ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರಾಜ್ಯದಲ್ಲಿ ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್ ಸರ್ಕಾರ ಪತನವಾಗುವ ಪ್ರಕ್ರಿಯೆ ಆರಂಭವಾಗುತ್ತದೆ. ಆ ಪಕ್ಷದ ಶಾಸಕರೇ ಬೇಸತ್ತು ಬಿಜೆಪಿ ಕಡೆ ಬರುತ್ತಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಭವಿಷ್ಯ ನುಡಿದರು.ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಬೇರೆ ಅಲ್ಲ, ಹೆತ್ತ ತಾಯಿ ಬೇರೆ ಅಲ್ಲ. ಆಶೀರ್ವಾದ ಮಾಡಿದ ಪಕ್ಷಕ್ಕೆ ದ್ರೋಹವೆಸಗುವ ಕೆಲಸವನ್ನು ಯಾರೂ ಮಾಡಬಾರದು. ಲೋಕಸಭೆ ಚುನಾವಣೆಯ ನಂತರ ಸಾಕಷ್ಟು ಬದಲಾವಣೆ ಆಗಲಿದೆ. ನನ್ನನ್ನು ಉಪ ಮುಖ್ಯಮಂತ್ರಿ ಮಾಡುವ ಕಾರ್ಯ ಚುನಾವಣೆ ನಂತರ ಆರಂಭ ಮಾಡುತ್ತೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ರೀತಿ ಕಾಂಗ್ರೆಸ್‌ನಲ್ಲೇ ಭಿನ್ನ ಧ್ವನಿ ಸಾಕಷ್ಟಿವೆ. ಈ ಸರ್ಕಾರ ಬಹಳ ದಿನ ಇರುತ್ತದೆ ಎಂದೆನಿಸಲ್ಲ. ಇಡೀ ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಉಳಿದಿರುವುದು ಕರ್ನಾಟಕದಲ್ಲಿ ಮಾತ್ರ ಎಂದು ಕಟುವಾಗಿ ಹೇಳಿದರು.
ಲೋಕಸಭಾ ಟಿಕೆಟ್‌ಗೆ ಕಾಂಗ್ರೆಸ್ ಹಣ ಪಡೆಯುತ್ತಿರುವುದಾಗಿ ತಡವಾಗಿ ಆರೋಪ ಮಾಡುತ್ತಿದ್ದಾರೆ. ಈ ಸತ್ಯ ಎಲ್ಲರಿಗೂ ತಿಳಿದಿರುವ ವಿಚಾರ. ಕಾಂಗ್ರೆಸ್ ನಲ್ಲಿ ಫೇಮೆಂಟ್ ಇಲ್ಲದೇ ಯಾವುದೂ ನಡೆಯಲ್ಲ ಎಂಬುದು ಜಗಜ್ಜಾಹೀರಾಗಿದೆ ಎಂದು ಕುಟುಕಿದರು.ಪ್ರಧಾನಿ ಮೋದಿಯವರು ಭಾರತ ಅಕ್ಕಿಯನ್ನು ಕಡಿಮೆ ಬೆಲೆಗೆ ಕೊಟ್ಟಿದ್ದಾರೆ. 29 ರು.ಗೆ ಒಂದು ಕೇಜಿ ಅಕ್ಕಿ ಕೊಡುತ್ತಿದ್ದಾರೆ. ಅಕ್ಕಿಯನ್ನು ಎಷ್ಟು ಬೇಕಾದರೂ ಕೊಡುತ್ತೇವೆ ಎಂದಿದ್ದಾರೆ. ರಾಜ್ಯ ಸರ್ಕಾರ ಅಕ್ಕಿ ಕೊಡುತ್ತೇವೆ ಎಂದು ಈಗ ದುಡ್ಡು ಕೊಡುತ್ತಿದೆ. ದುಡ್ಡು ಕೊಡುವುದರಿಂದ ಜನರ ಹೊಟ್ಟೆ ತುಂಬುವುದಿಲ್ಲ. ಜನರಿಗೆ ಹೊಟ್ಟೆ ತುಂಬಲು ಅಕ್ಕಿ ಬೇಕು, ಅದನ್ನು ಮೋದಿ ಕೊಡುತ್ತಾರೆ ಎಂದರು.
ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಿ ಎಸ್ಕೇಪ್ ಆಗಿದ್ದಾನೆ. ಆದರೆ, ನಮ್ಮ ಪೊಲೀಸ್ ಇಲಾಖೆ ಬಗ್ಗೆ ನಮಗೆ ವಿಶ್ವಾಸವಿದೆ. ಪೊಲೀಸರ ಕಣ್ತಪ್ಪಿಸಿಕೊಂಡು ಹೋಗುವ ಕೆಲಸ ಏನು ಮಾಡಿದ್ದಾರೆ?, ಮತ್ತೆ ಹಿಡಿದು ಒಳಗೆ ಹಾಕುತ್ತಾರೆ. ನೀನು ಅತ್ತಹಾಗೆ ಮಾಡು ನಾನು ಚಿವುಟುವ ಹಾಗೆ ಮಾಡುತ್ತೇನೆ ಎಂಬ ರೀತಿ ಮ್ಯಾಚ್ ಫಿಕ್ಸಿಂಗ್ ಆಗಿದೆಯೋ, ನಿಜವಾಗಿಯೂ ತಪ್ಪಿಸಿಕೊಂಡು ಹೋಗಿದ್ದಾನೋ ಎಂಬ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.