ಸಾರಾಂಶ
ಕನ್ನಡಪ್ರಭ ವಾರ್ತೆ ಹುಮನಾಬಾದ್
ತಮ್ಮನ್ನು ಪಾಕೀಟ್ ಶಾಸಕ, ಮಾಜಿ ಸಚಿವ ರಾಜಶೇಖರ ಪಾಟೀಲ್ ಅವರ ಬಗ್ಗೆ ಮಾತನಾಡಿದರೆ ನಾಲಿಗೆ ಕಟ್ ಮಾಡ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ್ ಜೀವ ಬೆದರಿಕೆ ಹಾಕಿದ್ದಾರೆ ಎಂದು ಹುಮನಾಬಾದ್ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್ ದೂರು ದಾಖಲಿಸಿದ್ದಾರೆ.ಭಾನುವಾರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಅವರು ಈ ಕುರಿತು ತಿಳಿಸಿದ್ದು, ನೂತನವಾಗಿ ಆಯ್ಕೆಯಾದ ಲೋಕಸಭಾ ಸದಸ್ಯ ಸಾಗರ ಖಂಡ್ರೆಗೆ ಪಟ್ಟಣದಲ್ಲಿ ಶನಿವಾರ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದ ಸಂದರ್ಭ, ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ್ ಮಾಜಿ ಸಚಿವ ರಾಜಶೇಖರ ಪಾಟೀಲ್‌ಗೆ ಪಾಕೀಟ್ ಶಾಸಕನ ನಾಲಿಗೆ ಕಟ್ ಮಾಡ್ತೇವೆ ಎಂದು ಹೇಳಿದ್ದು ಜೀವ ಬೆದರಿಕೆಯೊಡ್ಡಿದಂತಿದೆ. ಈ ಕುರಿತಂತೆ ದೂರು ದಾಖಲಿಸಿಕೊಂಡು ಕ್ರಿಮಿನಲ್ ದಾವೆ ಹೂಡಿ ತಪ್ಪಿತಸ್ಥರಿಗೆ ಶಿಕ್ಷಿಸುವಂತೆ ಕೋರಿದ್ದಾರೆ.
ಈ ಕುರಿತಂತೆ ಬಿಜೆಪಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಮುಖಂಡ ಮಂಡಲ ಅಧ್ಯಕ್ಷ ಅನೀಲ ಪಸರ್ಗಿ, ಹುಮನಾಬಾದ್ ಪೊಲೀಸ್ ಅಧಿಕಾರಿಗಳು ಈ ಕುರಿತು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿಲ್ಲ. ಈ ಹಿಂದೆ ಬಿಜೆಪಿ ಕಾರ್ಯಕರ್ತರು ಒಂದು ವಿಷಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಿಟ್ಟಿರುವ ಪೋಸ್ಟ್‌ವೊಂದನ್ನು ಆಧರಿಸಿ ಹುಮನಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು, ಆದರೆ ಶಾಸಕರ ನಾಲಿಗೆ ಕತ್ತರಿಸುವೆ ಎಂದು ವಿಧಾನ ಪರಿಷತ್ ಸದಸ್ಯರು ಬಹಿರಂಗ ಸಭೆಯಲ್ಲಿ ಹೇಳಿಕೆ ನೀಡಿದರೂ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಕಿಡಿಕಾರಿದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿರುವ ಕಾರಣ ಸ್ಥಳೀಯ ಕಾಂಗ್ರೆಸ್ ನಾಯಕರು ಅದನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ವಿಧಾನ ಪರಿಷತ್ ಸದಸ್ಯರ ವಿರುದ್ಧ ದೂರು ನೀಡಲಾಗುವುದು. ಕೂಡಲೇ ಪೊಲೀಸ್ ಅಧಿಕಾರಿಗಳು ಅವರನ್ನು ಬಂಧಿಸಬೇಕು. ವಿಳಂಬ ಮಾಡಿದರೆ ಕಾನೂನು ಚೌಕಟ್ಟಿನಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಬಂದ ದಿನದಿಂದ ಹುಮನಾಬಾದ್‌ನಲ್ಲಿ ಭಯದ ವಾತಾವರಣ ನಿರ್ಮಣ ಮಾಡಲಾಗುತ್ತಿದೆ. ಅಭಿವೃದ್ಧಿಗಾಗಿ ಸರ್ಕಾರ ಇರಬೇಕು, ಜನರಲ್ಲಿ ಭಯ ಉಂಟು ಮಾಡುವುದ್ದಕ್ಕಾಗಿ ಅಲ್ಲ. ಆದರೆ ಶಾಸಕರಾಗಿ ಕೀಳು ಮಟ್ಟದ್ದಾಗಿ ಮಾತನಾಡುತ್ತಾರೆ ಇದು ಸರಿಯಲ್ಲ.ಈ ಸಂದರ್ಭದಲ್ಲಿ ಅನೀಲ ಪಸರ್ಗಿ, ಗೋಪಾಲಕೃಷ್ಣ ಮೋಹಳೆ, ಜ್ಞಾನದೇವ ಧುಮಾಳೆ, ಪ್ರಭಾಕರ ನಾಗರಳೆ, ನಾಗಭೋಷಣ ಸಂಗಮಕರ್, ಗಿರೀಶ ತುಂಬಾ, ಪರಮೇಶ ಕಾಳಮದರಗಿ, ಸುನೀಲ ಪತ್ರಿ, ಆಸದ್ ಪಟೇಲ್, ಯಲ್ಲಾರೆಡ್ಡಿ, ಶಿವರಾಜ ರಾಜೋಳೆ, ಪ್ರಕಾಶ ತಿಬ್ಬಶಟ್ಟಿ, ನಾಗರೆಡ್ಡಿ ಅಮಿರಾಬಾದ ಸೇರಿದಂತೆ ಅನೇಕರಿದ್ದರು.