ಶಾಸಕ ಸಿ.ಎನ್.ಬಾಲಕೃಷ್ಣ ನೇತೃತ್ವದಲ್ಲಿ ಬಾಗೂರಿನ ಕಾಂಗ್ರೆಸ್ ಮುಖಂಡರು ಜೆಡಿಎಸ್ ಸೇರ್ಪಡೆ

| Published : Nov 12 2025, 01:45 AM IST

ಶಾಸಕ ಸಿ.ಎನ್.ಬಾಲಕೃಷ್ಣ ನೇತೃತ್ವದಲ್ಲಿ ಬಾಗೂರಿನ ಕಾಂಗ್ರೆಸ್ ಮುಖಂಡರು ಜೆಡಿಎಸ್ ಸೇರ್ಪಡೆ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರದ ಕೈಗಾರಿಕಾ ಮಂತ್ರಿಗಳಾದ ಎಚ್. ಡಿ. ಕುಮಾರಸ್ವಾಮಿ ಅವರಿಗೆ ಅಮೆರಿಕದ ಪ್ರಸಿದ್ಧ ವೈದ್ಯರು ಚಿಕಿತ್ಸೆ ನೀಡಿರುವುದರಿಂದ ಅವರ ಆರೋಗ್ಯ ಸಂಪೂರ್ಣ ಸುಧಾರಿಸಿದೆ, ರಾಜ್ಯದ ಅಭಿವೃದ್ಧಿಗೆ ಹೆಚ್ಚು ಶ್ರಮಿಸುತ್ತಾರೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಾಗೂರು

ಹೋಬಳಿ ಕೇಂದ್ರಕ್ಕೆ ಪೊಲೀಸ್ ಠಾಣೆ ಹಾಗೂ ಸಮುದಾಯ ಆರೋಗ್ಯ ಕೇಂದ್ರ ನಿರ್ಮಿಸಿಕೊಡುವುದಾಗಿ ಶಾಸಕ ಸಿ.ಎನ್. ಬಾಲಕೃಷ್ಣ ಮಂಗಳವಾರ ತಿಳಿಸಿದರು.

ಹೋಬಳಿ ಕೇಂದ್ರದಲ್ಲಿ ಜೆಡಿಎಸ್ ಪಕ್ಷ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯೆ ರೇಣುಕಾ ಕಾಳೇಶ್ ಅವರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಾಗೂರು ಹೋಬಳಿ ಎಲ್ಲಾ ಹೋಬಳಿಗಿಂತ ದೊಡ್ಡದಿರುವುದರಿಂದ ಪೊಲೀಸ್ ಠಾಣೆ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಮಾಡಿಸುವುದರಿಂದ ಈ ಭಾಗದ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ, ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಬಾಗೂರು ಗ್ರಾಮಕ್ಕೆ ಕಾಂಕ್ರೀಟ್ ರಸ್ತೆ, ಐ ಮಾಸ್ಟ್ ವಿದ್ಯುತ್ ದೀಪ ಗಳನ್ನು ಅಳವಡಿಸಲಾಗಿದೆ. ಪ್ರವಾಸಿ ಮಂದಿರ ಹೈಟೆಕ್ ಶೌಚಾಲಯ ನಿರ್ಮಾಣ ಕಾಮಗಾರಿಗೆ ಹಣ ಬಿಡುಗಡೆಯಾಗಿದೆ ಎಂದರು. ಕಲ್ಲೇ ಸೋಮನಹಳ್ಳಿ ಏತ ನೀರಾವರಿ ಯೋಜನೆಯಿಂದ ಬಿದರೆ ಕೆರೆಗೆ ನೀರು ಹರಿಸಲು 75 ಎಚ್ ಪಿ ಮೋಟರ್ ಅಳವಡಿಸಲಾಗಿದೆ, ನಾಲ್ಕು ದಿನದಲ್ಲಿ ಮೋಟರ್ ಪಂಪುಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಎಂ. ಶಿವರ, ತಗಡೂರು, ಕೂರ್ದಳ್ಳಿ, ಬಳಗಟ್ಟ, ಅಣತಿಯ ದೊಡ್ಡ ಕೆರೆಗಳನ್ನು ಹೇಮಾವತಿ ನದಿ ನೀರು ಯೋಜನೆಯಿಂದ ತುಂಬಿಸಲಾಗಿದೆ, ಇದರಿಂದ ಈ ಭಾಗದ ರೈತರ ಅಂತರ್ಜಲ ಸಮಸ್ಯೆ ಬಗೆಹರಿಯುತ್ತದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಕೈಗಾರಿಕಾ ಮಂತ್ರಿಗಳಾದ ಎಚ್. ಡಿ. ಕುಮಾರಸ್ವಾಮಿ ಅವರಿಗೆ ಅಮೆರಿಕದ ಪ್ರಸಿದ್ಧ ವೈದ್ಯರು ಚಿಕಿತ್ಸೆ ನೀಡಿರುವುದರಿಂದ ಅವರ ಆರೋಗ್ಯ ಸಂಪೂರ್ಣ ಸುಧಾರಿಸಿದೆ, ರಾಜ್ಯದ ಅಭಿವೃದ್ಧಿಗೆ ಹೆಚ್ಚು ಶ್ರಮಿಸುತ್ತಾರೆ ಎಂದು ತಿಳಿಸಿದರು.

ಇತಿಹಾಸ ಪ್ರಸಿದ್ಧ ಸಂತೆಕಾಳೇಶ್ವರಿ ದೇವರ ನೂತನ ರಥದ ನಿರ್ಮಾಣಕ್ಕೆ ಉದ್ಯಮಿ ಭುವನಹಳ್ಳಿ ಯೋಗೇಶ್ ಅವರು 5 ಲಕ್ಷ ರು. ಹಣ ದೇಣಿಗೆ ನೀಡುತ್ತಾರೆ ಎಂದು ತಿಳಿಸಿದರು.

ಸಾಮಾಜಿಕ ನ್ಯಾಯದಡಿಯಲ್ಲಿ ಜೆಡಿಎಸ್ ಪಕ್ಷದ ಸಿದ್ಧಾಂತ ಒಪ್ಪಿ ಬಂದಿರುವ 20 ಜನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಮುಂದಿನ ದಿನಗಳಲ್ಲಿ ಗೌರವದಿಂದ ನಡೆಸಿಕೊಳ್ಳುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಚ್ ಶಿವಣ್ಣ, ಉದ್ಯಮಿ ಭುವನಹಳ್ಳಿ ಆರ್. ಯೋಗೇಶ್, ಎಪಿಎಂಸಿ ನಿರ್ದೇಶಕ ಮೂಡನಹಳ್ಳಿ ಚಂದ್ರಣ್ಣ, ಟಿಎಪಿಸಿಎಂಎಸ್ ನಿರ್ದೇಶಕ ಕುಂಬಾರಳ್ಳಿ ರಮೇಶ್, ಮಂಜುನಾಥ್, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮಲ್ಲೇಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಸವರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ವಾಮಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆಂಪೇಗೌಡ, ಮುಖಂಡರಾದ ಕೂರ್ದಳ್ಳಿ ಶಿವ ಸ್ವಾಮಿ, ಅಂಗಡಿ ಹರೀಶ್, ಮನು, ಅಣತಿ ನಂದೀಶ್, ಕಾಂತರಾಜ್, ಚಂದ್ರಣ್ಣ, ಲಕ್ಷ್ಮಣ, ಶೇಖರ್, ರೂಪೇಶ್, ನಾರಾಯಣ್, ಚಿರಂಜೀವಿ, ಗೋವಿಂದಪ್ಪ, ದಾಸಪುರ ಧರಣಿ, ಇತರರು ಹಾಜರಿದ್ದರು.