ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಜಯ : ಚನ್ನಗಿರಿ ಶಾಸಕ ಬಸವರಾಜು

| Published : Nov 10 2024, 02:03 AM IST / Updated: Nov 10 2024, 11:44 AM IST

ಸಾರಾಂಶ

ಮೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಜಯ ಸಾಧಿಸಲಿದ್ದಾರೆ ಎಂದು ಚನ್ನಗಿರಿ ಶಾಸಕ ಬಸವರಾಜು ವಿ.ಶಿವಗಂಗಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 ದಾವಣಗೆರೆ  :  ಮೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಜಯ ಸಾಧಿಸಲಿದ್ದಾರೆ ಎಂದು ಚನ್ನಗಿರಿ ಶಾಸಕ ಬಸವರಾಜು ವಿ.ಶಿವಗಂಗಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶಿಗ್ಗಾಂವ-ಸವಣೂರು ಉಪ ಕದನದಲ್ಲಿ ಶಿಶುವಿನಹಾಳ ಗ್ರಾಮ ಪಂಚಾಯಿತಿ ಚುನಾವಣೆ ಜವಾಬ್ದಾರಿ ತೆಗೆದುಕೊಂಡಿದ್ದು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. 13 ರಂದು ನಡೆಯಲಿರುವ ಮತದಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸಿನ್ ಅಹಮ್ಮದ್ ಖಾನ್ ಪಠಾಣ ಪರವಾಗಿ ಜನ ಬೆಂಬಲವಿದ್ದು ಗೆದ್ದೇ ಗೆಲ್ಲುತ್ತಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷ 2023 ರ ಚುನಾವಣೆ ಪೂರ್ವದಲ್ಲಿ ಕೊಟ್ಟ ಭರವಸೆಯನ್ನು ಈಡೇರಿಸಿ 5 ಗ್ಯಾರಂಟಿಗಳನ್ನು ಸಮಗ್ರವಾಗಿ ಜಾರಿಗೊಳಿಸಿದ್ದು, ನುಡಿದಂತೆ ನಡೆದಿದ್ದೇವೆ. ಲಕ್ಷಾಂತರ ಕಟುಂಬಗಳಿಗೆ ಅನ್ನಭಾಗ್ಯ, ಶಕ್ತಿಯೋಜನೆ, ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಯುವನಿಧಿ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ಸರ್ಕಾರದ ಮೇಲೆ ಜನರ ನಂಬಿಕೆ ಇದೆ ಎಂದರು.

ಉಪ ಚುನಾವಣೆಯಲ್ಲಿ ಬಿಜೆಪಿಗೆ ಜನರು ಮತ್ತೊಮ್ಮೆ ತಕ್ಕ ಪಾಠ ಕಲಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮನ್ನಣೆ ನೀಡಲಿದ್ದಾರೆ ಎಂದರು. ಶಿಗ್ಗಾಂವ - ಸವಣೂರು ಉಪ ಚುನಾವಣೆಯಲ್ಲಿ ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲಿಯೂ ಕಾಂಗ್ರೆಸ್ ಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ. ನೂರಕ್ಕೆ ನೂರರಷ್ಟು ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚನ್ನಪಟ್ಟಣ ಮತ್ತು ಸಂಡೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೊಷ್ಟು ಬಲಿಷ್ಠವಾಗಿದೆ ಎಂದು ಈ ಚುನಾವಣೆಯಲ್ಲಿ ಮತ್ತೊಮ್ಮೆ ಸಾಬೀತು ಮಾಡುತ್ತೇವೆ ಎಂದರು. ಈ ವೇಳೆ ಶಿಗ್ಗಾಂವ-ಸವಣೂರು ಕ್ಷೇತ್ರದ ಕಾಂಗ್ರೆಸ್ ಮುಖಂಡರು, ಗ್ರಾಮ ಪಂಚಾಯಿತಿ ಸದಸ್ಯರು, ಸ್ಥಳೀಯ ಕಾರ್ಯಕರ್ತರು ಮತ್ತು ಯುವ ಮುಖಂಡ ಗಿರೀಶ್ ಸಂತೇಬೆನ್ನೂರು ಸೇರಿದಂತೆ ಸ್ಥಳೀಯ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.