ದೇಶಕ್ಕೆ ಸ್ವಾತಂತ್ರ್ಯ ಬಂದ ದಿನದಿಂದ ಅಧಿಕಾರ, ಕುರ್ಚಿ ರಕ್ಷಣೆ ಹಾಗೂ ಸ್ವಂತ ಲಾಭಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತಂದಿರುವುದು ಕಾಂಗ್ರೆಸ್ ಪಕ್ಷ. ಬಿಜೆಪಿ ಅಲ್ಲ.

ಶಿರಹಟ್ಟಿ: ರಾಜಕೀಯವಾಗಿ ಲಾಭ ಪಡೆಯಲು ಎಲ್ಲ ಸಂದರ್ಭಗಳಲ್ಲಿಯೂ ಸಂವಿಧಾನವನ್ನು ಕಾಂಗ್ರೆಸ್‌ ದುರುಪಯೋಗಪಡಿಸಿಕೊಂಡು ಬರುತ್ತಿದೆ. ಈ ಸತ್ಯವನ್ನು ಜನರಿಗೆ ತಿಳಿಸುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ತಿಳಿಸಿದರು.ಪಟ್ಟಣದ ಅಂಬೇಡ್ಕರ್ ನಗರದ ಮರಿಯಮ್ಮದೇವಿ ದೇವಸ್ಥಾನದ ಆವರಣದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ಮತ್ತು ಬಿಜೆಪಿ ನಗರ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಭೀಮನಡೆ ಅಭಿಯಾನ ಕಾರ್ಯಕ್ರಮದಲ್ಲಿ ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದ ದಿನದಿಂದ ಅಧಿಕಾರ, ಕುರ್ಚಿ ರಕ್ಷಣೆ ಹಾಗೂ ಸ್ವಂತ ಲಾಭಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತಂದಿರುವುದು ಕಾಂಗ್ರೆಸ್ ಪಕ್ಷ. ಬಿಜೆಪಿ ಅಲ್ಲ ಎಂದರು.ಸಂವಿಧಾನವನ್ನು ಬದಲಾಯಿಸುವುದಕ್ಕಾಗಿಯೇ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ. ಅಂಬೇಡ್ಕರ್ ದೇಶಕ್ಕೆ ಅರ್ಪಿಸಿರುವ ಸಂವಿಧಾನವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಮೊದಲು ತಿಳಿಯಬೇಕು. ಅಟಲ್‌ಬಿಹಾರಿ ವಾಜಪೇಯಿ, ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನ ತಿದ್ದುಪಡಿ ಮಾಡಿರುವುದು ಪ್ರಜೆಗಳ ಒಳಿತಿಗಾಗಿಯೇ ವಿನಾ ಅಧಿಕಾರ ಉಳಿಸಿಕೊಳ್ಳಲಿಕ್ಕಲ್ಲ. ನಾವು ಸಂವಿಧಾನದ ನೈಜ ಮಾಹಿತಿ ಕೊಡುತ್ತಿದ್ದೇವೆ. ಇದು ನಿಮಗೆ ಅರ್ಥವಾಗಬೆಕು ಎಂದರು.ಅನೇಕ ಜಾತಿ, ಧರ್ಮ, ಆಚಾರ, ವಿಚಾರ, ವೈವಿಧ್ಯತೆಯಿಂದ ಕೂಡಿರುವ ಭಾರತದಲ್ಲಿ ಪ್ರತಿಯೊಬ್ಬರಿಗೂ ಸಂವಿಧಾನ ರಕ್ಷಣೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಸಂವಿಧಾನವನ್ನು ೮ ಬಾರಿ ತಿದ್ದುಪಡಿಗೊಳಿಸಿದ್ದಾರೆ. ಇದಕ್ಕೆ ನಾಲ್ಕು ಪಟ್ಟು ಹೆಚ್ಚು ಕಾಂಗ್ರೆಸ್ ಸಂವಿಧಾನವನ್ನು ತಿದ್ದುಪಡಿ ಮಾಡಿದೆ. ಕಾಂಗ್ರೆಸ್ ಅಧಿಕಾರಕ್ಕಾಗಿ ತುರ್ತು ಪರಿಸ್ಥಿತಿ ಘೋಷಣೆ ಮಾಡುವ ಮೂಲಕ ಸಂವಿಧಾನವನ್ನು ಕೊಂದಿದೆ. ಬಿಜೆಪಿ ಮೇಲೆ ಅಪಪ್ರಚಾರ ಮಾಡುವ ನೈತಿಕತೆ ಕಾಂಗ್ರೆಸ್‌ಗಿಲ್ಲ ಎಂದರು.ಮುಖಂಡರಾದ ಉಡಚಪ್ಪ ಹಳ್ಳಿಕೇರಿ, ಚಂದ್ರಶೇಖರ ಹರಿಜನ ಮಾತನಾಡಿ, ಜಗತ್ತಿಗೆ ಯಾವುದೇ ಭೇದಬಾವ ಇಲ್ಲದೇ ಸೂರ್ಯನು ಎಲ್ಲರಿಗೂ ಸಮನಾಗಿ ಬೆಳಕು ನೀಡುವಂತೆ ಡಾ. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವು ಭಾರತದ ಪ್ರತಿಯೊಬ್ಬರಿಗೂ ಸಮಾನತೆಯನ್ನು, ಗೌರವದಿಂದ ಬದುಕುವ ಹಕ್ಕನ್ನು ಕಲ್ಪಿಸಿದೆ ಎಂದರು.

ಶಿವಪ್ರಕಾಶ ಮಹಾಜನಶೆಟ್ಟರ, ನಾಗರಾಜ ಲಕ್ಕುಂಡಿ, ಜಾನು ಲಮಾಣಿ, ತಿಮ್ಮರಡ್ಡಿ ಮರಡ್ಡಿ, ಫಕ್ಕೀರೇಶ ರಟ್ಟಿಹಳ್ಳಿ, ಮೋಹನ್ ಗುತ್ತೆಮ್ಮನವರ, ಸಂದೀಪ ಕಪ್ಪತ್ತನವರ, ತಿಪ್ಪಣ್ಣ ಕೊಂಚಿಗೇರಿ, ಬಿ.ಡಿ. ಪಲ್ಲೇದ, ಶಶಿ ಪೂಜಾರ, ಮಹೇಶ ಬಡ್ನಿ, ಗಂಗಾಧರ ಮೆಣಸಿನಕಾಯಿ, ಬಸವರಾಜ ಪೂಜಾರ, ಶಿವು ಲಮಾಣಿ, ಬಸವರಾಜ ವಡವಿ, ಸಂತೋಷ ತೋಡೆಕಾರ, ಶರಣಪ್ಪ ಹರ್ಲಾಪೂರ, ಶಿವಾನಂದ ಗೌಡನಾಯಕರ, ನಿಂಗರಾಜ ದೊಡ್ಡಮನಿ ಇತರರು ಇದ್ದರು.