ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚಿಸದಿದ್ದರೆ ದೇಶವೂ ಧಗ ಧಗ ಉರಿಯುತ್ತಿತ್ತು ಎಂದು ವಿದ್ಯಾವರ್ಧಕ ಕಾನೂನು ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಕೆ.ಎಲ್. ಚಂದ್ರಶೇಖರ್ ಐಜೂರು ತಿಳಿಸಿದರು.ನಗರದ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಮತ್ತು ನಗರ ಕಾಂಗ್ರೆಸ್ ಸಮಿತಿಯು ಮಂಗಳವಾರ ಆಯೋಜಿಸಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಜಗತ್ತಿನ ಬೇರೆ ದೇಶಗಳು ಕೋಮು ದಳ್ಳುರಿ, ಜನಾಂಗೀಯ ದ್ವೇಷಗಳಿಂದ ಹೊತ್ತಿ ಉರಿಯುತ್ತಿವೆ. ಆದರೆ, ಭಾರತದಲ್ಲಿ ಭಿನ್ನಾಚರಣೆಗಳು, ಸಂಪ್ರದಾಯಗಳು, 5 ಸಾವಿರ ಜಾತಿಗಳು ಇದ್ದರೂ ಜನಾಂಗೀಯ ಕಲಹಗಳು, ಹತ್ಯಾಖಂಡ ಆಗುತ್ತಿಲ್ಲ. ಇದಕ್ಕೆ ಸಂವಿಧಾನವೂ ದೇಶದ ಬೆನ್ನುಮೂಳೆಯಾಗಿ ಪ್ರತಿಯೊಬ್ಬರ ರಕ್ಷಣೆಗೆ ನಿಂತಿರುವುದು ಕಾರಣ ಎಂದು ಹೇಳಿದರು.
ಸಮಾನತೆ, ಭಾತೃತ್ವ, ಜಾತ್ಯತೀತತೆ ಎನ್ನುವುದು ದೇಶದಲ್ಲಿ ಇರಲಿಲ್ಲ. ಇದನ್ನು ಸಹಿಸಲಾಗದೆ ಸಂವಿಧಾನ ವಿರೋಧಿಸಿ, ಬದಲಾವಣೆ ಮಾತಗಳನ್ನಾಡುತ್ತಾರೆ. ಆದರೆ, ಬೃಹತ್ ಅಣುಬಾಂಬ್ ಹಾಕಿದರು ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ. ಸಂವಿಧಾನದ ಪೀಠಿಕೆಯು ದೇಶದ ಆತ್ಮವಾಗಿದೆ ಎಂದರು.ಕ್ಯಾಲೆಂಡರ್ ಅನ್ನು 150 ವರ್ಷ ಹಿಂದಕ್ಕೆ ತಳ್ಳಿದರೇ ಸತಿಸಹಗಮನ ಪದ್ಧತಿಯ ಮೂಲಕ ಮಹಿಳೆಯರನ್ನು ಉರಿಯುವ ಚಿತೆಗೆ ನೂಕುತ್ತಿದ್ದರು. ವಿದ್ಯೆ ಸೇರಿದಂತೆ ಹಲವು ಹಕ್ಕುಗಳನ್ನು ಕಿತ್ತುಕೊಂಡಿದ್ದರು. ಆದರೆ, ಹೀನಾ ಪದ್ಧತಿಗಳನ್ನು ತೊಲಗಿಸಿ ಸಕಲ ಹಕ್ಕುಗಳನ್ನು ನೀಡುವ ಮೂಲಕ ಮಹಿಳೆಯರಿಗೆ ಸಂವಿಧಾನ ಬುಲೆಟ್ ಫ್ರೂಪ್ ಭದ್ರತೆ ಒದಗಿಸಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್ ಮಾತನಾಡಿ, ಜಗತ್ತಿನ ಸರ್ವಶ್ರೇಷ್ಠ ಸಂವಿಧಾನದಲ್ಲಿ ಭಾರತದ ಸಂವಿಧಾನ ಅಗ್ರಗಣ್ಯ ಸ್ಥಾನದಲ್ಲಿದೆ. ದೇಶದ ಸಂವಿಧಾನದ ಮಾದರಿಯನ್ನು ಅನೇಕ ದೇಶಗಳು ಅಳವಡಿಸಿಕೊಂಡಿವೆ. ಸಂವಿಧಾನದ ಆಶಯಗಳೇ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಮತ್ತು ಗುರಿಯಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ಅರಿತುಕೊಳ್ಳಬೇಕು ಎಂದು ಹೇಳಿದರು.ಡಾ. ಅಂಬೇಡ್ಕರ್ ಆಶಯಗಳನ್ನು ಜಾರಿಗೆ ತರಬೇಕೆಂದು ಕಾಂಗ್ರೆಸ್ ಶ್ರಮಿಸುತ್ತಿದೆ. ಇಂದಿರಾ ಗಾಂಧಿ 1976 ರಲ್ಲಿ ಸಂವಿಧಾನ ಪೀಠಿಕೆಯಲ್ಲಿ ಅಳವಡಿಸಿದ್ದ ಜಾತ್ಯತೀತತೆ, ಸಮಾಜವಾದಿ ಪದ ತೆಗೆಯುವಂತೆ ಕೆಲವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆದರೆ, ನ್ಯಾಯಾಲಯವು ಈ ಪದಗಳನ್ನು ಎತ್ತಿ ಹಿಡಿದೆ ಎಂದರು.
ರಾಜ್ಯ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್, ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಮುಖಂಡರಾದ ಎಂ. ಶಿವಣ್ಣ, ಈಶ್ವರ್ ಚಕ್ಕಡಿ, ಕೆ. ಮಹೇಶ್, ಪುಷ್ಪಲತಾ ಚಿಕ್ಕಣ್ಣ, ಎಂ. ಶಿವಪ್ರಸಾದ್, ಉತ್ತನಹಳ್ಳಿ ಶಿವಣ್ಣ, ಮೋದಾಮಣಿ, ವೆಂಕಟೇಶ್, ಟಿ.ಬಿ. ಚಿಕ್ಕಣ್ಣ, ಸುಧಾ ಮಹದೇವಯ್ಯ, ಭಾಸ್ಕರ್, ಸುನಂದಕುಮಾರ್, ಗಿರೀಶ್ ಮೊದಲಾದವರು ಇದ್ದರು.