ಅರಣ್ಯ ಕಾಯ್ದೆಯಡಿ ರೈತರನ್ನು ಒಕ್ಕಲೆಬ್ಬಿಸುವ ರಾಜ್ಯ ಸರ್ಕಾರದ ಕ್ರಮ ಖಂಡನೀಯವಾಗಿದ್ದು, ಪಸ್ತುತ ಜಾರಿಯಲ್ಲಿರುವ ಬಗರ್ ಹುಕುಂ ನೀತಿಯನ್ನು ಸಡಿಲಗೊಳಿಸಿ ರೈತಸ್ನೇಹಿಯಾಗಿ ರೂಪಿಸಬೇಕಾದ ಸರ್ಕಾರ ಅನ್ನದಾತರ ವಿರುದ್ದವೇ ದೂರು ದಾಖಲಿಸುತ್ತಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಅರಣ್ಯ ಕಾಯ್ದೆಯಡಿ ರೈತರನ್ನು ಒಕ್ಕಲೆಬ್ಬಿಸುವ ರಾಜ್ಯ ಸರ್ಕಾರದ ಕ್ರಮ ಖಂಡನೀಯವಾಗಿದ್ದು, ಪಸ್ತುತ ಜಾರಿಯಲ್ಲಿರುವ ಬಗರ್ ಹುಕುಂ ನೀತಿಯನ್ನು ಸಡಿಲಗೊಳಿಸಿ ರೈತಸ್ನೇಹಿಯಾಗಿ ರೂಪಿಸಬೇಕಾದ ಸರ್ಕಾರ ಅನ್ನದಾತರ ವಿರುದ್ದವೇ ದೂರು ದಾಖಲಿಸುತ್ತಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.ಮಂಡಲ ಬಿಜೆಪಿ ರೈತಮೋರ್ಚಾ ವತಿಯಿಂದ ಶನಿವಾರ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನಾ ಮೆರವಣಿಗೆಯ ನಂತರ ತಾಲೂಕು ಕಚೇರಿ ಎದುರು ನಡೆದ ಸಭೆಯಲ್ಲಿ ಮಾತನಾಡಿ, ಸರ್ಕಾರ ರೈತ ವಿರೋದಿ ಹಾಗೂ ಅವೈಜ್ಞಾನಿಕವಾದ ಈ ಕಾಯ್ದೆಯನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು. ಸರ್ಕಾರದ ರೈತ ವಿರೋದಿ ನೀತಿಯನ್ನು ಖಂಡಿಸಿ ಡಿ 9ರಂದು ಬೆಳಗಾವಿಯಲ್ಲಿ ಸದನಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅರಣ್ಯ ಇಲಾಖೆ ಅಧಿಕಾರಿಗಳೇ ರೈತರ ವಿರುದ್ದ ದಾಖಲಿಸಿರುವ ಪ್ರಕರಣವನ್ನು ಎಸಿಎಫ್ ಕೋರ್ಟಿನಲ್ಲಿ ದೂರು ದಾಖಲಿಸಿರುವುದೇ ಅವೈಜ್ಞಾನಿಕವಾಗಿದೆ. ಅರಣ್ಯ ಅಧಿಕಾರಿಯಿಂದಲೇ ರೈತರು ನ್ಯಾಯ ನಿರೀಕ್ಷಿಸಲು ಸಾಧ್ಯವೇ ಎಂದ ಶಾಸಕರು, 94 ಸಿ ಫಾರಂ ನಂ 53 ಮತ್ತು 57 ರಲ್ಲಿ ಆಧಾರದಲ್ಲಿ ನಿವೇಶನಗಳ ಹಕ್ಕುಪತ್ರ ರದ್ದು ಮಾಡಿ ಉಪವಿಭಾಗಾಧಿಕಾರಿಗಳ ಕೋರ್ಟಿಗೆ ಫಲಾನುಭವಿಗಳನ್ನು ಎಳೆಯಲಾಗುತ್ತಿದೆ. ತಹಸೀಲ್ದಾರ್ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ದವೂ ದೂರು ದಾಖಲಿಸಬೇಕು ಎಂದು ಆಗ್ರಹಿಸಿದರು.ನೂರು ವರ್ಷದ ಹಿಂದೆ ಬ್ರಿಟೀಷರ ಕಾಲದಲ್ಲಿ ನೋಟಿಫಿಕೇಶನ್ ಆಗಿದ್ದ ಮನೆಗಳು ಸೇರಿದಂತೆ 80-90 ವರ್ಷಗಳ ಹಿಂದೆ ಮಂಜೂರಾಗಿರುವ ಭೂಮಿಯ ಮೇಲೂ ಅರಣ್ಯ ಮತ್ತು ಕಂದಾಯ ಇಲಾಖೆ ದೂರು ದಾಖಲಿಸುತ್ತಿರುವುದು ಖಂಡನೀಯವಾಗಿದೆ. ಈ ದುಷ್ಟ ಸರ್ಕಾರದ ನೀತಿಯನ್ನು ದಿಟ್ಟತನದಿಂದ ಎದುರಿಸಲು ರೈತರು ಸಿದ್ದರಾಗಬೇಕು. ಮತ್ತು ಈ ಸರ್ಕಾರದಲ್ಲಿ ಅಧಿಕಾರಿಗಳ ಮಾನಸಿಕ ಸ್ಥಿತಿಯನ್ನೇ ಪ್ರಶ್ನಿಸುವಂತಿದೆ ಎಂದು ವಾಗ್ದಾಳಿ ನಡೆಸಿದರು.
ಎಲೆಚುಕ್ಕಿ ರೋಗದಿಂದ ತಾಲೂಕಿನ ಮಂಡಗದ್ದೆ ಹೋಬಳಿಯನ್ನು ಹೊರತುಪಡಿಸಿ ಉಳಿದೆಡೆ ಅಡಕೆ ಬೆಳೆ ನಾಶವಾಗಿದೆ. ರೈತರಿಗೆ ಪರಿಹಾರ ನೀಡಲು 62 ಕೋಟಿ ರು. ಕಾದಿರಿಸಿರುವುದಾಗಿ ಮುಖ್ಯಮಂತ್ರಿ ಹೇಳಿದ್ದರೂ ಈ ಅನುದಾನ ಕೂಡಾ ರದ್ದಾಗಿದೆ ಎನ್ನಲಾಗಿದೆ. ಕೇಂದ್ರ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಷಡ್ಯಂತ್ರದಿಂದ ಹವಾಮಾನಾಧಾರಿತ ವಿಮೆ ಹಣ ದೊರೆಯದಿರುವಂತೆ ಮಳೆಮಾಪನ ವರದಿಯನ್ನೇ ತಿದ್ದಲಾಗಿದೆ ಎಂದು ಆರೋಪಿಸಿದರು.ಈ ಸರ್ಕಾರದಲ್ಲಿ ಜನರ ಸಮಸ್ಯೆಗಿಂತ ಮುಖ್ಯವಾಗಿ ಅಧಿಕಾರಕ್ಕಾಗಿ ನಡೆದಿರುವ ನಾಟಿ ಕೋಳಿ ಉಪಹಾರದ ವಿಚಾರವೇ ಪ್ರಮುಖವಾಗಿದೆ. ಶಾಸಕರು ನೇರವಾಗಿ ಸಚಿವರ ಬಳಿ ಹೋಗುವ ಸ್ಥಿತಿ ಇಲ್ಲ. ಹೀಗಾಗಿ ಪ್ರಭಾವಿ ಗುತ್ತಿಗೆದಾರರ ಮಧ್ಯವರ್ತಿಗಳನ್ನು ಅವಲಂಬಿಸಬೇಕಿದೆ. ಅಷ್ಟರಮಟ್ಟಿಗೆ ಮಂತ್ರಿಗಳು ಭ್ರಷ್ಟತೆಯಿಂದ ನಿರ್ಮಾಣರಾಗಿದ್ದಾರೆ ಎಂದು ತೀಕ್ಷ್ಣವಾಗಿ ಟೀಕಿಸಿದರು.
ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಕಂದಾಯ ಇಲಾಖೆ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್, ಬಿಜೆಪಿ ರೈತಮೋರ್ಚಾ ಅಧ್ಯಕ್ಷ ನಂಬಳ ಮುರುಳಿ, ಕಾರ್ಯದರ್ಶಿ ಕಟ್ಟೆ ಮಹೇಶ್, ಮ್ಯಾಮ್ಕೋಸ್ ಉಪಾಧ್ಯಕ್ಷ ಹುಲ್ಕುಳಿ ಮಹೇಶ್, ಕೆ.ನಾಗರಾಜ ಶೆಟ್ಟಿ, ಕವಿರಾಜ್ ಬೇಗುವಳ್ಳಿ, ಚಂದವಳ್ಳಿ ಸೋಮಶೇಖರ್, ಸಾಲೇಕೊಪ್ಪ ರಾಮಚಂದ್ರ ಇದ್ದರು.