ಸಾರಾಂಶ
ಹಾವೇರಿ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಜೊತೆಗೆ ಅಣೆಕಟ್ಟು ಹಾಗೂ ರಸ್ತೆ ನಿರ್ಮಾಣ, ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ ಶ್ರೇಯಸ್ಸು ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ತಾಲೂಕಿನ ಗುತ್ತಲ ಪಟ್ಟಣದಲ್ಲಿ ಜರುಗಿದ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಆನಂದಸ್ವಾಮಿ ಗಡ್ಡದೇವರಮಠ ಪರ ಮತಯಾಚಿಸಿ ಅವರು ಮಾತನಾಡಿದರು.ಕಳೆದ ಹತ್ತು ವರ್ಷಗಳಲ್ಲಿ ಯುವಕರಿಗೆ ಉದ್ಯೋಗ ನೀಡದ, ರಸಗೊಬ್ಬರ ಬೆಲೆ ಕಡಿಮೆ ಮಾಡದ, ರೈತರ ಬೆಳೆಗೆ ದುಪ್ಪಟ್ಟು ಬೆಲೆ ನಿಗದಿ ಮಾಡದ ಬಿಜೆಪಿ ತನ್ನ ಅಸ್ತಿತ್ವಕ್ಕೆ ಕಾಂಗ್ರೆಸ್ ವಿರುದ್ದ ವೃಥಾ ಆರೋಪ ಮಾಡುತ್ತಿದೆ. ಉಳುವವನೇ ಭೂ ಒಡೆಯ ಎಂಬ ಹಕ್ಕನ್ನು ನೀಡಿದ ಇಂದಿರಾ ಗಾಂಧಿ ಹಾಗೂ ರೈತರ ಸಾಲ ಮನ್ನಾ ಮಾಡಿದ ಡಾ.ಮನಮೋಹನ್ ಸಿಂಗ್ ಕಾಂಗ್ರೆಸ್ ಪಕ್ಷದ ಪ್ರಧಾನಿಗಳು ಎಂಬುದನ್ನು ಯಾರೂ ಮರೆಯಬಾರದು.
ಸುಸಂಸ್ಕೃತ ಕುಟುಂಬದ, ಕ್ರಿಯಾಶೀಲ ಸ್ವಭಾವದ ಆನಂದಸ್ವಾಮಿ ಗಡ್ಡದೇವರಮಠ ಅವರ ಜೋಳಿಗೆಗೆ ತಮ್ಮ ಮತ ಭಿಕ್ಷೆ ನೀಡಿ ಹಾರೈಸಬೇಕೆಂದು ಮನವಿ ಮಾಡಿದರು.ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, ದಿನಸಿ ವಸ್ತುಗಳ ಹಾಗೂ ಸಿಲಿಂಡರ್ ಬೆಲೆ ಏರಿಕೆ ನಿಯಂತ್ರಿಸದ ಬಿಜೆಪಿ ಗ್ಯಾರಂಟಿ ಯೋಜನೆಗಳನ್ನು ವಿನಾಕಾರಣ ವಿರೋಧಿಸುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿ ಯೋಜನೆಗಳಿಂದ ಬಡವರ ಕುಟುಂಬ ನಿರ್ವಹಣೆಗೆ ಸಹಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸೇವೆಗೆ ಅವಕಾಶ ಒದಗಿಸಿ ಆಶೀರ್ವದಿಸಬೇಕೆಂದು ಹೇಳಿದರು.ಶಾಸಕ ರುದ್ರಪ್ಪ ಲಮಾಣಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೇತ್ರದ ಅಭಿವೃದ್ಧಿಗೆ ಇಪ್ಪತ್ತು ಕೋಟಿ ರೂ. ವಿಶೇಷ ಅನುದಾನ ಒದಗಿಸಿದ್ದಾರೆ.
ಈ ಅನುದಾನದಡಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಜೊತೆಗೆ ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ 24 * 7 ಕುಡಿಯುವ ನೀರಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಂ. ಹಿರೇಮಠ, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಮೈದೂರ ಹಾಗೂ ಪ್ರಭುಗೌಡ ಬಿಷ್ಟನಗೌಡ್ರ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರೇಮಾ ಪಾಟೀಲ, ಮುಖಂಡರಾದ ಸಿ.ಬಿ. ಕುರವತ್ತಿಗೌಡ್ರ, ಆನಂದಪ್ಪ ಅಕ್ಕೂರ, ಈರಪ್ಪ ಲಮಾಣಿ, ಶಶಿಧರ ದೊಡ್ಡಮನಿ, ಗುತ್ತಲ ಪಟ್ಟಣ ಪಂಚಾಯತಿ ಸದಸ್ಯರಾದ ಪ್ರದೀಪ ಸಾಲಗೇರಿ, ಅಜಯ ಬಂಡಿವಡ್ಡರ, ಸಂತೋಷ ಲಮಾಣಿ, ಖಲೀಲಸಾಬ ಖಾಜಿ, ಮಹ್ಮದ್ ರಿತ್ತಿ, ಗುಡ್ಡಪ್ಪ ಗೊರವರ, ರಾಮಣ್ಣ ಲಮಾಣಿ, ಬಸಣ್ಣ ನೆಗಳೂರ, ಪ್ರಕಾಶ ಮರಡಿ ಇತರರಿದ್ದರು.