ಕೊಪ್ಪಳ: ಈಗಾಗಲೇ ಅನೇಕ ಮಹಿಳಾ ಪರ ಯೋಜನೆ, ಕಾಯ್ದೆ ವಿರೋಧಿಸುತ್ತಿದ್ದ ಕಾಂಗ್ರೆಸ್ ಮಹಿಳಾ ಮೀಸಲಾತಿ ವಿರೋಧಿಸುವ ಮೂಲಕ ತಾನು ಮಹಿಳಾ ವಿರೋಧಿ ಎನ್ನುವುದನ್ನು ತೋರಿಸಿದೆ ಎಂದು ವಿಪ ಸದಸ್ಯೆ ಹೇಮಲತಾ ನಾಯಕ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ಮಾಡಿದರು.ದೇಶದಲ್ಲಿ ಮಹಿಳೆಯರನ್ನು ಗೌರವಿಸುವ ಮತ್ತು ರಾಜಕೀಯ ಪ್ರಾತಿನಿಧ್ಯ ನೀಡಲು ಪ್ರಧಾನಿ ನರೇಂದ್ರ ಮೋದಿ ಮಹಿಳಾ ಮೀಸಲಾತಿ ಕಾಯ್ದೆ ಜಾರಿ ತರಲು ಮುಂದಾದರೆ ಅದಕ್ಕೆ ವಿರುದ್ಧವಾಗಿ ಮತ ಚಲಾಯಿಸುವ ಮೂಲಕ ಕಾಂಗ್ರೆಸ್ ಮಹಿಳೆಯರಿಗೆ ಅಪಮಾನ ಮಾಡಿದೆ ಎಂದರು.
ಗ್ರಾಪಂದಿಂದ ಲೋಕಸಭೆ ವರೆಗೂ ನಡೆಯಲಿರುವ ಚುನಾವಣೆಯಲ್ಲಿ ಮಹಿಳೆಯರಿಗೂ ಶೇ. 33 ಮೀಸಲಾತಿ ಕಲ್ಪಿಸುವ ಉದ್ಧೇಶದಿಂದ ಮಹಿಳಾ ಮೀಸಲಾತಿ ಜಾರಿ ತರಲು ಮುಂದಾದರೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ವಿರೋಧ ಮಾಡಿರುವುದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದರು.ಈ ಹಿಂದೆಯೂ ಮೂರು ಬಾರಿ ಪ್ರಯತ್ನ ಮಾಡಿದಾಗಲೂ ಸಮಸ್ಯೆಯಾಗಿದೆ. ಈ ಬಾರಿ ಬಿಜೆಪಿಗೆ ಕ್ರೆಡಿಟ್ ನೀಡುವ ಅಗತ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರೂ ಕಾಂಗ್ರೆಸ್ ನಾಯಕರಿಗೆ ಮಹಿಳೆಯರ ಪರ ಮತ ಹಾಕಬೇಕು ಎನ್ನುವ ಕಾಳಜಿ ವ್ಯಕ್ತವಾಗಲಿಲ್ಲ. ದುರಂತ ಎಂದರೆ ಮಹಿಳಾ ಮೀಸಲಾತಿ ಮಸೂದೆ ಸೋತಿದ್ದರೆ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳು ಸಂಭ್ರಮಿಸುತ್ತಿರುವುದು ನಾಚಿಗೇಡಿನ ಸಂಗತಿ ಎಂದರು.
ತ್ರಿವಳಿ ತಲಾಕ್, ನೋಟು ಅಮಾನ್ಯೀಕರಣವನ್ನು ಕಾಂಗ್ರೆಸ್ ವಿರೋಧಿಸಿದೆ. ಹೀಗೆ, ದೇಶದ ಪ್ರಗತಿಗೆ ಕೈಗೊಳ್ಳುವ ಮಹತ್ವದ ವಿಷಯಗಳ ವಿರುದ್ಧ ಮತ ಚಲಾಯಿಸುವ ಮೂಲಕ ತನ್ನ ನಿಜ ಬಣ್ಣ ಬಯಲು ಮಾಡಿಕೊಳ್ಳುತ್ತಿದೆ. ಇಡೀ ದೇಶದ ಮಹಿಳೆಯರು ಕಾಂಗ್ರೆಸ್ ಆಟ ಗಮನಿಸಿದ್ದು, ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ಮಹಿಳೆಯರ ವಿರುದ್ಧವಾಗಿ ಮತ ಹಾಕಿದ್ದಾರೆ. ತಮ್ಮ ಪತ್ನಿಯನ್ನು ಹೊಸಪೇಟೆಯಲ್ಲಿ ಸ್ಪರ್ಧೆಗೆ ಇಳಿಸುವ ಪ್ರಯತ್ನ ಮಾಡುತ್ತಿರುವ ಅವರು ಮಹಿಳಾ ಮೀಸಲಾತಿ ಮಾತ್ರ ವಿರೋಧಿಸುತ್ತಾರೆ ಎಂದರೆ ಏನರ್ಥ? ಈ ಕುರಿತು ಅವರ ಪತ್ನಿ ಏನು ಹೇಳುತ್ತಾರೆ ಎನ್ನುವುದು ಕುತೂಹಲವಿದೆ ಎಂದರು.
ಲವ್ ಜಿಹಾದ್, ಗಾಂಜಾ, ಚರಸ್ ಪ್ರಕರಣ ಹಿಟ್ನಾಳ ಕುಟುಂಬ ಬೆಂಬಲಿಸುತ್ತದೆಯೇ ಹೊರತು ಇಂಥ ಮಹಿಳಾ ಪರ ಮೀಸಲಾತಿ ಬೆಂಬಲಿಸುತ್ತಿಲ್ಲ ಎಂದರು.ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ ಮಾತನಾಡಿ, ಮಹಿಳಾ ಮೀಸಲಾತಿ ವಿರೋಧಿಸುವ ಮೂಲಕ ಕಾಂಗ್ರೆಸ್ ನಿಜ ಬಣ್ಣ ಬಯಲಾಗಿದೆ ಎಂದರು.
ಮಹಿಳೆಯರಿಗೆ ಆದ್ಯತೆ ನೀಡುವ ಮಹಿಳಾ ಮೀಸಲಾತಿ ವಿರೋಧಿಸುವುದು ಎಂದರೆ ಏನರ್ಥ? ಅವರಿಗೆ ಮಹಿಳೆಯರ ಬಗ್ಗೆ ಗೌರವವೇ ಇಲ್ಲ. ಕೊಪ್ಪಳ ಸಂಸದರು ವಿದೇಶಿ ಮಹಿಳೆ ಮೇಲಿನ ಅತ್ಯಾಚಾರವನ್ನು ಸಣ್ಣ ಪ್ರಕರಣ ಎಂದಿದ್ದರು. ಆಗಲೇ ಅವರ ಮನಸ್ಥಿತಿ ಏನು ಎನ್ನುವುದು ಗೊತ್ತಾಗಿದೆ ಎಂದರು.ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ಮಾಡಿದರು. ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡುವುದಕ್ಕೂ ಕಾಂಗ್ರೆಸ್ ಬೆಂಬಲಿಸುವುದಿಲ್ಲ ಎಂದರೆ ಏನರ್ಥ? ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ, ವೀರೇಶ ಸಜ್ಜನ, ಅಮರೇಶ ಮುರಳಿ ಇದ್ದರು.