್ರು ಲಮಾಣಿ ಮುಂತಾದವರು ಮಾತನಾಡಿದರು. ಜಿಲ್ಲಾಧ್ಯಕ್ಷ ರಾಜು ಕುರಡಗಿ, ರವಿ ದಂಡಿನ, ಮಂಜುನಾಥ ಮುಳಗುಂದ, ಮಲ್ಲಪ್ಪ ಮುಳಗುಂದ, ಉಷಾ ದಾಸರ ಮುಂತಾದವರು ಹಾಜರಿದ್ದರು.

ಎಸ್ಸಿ,ಎಸ್ಟಿ ಸಮುದಾಯದ ಅಭಿವೃದ್ಧಿ ಹಣ ಕಾಂಗ್ರೆಸ್ ಸರ್ಕಾರ ಬೇರೆ ಕೆಲಸಕ್ಕೆ ಬಳಕೆ ಮಾಡಿಕೊಂಡು ಆ ಸಮುದಾಯಕ್ಕೆ ಅನ್ಯಾಯ ಮಾಡಿದೆ, ಈಗ ಸಂವಿಧಾನ, ಮೀಸಲಾತಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ನರಗುಂದ ಶಾಸಕ ಸಿ.ಸಿ.ಪಾಟೀಲ ಹೇಳಿದರು.ಅಂಬೇಡ್ಕರ್‌ ಬದುಕಿದ್ದಾಗ ಮತ್ತು ಅವರು ತೀರಿಕೊಂಡಾಗ ಅಂಬೇಡ್ಕರಗೆ ಕಾಂಗ್ರೆಸ್ ಅಪಮಾನ ಮಾಡಿತು. ಸಂವಿಧಾನ ವಿರೋಧಿಯಾಗಿ 1975 ರಲ್ಲಿ ಇಂದಿರಾಗಾಂಧಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಕೋರ್ಟ್ ತೀರ್ಪು ಕೊಟ್ಟರೂ ಸುಗ್ರೀವಾಜ್ಞೆ ಮೂಲಕ 2 ವರ್ಷ ಇಂದಿರಾ ಗಾಂಧಿ ಆಡಳಿತ ನಡೆಸಿದರು. ಇದು ಕಾಂಗ್ರೆಸ್ಸಿಗರು ಸಂವಿಧಾನಕ್ಕೆ ಮಾಡಿದ ಅಪಮಾನವಾಗಿದೆ. ಈಗ ಸಂವಿಧಾನ ಅಪಾಯದಲ್ಲಿದೆ ಎಂದು ಸುಳ್ಳು ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ ಹೇಳಿದರು.