ಗ್ರಾಮೀಣಾಭಿವೃದ್ಧಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಪ್ರಶ್ನಿಸುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲವೇ ಇಲ್ಲ ಎಂದು ಜಿಲ್ಲಾ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಕಿಡಿ ಕಾರಿದ್ದಾರೆ.
ಕನ್ನಡಪ್ರಭ ವಾರ್ತೆ ಯಾದಗಿರಿ
ಗ್ರಾಮೀಣಾಭಿವೃದ್ಧಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಪ್ರಶ್ನಿಸುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲವೇ ಇಲ್ಲ ಎಂದು ಜಿಲ್ಲಾ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಕಿಡಿ ಕಾರಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ದುರ್ಬಲಗೊಳಿಸಲಾಗಿದೆ ಎನ್ನುವ ಕಾಂಗ್ರೆಸ್ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಎಂದು ಹೇಳಿದರು.
ಮೋದಿ ಸರ್ಕಾರ ಬಡವರ ಕೆಲಸ ಕಿತ್ತುಕೊಂಡಿಲ್ಲ. ಬದಲಾಗಿ 100 ದಿನಗಳ ಕೆಲಸವನ್ನು 125 ದಿನಗಳಿಗೆ ಹೆಚ್ಚಿಸಿ ಗ್ರಾಮೀಣ ಕಾರ್ಮಿಕರಿಗೆ ಗೌರವಯುತ ಜೀವನದ ಭರವಸೆ ನೀಡಿದೆ. ಇದು ಕೇವಲ ಅಂಕಿ-ಅಂಶವಲ್ಲ, ಬಡವರ ಬದುಕಿನ ನೈಜ ಬದಲಾವಣೆ, ಗ್ರಾಮೀಣ ಭಾರತವನ್ನು ವರ್ಷಗಟ್ಟಲೆ ಘೋಷಣೆಗಳಲ್ಲೇ ಬಂಧಿಸಿಟ್ಟ ಕಾಂಗ್ರೆಸ್ ಇಂದು ಮೋದಿ ಸರ್ಕಾರದ ಸಾಧನೆಗಳನ್ನು ಪ್ರಶ್ನಿಸುವುದು ರಾಜಕೀಯ ದಿವಾಳಿತನದ ಪರಮಾವಧಿ ಎಂದು ವಾಗ್ದಾಳಿ ನಡೆಸಿದ ಅವರು, ನರೇಗಾವನ್ನು ಕಾಂಗ್ರೆಸ್ ಜಾರಿಗೆ ತಂದಿದ್ದು ಸರಿ. ಆದರೆ ಆ ಯೋಜನೆಯನ್ನು ರಾಜಕೀಯ ಪ್ರದರ್ಶನಕ್ಕೆ ಮಾತ್ರ ಬಳಸಿ ಸುಮಾರು ₹2.13 ಲಕ್ಷ ಕೋಟಿ ರು. ಖರ್ಚು ಮಾಡಿ ಕೈ ತೊಳೆದುಕೊಂಡರು. ಆದರೆ ಮೋದಿ ಸರ್ಕಾರ ಬಡವರ ಅಭಿವೃದ್ಧಿಗಾಗಿ ಸುಮಾರು ₹8 ಲಕ್ಷ ಕೋಟಿ ರು.ಗಳ ವ್ಯಯಿಸಿ ಸ್ಪಷ್ಟ ಫಲಿತಾಂಶ ತೋರಿಸಿದೆ. ಘೋಷಣೆ ನೀಡಿದ ಕಾಂಗ್ರೆಸ್ ಮತ್ತು ಕೆಲಸದ ಮೂಲಕ ಫಲ ಕೊಟ್ಟ ಬಿಜೆಪಿ ಜನರಿಗೆ ಈ ವ್ಯತ್ಯಾಸ ಸ್ಪಷ್ಟವಾಗಿದೆ ಎಂದು ತಿರುಗೇಟು ನೀಡಿದರು.ಜವಾಹರ್ ರೋಜ್‌ಗಾರ್ ಯೋಜನೆಯ ಹೆಸರನ್ನು ಬದಲಾಯಿಸಿದ್ದ ಕಾಂಗ್ರೆಸ್ ಬಗ್ಗೆ ಮಾತನಾಡಿದ ಅವರು, ಆಗ ನೆಹರೂ ಅವರನ್ನು ಅವಮಾನಿಸಿದ ಪಾಪ ಕಾಂಗ್ರೆಸ್‌ಗೆ ಸೇರಲಿಲ್ಲವೇ? ಎಂದು ಪ್ರಶ್ನಿಸಿದರು. ಇಂದು ಗಾಂಧಿ ಹೆಸರನ್ನು ಮುಂದಿಟ್ಟು ರಾಜಕೀಯ ಮಾಡುವ ಕಾಂಗ್ರೆಸ್‌ಗೆ ಗಾಂಧೀಜಿಯ ಕನಸು ಏನಿತ್ತು ಎಂಬುದೇ ಮರೆತುಹೋಗಿದೆ ಎಂದು ಟೀಕಿಸಿದರು.
ಗಾಂಧೀಜಿ ಕಂಡ ರಾಮರಾಜ್ಯ ಅಂದರೆ ಬಡವರ ಸಬಲೀಕರಣ, ಶ್ರಮಕ್ಕೆ ಗೌರವ ಮತ್ತು ಸ್ವಾವಲಂಬನೆ. ಆ ಕನಸನ್ನು ನೆಲಮಟ್ಟದಲ್ಲಿ ಅನುಷ್ಠಾನಗೊಳಿಸುತ್ತಿರುವುದು ಮೋದಿ ಸರ್ಕಾರ ಎಂದು ಹೇಳಿದರು. ‘ಜೀ ರಾಮ್ ಜೀ’ ಎನ್ನುವುದಕ್ಕೆ ಕಾಂಗ್ರೆಸ್ ಕಿಡಿಕಾರುತ್ತಿರುವುದೇ ಅವರ ಮಾನಸಿಕ ದೌರ್ಬಲ್ಯಕ್ಕೆ ಸಾಕ್ಷಿ ಎಂದ ಅವರು, “ರಾಮ ದೇವರು ನಮ್ಮ ಉಸಿರಿನಲ್ಲೇ ಇದ್ದಾರೆ. ರಾಮನ ಹೆಸರಿಗೂ, ಗಾಂಧಿಯ ಹೆಸರಿಗೂ ರಾಜಕೀಯ ಬಣ್ಣ ಬಳಿಯುವ ನೈತಿಕ ಹಕ್ಕು ಕಾಂಗ್ರೆಸ್ ಕಳೆದುಕೊಂಡಿದೆ” ಎಂದು ಕಿಡಿಕಾರಿದರು.