ಕಾಂಗ್ರೆಸ್‌ ದಮನಿತರ, ರೈತರ ಪರ: ಸವದಿ

| Published : May 04 2024, 12:32 AM IST

ಸಾರಾಂಶ

ರೈತರಿಗೆ ನ್ಯಾಯ ನೀಡಲು ಬಿಜೆಪಿ ವಿಫಲವಾಗಿದೆ. ಕರಾಳ ಕೃಷಿ ನೀತಿ ತಂದು ರೈತರ ಹೊಟ್ಟೆ ಉರಿಸಿದರು. ಹತ್ತು ವರ್ಷಗಳ ಆಡಳಿತದಲ್ಲಿ ಕೇಂದ್ರದ ಮೋದಿ ಸರ್ಕಾರ ರೈತರಿಗೆ ನೀಡಿದ ಕೊಡುಗೆ ಏನು.

ಧಾರವಾಡ:

ವಚನಭ್ರಷ್ಟ ಬಿಜೆಪಿ ಬೆಂಬಲಿಸದೇ ದಮನಿತರ ಹಾಗೂ ರೈತರ ಪರವಾಗಿರುವ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಿ. ಧಾರವಾಡ ಕ್ಷೇತ್ರದ ಅಭ್ಯರ್ಥಿ ವಿನೋದ ಅಸೂಟಿ ಅವರಿಗೆ ಒಂದು ಅವಕಾಶ ನೀಡಿ ಗೆಲ್ಲಿಸಬೇಕೆಂದು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮನವಿ ಮಾಡಿದರು.

ಚುನಾವಣಾ ಪ್ರಚಾರಾರ್ಥ ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬೃಹತ್‌ ರೋಡ್‌ ಶೋನಲ್ಲಿ ಅವರು ಮಾತನಾಡಿದರು.

ರೈತರಿಗೆ ನ್ಯಾಯ ನೀಡಲು ಬಿಜೆಪಿ ವಿಫಲವಾಗಿದೆ. ಕರಾಳ ಕೃಷಿ ನೀತಿ ತಂದು ರೈತರ ಹೊಟ್ಟೆ ಉರಿಸಿದರು. ಹತ್ತು ವರ್ಷಗಳ ಆಡಳಿತದಲ್ಲಿ ಕೇಂದ್ರದ ಮೋದಿ ಸರ್ಕಾರ ರೈತರಿಗೆ ನೀಡಿದ ಕೊಡುಗೆ ಏನು. ತಮ್ಮ ಅವಧಿಯಲ್ಲಿ ಎಲ್ಲ ರೀತಿಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದೆ ಹೆಚ್ಚು. ರೈತರ ಆದಾಯ ದ್ವಿಗುಣವಾಗಲೇ ಇಲ್ಲ. ಇದನ್ನೆಲ್ಲ ರೈತರು ಸ್ಮರಿಸಿಕೊಳ್ಳಬೇಕು ಎಂದರು.

ಅಣ್ಣಿಗೇರಿ ನಗರದ ಕರಿಸಿದ್ದಪ್ಪ ದೇವಸ್ಥಾನದಿಂದ ಪ್ರಾರಂಭವಾಗಿ ಚೆನ್ನಮ್ಮ ವೃತ್ತ-ಗಾಂಧಿ ನಗರ-ಹೊರಕೇರಿ ಓಣಿ ಮುಖಾಂತರ ಬಸ್ ನಿಲ್ದಾಣದ ಬಳಿ ರೋಡ್‌ ಶೋ ಮುಕ್ತಾಯವಾಯಿತು. ಶೋ ಉದ್ದಕ್ಕೂ ಸಾವಿರಾರು ಕಾರ್ಯಕರ್ತರು ಕಾಂಗ್ರೆಸ್ ಪರ ಜೈಕಾರ ಹಾಕಿದರು.

ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್‌ ಬೆಂಬಲಿಸಿದ ರೀತಿಯಲ್ಲಿ ಪ್ರಜ್ಞಾವಂತ ಜನರು ಅಸೂಟಿಗೆ ಬೆಂಬಲಿಸಬೇಕು. ಕಳಸಾ-ಬಂಡೂರಿ ಯೋಜನೆ ವಿಷಯದಲ್ಲಿ ಪ್ರಹ್ಲಾದ ಜೋಶಿ ಬರೀ ಸುಳ್ಳು ಹೇಳುತ್ತಿದ್ದು ಅವರನ್ನು ನಂಬಬೇಡಿ ಎಂದರು.

ಅಧಿಕಾರಕ್ಕೆ ಬಂದರೆ ಬೀಗದೇ ಜನರ ಆಶಯ ಈಡೇರಿಸಲು ಕಾಂಗ್ರೆಸ್‌ ಸರ್ಕಾರ ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಮತ ನೀಡಲು ಮನವಿ ಮಾಡಿದರು.

ಮುಖಂಡರಾದ ಶಂಕರ ಗಾಣಿಗೇರ, ಬಾಪುಗೌಡ ಪಾಟೀಲ, ನಾಗಪ್ಪ ಗಾಣಿಗೇರ, ಚಂಬಣ್ಣ ಹಾಳದೋಟರ, ಡಿ.ಜಿ. ಜಂತ್ಲಿ, ವಿಜ್ಜಪ್ಪಗೌಡ ಪಾಟೀಲ, ಶಾಂತಮ್ಮ ಗುಜ್ಜಳ, ನವಲಗುಂದ, ಅಣ್ಣಿಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವರ್ಧಮಾನಗೌಡ್ರ ಹಿರೇಗೌಡ್ರ ಮತ್ತು ಮಂಜುನಾಥ ಮಾಯಣ್ಣನವರ ಇದ್ದರು.

ಕೇಶ್ವಾಪುರದಲ್ಲಿ ಪಾದಯಾತ್ರೆ:

ಆನಂತರ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಕೇಶ್ವಾಪುರದಲ್ಲಿ ಅಭ್ಯರ್ಥಿ ಅಸೂಟಿ ಪರ ಬೃಹತ್ ಪಾದಯಾತ್ರೆ ನಡೆಸಿದ ಆರೋಗ್ಯ ಸಚಿವ ದಿನೇಶ ಗುಂಡೂರಾವ್‌, ಪ್ರಹ್ಲಾದ ಜೋಶಿ ಅಪ್ರಬುದ್ಧ ರಾಜಕಾರಣಿ. ಮಹದಾಯಿ ಯೋಜನೆ ಕಾರ್ಯರೂಪಗೊಳಿಸುವ ಇಚ್ಛಾಶಕ್ತಿ ಇಲ್ಲ. ಹುಬ್ಬಳ್ಳಿ-ಧಾರವಾಡ ಜನರಿಗೆ ಕುಡಿಯುವ ನೀರು ಕೊಡಲು ಆಗುತ್ತಿಲ್ಲ. ಇಂತಹ ವ್ಯಕ್ತಿಯನ್ನು ನಾಲ್ಕು ಬಾರಿ ಗೆಲ್ಲಿಸಿದ್ದೇ ಹೆಚ್ಚು ಎಂದರು.

ಅಭ್ಯರ್ಥಿ ವಿನೋದ ಅಸೂಟಿ ಮಾತನಾಡಿ, ಕೂಲಿ ಹಾಗೂ ಅಸಂಘಟಿತ ಕಾರ್ಮಿಕರ ಪರವಾಗಿರುವ ಪಕ್ಷ ಕಾಂಗ್ರೆಸ್. ಶೋಷಿತರ ಶ್ರೇಯೋಭಿವೃದ್ಧಿಗಾಗಿ ಗ್ಯಾರಂಟಿಗಳನ್ನು ನಮ್ಮ ಪಕ್ಷ ನೀಡಿದೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಕ್ರಮಸಂಖ್ಯೆ 2ಕ್ಕೆ ಹೆಚ್ಚಿನ ಮತ ನೀಡಿ ತಮಗೆ ಆಶೀರ್ವದಿಸಲು ಮನವಿ ಮಾಡಿದರು. ಪಾದಯಾತ್ರೆ ವಾಲ್ಮೀಕಿ ವೃತ್ತದಿಂದ ಮಾರ್ಕೆಟ್ ಮೂಲಕ ಸಾಗಿ ಮುಖ್ಯ ರಸ್ತೆಯ ವರೆಗೂ ನಡೆಯಿತು.

ಈ ವೇಳೆ ಅನಿಲಕುಮಾರ ಪಾಟೀಲ, ಸದಾನಂದ ಡಂಗನವರ, ಪ್ರಕಾಶ ಕುರಹಟ್ಟಿ, ಅಬ್ದಲ್ ಗಣಿ, ಸತೀಶ ಕಳ್ಳಿಮನಿ ಇದ್ದರು. ನಂತರ ಕೇಂದ್ರ ವಿಧಾನಸಭಾ ಕ್ಷೇತ್ರದ ಗೋಕುಲದಲ್ಲಿ ಮನೆ-ಮನೆಗೆ ತೆರಳಿ ಮತಯಾಚನೆ ಮಾಡಲಾಯಿತು.