3 ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಸೋಲು ಖಚಿತ

| Published : Nov 06 2024, 12:53 AM IST

ಸಾರಾಂಶ

ಚನ್ನಪಟ್ಟಣ: ಚನ್ನಪಟ್ಟಣ ಮಾತ್ರವಲ್ಲದೆ ಶಿಗ್ಗಾಂವಿ, ಸಂಡೂರು ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಎನ್ ಡಿಎ ಜಯ ಸಾಧಿಸಲಿದ್ದು, ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭವಿಷ್ಯ ನುಡಿದರು.

ಚನ್ನಪಟ್ಟಣ: ಚನ್ನಪಟ್ಟಣ ಮಾತ್ರವಲ್ಲದೆ ಶಿಗ್ಗಾಂವಿ, ಸಂಡೂರು ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಎನ್ ಡಿಎ ಜಯ ಸಾಧಿಸಲಿದ್ದು, ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭವಿಷ್ಯ ನುಡಿದರು.

ಚನ್ನಪಟ್ಟಣದ ನೆಹರು ವೃತ್ತದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೊಂದಿಗೆ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಬಹಿರಂಗ ಪ್ರಚಾರ ಭಾಷಣ ಮಾಡಿದ ಅವರು, ಕಾಂಗ್ರೆಸ್ ಭ್ರಷ್ಟಾಚಾರ ಹಗರಣಗಳಲ್ಲಿ ಮುಳುಗಿ ಹೋಗಿದೆ. ವಾಲ್ಮೀಕಿ, ಮೂಡಾ ಹಗರಣಗಳ ಕಾರಣದಿಂದ ರಾಜ್ಯದ ಪ್ರತಿಷ್ಠೆಯನ್ನು ಹಾಳು ಮಾಡಿದೆ. ಹೀಗಾಗಿ ಎನ್ ಡಿಎ ಅಭ್ಯರ್ಥಿಗಳಿಗೆ ಜನರು ಎಲ್ಲಾ ಕಡೆ ಆಶೀರ್ವಾದ ಮಾಡಲಿದ್ದಾರೆ. ಇದರಿಂದ ಕಾಂಗ್ರೆಸ್ ಹತಾಶ ಸ್ಥಿತಿಗೆ ಬಂದು ನಿಂತಿದೆ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ದೇವೇಗೌಡರ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ. ಈ ದೇಶಕ್ಕೆ ಅವರು ಎಷ್ಟು ಕೊಡುಗೆ ನೀಡಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಲಿ. ನಿಖಿಲ್ ಕುಮಾರಸ್ವಾಮಿ ಅವರು ಚನ್ನಪಟ್ಟಣದಿಂದ ಶಾಸಕರಾಗಿ ಆಯ್ಕೆ ಆಗುವುದು ಖಚಿತ. ಭವಿಷ್ಯದಲ್ಲಿ ಅವರು ಮಾಜಿ ಪ್ರಧಾನಿ ದೇವೇಗೌಡ ಅವರಂತೆ, ಕೇಂದ್ರ ಸಚಿವ ಕುಮಾರಸ್ವಾಮಿ ಅವರಂತೆ ಉನ್ನತ ಮಟ್ಟದ ನಾಯಕರಾಗಿ ಬೆಳೆಯುತ್ತಾರೆ. ಅದಕ್ಕೆ ಚನ್ನಪಟ್ಟಣ ಜನರು ಆಶೀರ್ವಾದ ಮಾಡಬೇಕು ಎಂದು ವಿಜಯೇಂದ್ರ ಮನವಿ ಮಾಡಿದರು.

ಡಿಕೆಸು ಮಾತಿಗೆ ಛಲವಾದಿ ಬೇಸರ:

ಮಾಜಿ ಪ್ರಧಾನಿ ದೇವೇಗೌಡರು ಆಂಬುಲೆನ್ಸ್ ನಲ್ಲಿ ಬಂದು ಪ್ರಚಾರ ಮಾಡುತ್ತಾರೆ ಎಂದು ಟೀಕೆ ಮಾಡಿದ್ದ ಮಾಜಿ ಸಂಸದ ಡಿಕೆ ಸುರೇಶ್ ವಿರುದ್ಧ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹರಿಹಾಯ್ದರು.

ದೇವೇಗೌಡ ವಯಸ್ಸು ಎಷ್ಟು? ಡಿಕೆ ಸುರೇಶ್ ವಯಸ್ಸು ಎಷ್ಟು? ದೇವೇಗೌಡರ ಸಾಧನೆಯ ಅರಿವು ಆ ವ್ಯಕ್ತಿಗೆ ಇದೆಯೇ? ಆತನ ಮಾತು ಕೇಳಿ ನನಗೆ ಬಹಳ ನೋವು ಉಂಟಾಗಿದೆ. ಇಂತಹ ಕೊಳಕು ಮನಸ್ಸಿನ ಮಾತುಗಳು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಶಾಸ್ತಿ ಮಾಡುತ್ತವೆ ಎಂದು ಹೇಳಿದರು.

ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪೂರ್, ಸಾರಾ ಮಹೇಶ್, ವೆಂಕಟರಾವ್ ನಾಡಗೌಡ, ಸಂಸದ ಡಾ.ಸಿ.ಎನ್.ಮಂಜುನಾಥ್, ಮಾಜಿ ಶಾಸಕ ಮಾಗಡಿ ಮಂಜುನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ರಮೇಶ್ ಸೇರಿದಂತೆ ಅನೇಕ ನಾಯಕರು ಹಾಜರಿದ್ದರು.

ಡಿಕೆಶಿ ಯಾರ್ಯಾರ ಕಣ್ಣೀರು ಒರೆಸಿದ್ದಾರೆಂದು ಹೇಳಲಿ

ಚನ್ನಪಟ್ಟಣ: ಚನ್ನಪಟ್ಟಣಕ್ಕೆ ಉಪ ಚುನಾವಣೆ ಬಂದಾಗ ಪ್ರತ್ಯಕ್ಷರಾಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಪ್ಪತ್ತು ದಿನ ಇಲ್ಲಿಗೆ ಬಂದು ಹೋಗಿದ್ದೇನೆ ಎಂದು ಹೇಳಿದ್ದಾರೆ. ಅಷ್ಟೂ ಸಲ ಬಂದು ಅವರು ಯಾರ ಯಾರ ಕಣ್ಣೀರು ಒರೆಸಿದ್ದಾರೆ ಎಂದು ಹೇಳಲಿ. ನಾನು ಏನು ಮಾಡಿದ್ದೇನೆ ಎನ್ನುವುದು ಕಾಣುತ್ತದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಚನ್ನಪಟ್ಟಣದ ನೆಹರು ವೃತ್ತದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೊಂದಿಗೆ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಬಹಿರಂಗ ಪ್ರಚಾರ ಭಾಷಣ ಮಾಡಿದ ಅವರು, ಚನ್ನಪಟ್ಟಣಕ್ಕೆ ಕುಮಾರಸ್ವಾಮಿ ಏನು ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಅಜ್ಞಾನದಿಂದ ಕೇಳುತ್ತಿದ್ದಾರೆ. ಅದನ್ನೆಲ್ಲ ಹೇಳಲು ಹೋದರೆ ನಾನು ಸಾವಿರಾರು ಪುಟಗಳಷ್ಟು ಕರಪತ್ರ ಮುದ್ರಿಸಬೇಕಾಗುತ್ತದೆ. ಅವರು ತಾವು ಮಾಡಿದ್ದನ್ನು ಹೇಳಲಿ ಎಂದು ಸವಾಲು ಹಾಕಿದರು.

ನೆನೆಗುದಿಗೆ ಬಿದ್ದ ಯುಜಿಡಿ ಯೋಜನೆ :

ಚನ್ನಪಟ್ಟಣದಲ್ಲಿ 20 ಕೋಟಿ ವೆಚ್ಚದಲ್ಲಿ ಜಾಗತಿಕ ಗುಣಮಟ್ಟದ ಮಾವು ಸಂಸ್ಕರಣೆ ಘಟಕ ಸ್ಥಾಪನೆ ಆಗುತ್ತಿದೆ. ಎರಡೂ ಪಟ್ಟಣಗಳ ನಡುವೆ ಸುಸಜ್ಜಿತ ಅಂತಾರಾಷ್ಟ್ರೀಯ ಗುಣಮಟ್ಟದ ರೇಷ್ಮೆ ಮಾರುಕಟ್ಟೆ ಸ್ಥಾಪನೆ ಮಾಡಲಾಗುತ್ತಿದೆ. ಎರಡು ವರ್ಷಗಳ ಹಿಂದೆಯೇ ಚನ್ನಪಟ್ಟಣದಲ್ಲಿ ಒಳಚರಂಡಿ ಯೋಜನೆಗೆ 97 ಕೋಟಿ ಬಿಡುಗಡೆ ಆಗಿದೆ. ಈ ಸರ್ಕಾರ ಬಂದು ಎರಡು ವರ್ಷ ಆಗುತ್ತಾ ಬಂದಿದೆ. ಈವರೆಗೂ ಟೆಂಡರ್ ಕರೆದಿಲ್ಲ. ಗುತ್ತಿಗೆದಾರರನ್ನು ಮನೆಗೆ ಬಂದು ನೋಡಿ ಎಂದು ಧಮ್ಕಿ ಹಾಕುತ್ತಿದ್ದಾರೆ. ಪರ್ಸಂಟೇಜ್ ದುರಾಸೆಯಿಂದ ಯುಜಿಡಿ ಯೋಜನೆ ಇನ್ನೂ ನೆನೆಗುದಿಗೆ ಬಿದ್ದಿದೆ ಎಂದು ಆರೋಪ ಮಾಡಿದರು.

ನಾನು ಕ್ಷುಲ್ಲಕ ವಿಷಯಗಳನ್ನು ಇಟ್ಟುಕೊಂಡು ರಾಜಕೀಯ ಮಾಡುವುದಿಲ್ಲ. ಅಭಿವೃದ್ಧಿ ವಿಷಯ ಇಟ್ಟುಕೊಂಡು ರಾಜಕೀಯ ಮಾಡುತ್ತೇನೆ. ಸ್ಥಳೀಯವಾಗಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಮಾಡಬೇಕು, ಕೈಗಾರಿಕೆ ಉತ್ಪನ್ನ ಹೆಚ್ಚಳದ ಮೂಲಕ ದೇಶದ ಆರ್ಥಿಕತೆಗೆ ಶಕ್ತಿ ತುಂಬಬೇಕು ಎನ್ನುವುದು ನರೇಂದ್ರ ಮೋದಿ ಸರ್ಕಾರದ ಆಶಯವಾಗಿದೆ. ಆ ನಿಟ್ಟಿನಲ್ಲಿ ಚನ್ನಪಟ್ಟಣ- ರಾಮನಗರ ಸುತ್ತಮುತ್ತ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.

5ಕೆಆರ್ ಎಂಎನ್ 6.ಜೆಪಿಜಿ

ಚನ್ನಪಟ್ಟಣದ ನೆಹರು ವೃತ್ತದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೊಂದಿಗೆ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರಚಾರ ನಡೆಸಿದರು.