ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕಾಂಗ್ರೆಸ್ ಪಕ್ಷ ಅಂದ್ರೆ ಮುಸ್ಲಿಂ ಲೀಗ್ ಇದ್ದ ಹಾಗೆ ಎಂದಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರು, ಮುಸ್ಲಿಂ ಲೀಗ್ ಅಂದ್ರೆ ಬಹಳಷ್ಟು ಜನ ಸಾಬರ ಪಾರ್ಟಿ ಅನ್ಕೊಂಡಿದ್ರು. ಈ ದೇಶವನ್ನು ಇಬ್ಭಾಗ ಮಾಡಲು ಕರೆ ಕೊಟ್ಟ ಮೊದಲ ಪಕ್ಷ ಮುಸ್ಲಿಂ ಲೀಗ್ ಎಂದು ಕಿಡಿಕಾರಿದ್ದಾರೆ.ಜಿಲ್ಲೆಯ ಮಹಾಕೂಟದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮುಸ್ಲಿಂ ಲೀಗ್ ನ ಮುಖ್ಯಸ್ಥನಾಗಿದ್ದು, ಇವರು ಮಹಮ್ಮದ್ ಅಲಿ ಜಿನ್ನಾ ಇದ್ದಂತೆ ಎಂದು ವಾಗ್ದಾಳಿ ನಡೆಸಿದರು.
ಮುಸ್ಲಿಂ ಲೀಗ್ ನವರು ಪ್ರತ್ಯೇಕ ಬಜೆಟ್ ಕೇಳ್ತಿದ್ದಾರೆ. ಪ್ರತ್ಯೇಕ ಅಂದ್ರೆ ಇದ್ರ ಏನರ್ಥ? ಬಾಂಗ್ಲಾ ನುಸುಳುಕೋರರ ಬಗ್ಗೆ ಮಾತಾಡಲ್ಲ. ಡಿಕೆಶಿಯವರು ಅವರು ನಮ್ಮ ಬ್ರದರ್ಸ್ ಅಂತಾರೆ. ಅವರಿಗೆ ಇವರು ಹೇಗೆ ಬ್ರದರ್ಸ್ ಆಗ್ತಾರೆ ಗೊತ್ತಿಲ್ಲ. ರಾಹುಲ್ ಗಾಂಧಿ ಅಪ್ರಭುದ್ಧ ಪಾರ್ಟ್ ಟೈಂ ರಾಜಕಾರಿಣಿ. ಯಾವುದೇ ವಿಷಯದ ಬಗ್ಗೆ ಗಂಭೀರತೆ ಇಲ್ಲದ ನಾಯಕ. ಅವನ ಮಾತು ಕೇಳಿ ಸಿದ್ದರಾಮಯ್ಯ ನಡೆದರೆ ಹೇಗೆ? ದೇಶದಲ್ಲಿ ಕಾಂಗ್ರೆಸ್ ನಶಿಸಿ ಹೋಗ್ತಿದೆ, ಕರ್ನಾಟಕದಲ್ಲೂ ಸಹ ನೆಲಕಚ್ಚಲಿದೆ ಎಂದು ಪ್ರಹ್ಲಾದ ಜೋಷಿ ಭವಿಷ್ಯ ನುಡಿದರು.ಕಾಂಗ್ರೆಸ್ ನವರು ಶುದ್ಧ ಅಯೋಗ್ಯರು:ರಾಹುಲ್ ಗಾಂಧಿ ಅಂತವರ ಮಾತು ಕೇಳಿ ಇವರೆಲ್ಲ ಕುಣಿದಾಡ್ತಾರೆ. ರಾಹುಲ್ ಗಾಂಧಿಗೆ ಬುದ್ಧಿ ಇಲ್ಲ, ಬುದ್ಧಿ ಇಲ್ಲದವನ ಮಾತು ಕೇಳಿ ಕಾಂಗ್ರೆಸ್ ಪರಿಸ್ಥಿತಿ ಹೀಗಾಗಿದೆ. ಕೆಲವರು ವೈಯಕ್ತಿಕವಾಗಿ ಭೇಟಿಯಾದಾಗ ಪಕ್ಷಕ್ಕೆ ರಾಹುಲ್ ಗಾಂಧಿ ಅಂಥವರು ಲೀಡರ್ ಸಿಕ್ಕಿದ್ದು ನಮ್ಮ ದುರ್ದೈವ. ಇಂತವರನ್ನು ಇಟ್ಟುಕೊಂಡೇ ನಮ್ಮ ಪಕ್ಷದ ಹಣೆಬರಹ ಹೀಗಾಗಿದೆ ಎಂದು ಹೇಳಿಕೊಳ್ಳುತ್ತಾರೆ ಎಂದು ಲೇವಡಿ ಮಾಡಿದರು.
ಮೋದಿ ಅವರ ಆರ್ಥಿಕ ಮಿತವ್ಯಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಜಾಗತಿಕ ಮಟ್ಟದಲ್ಲಿ ಒಂದು ಬಹುದೊಡ್ಡ ಕ್ರೈಸೆಸ್ ಕ್ರಿಯೇಟ್ ಆಗಿದೆ, ಇದರಿಂದ ನಮ್ಮ ದೇಶ ಅಷ್ಟೇ ಅಲ್ಲ , ಬೇರೆ ಬೇರೆ ದೇಶಗಳಲ್ಲಿ ಎನರ್ಜಿ ಎಮರ್ಜನ್ಸಿಯನ್ನ ಘೋಷಣೆ ಮಾಡಿದ್ದಾರೆ, ಬಹಳಷ್ಟು ಮುಂದುವರೆದ ದೇಶಗಳಲ್ಲಿ ಈ ರೀತಿ ಘೋಷಣೆಯಾಗಿದೆ. ಹೀಗಾಗಿ ನಾವು ಮಿತವ್ಯಯ ಮಾಡಬೇಕು ಎಂದು ಪ್ರಧಾನಿ ಹೇಳಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಹಿಜಾಬ್ ಗೆ ಪರವಾನಗಿ ನೀಡಿರುವ ವಿಚಾರ ಪ್ರಸ್ತಾಪಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರು, ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಯಾವುದಾದ್ರೂ ಒಂದು ಹೊಸ ವಿಷಯ ಹುಡುಕುತ್ತಿರುತ್ತದೆ. ಈಗ ಹಿಜಾಬ್ ವಿಷಯ ಹುಡುಕಿದೆ. ಅಧಿಕಾರ ಹೋಗುತ್ತೆ ಎಂಬ ಭಯದಲ್ಲಿ ಮುಸ್ಲಿಮರಿಗೆ ಬೆದರಿಕೆ ತಂತ್ರ ಹೂಡಿ, ಬೇಡಿಕೆ ಪಟ್ಟಿ ಸಲ್ಲಿಸಿದ್ದಾರೆ. ಸಿದ್ದರಾಮಯ್ಯನವರೇ, ರಾಹುಲ್ ಗಾಂಧಿ ಮಾತು ಕೇಳಿ, ಈ ರೀತಿಯ ನಿರ್ಣಯ ತಗೆದುಕೊಂಡ್ರೆ ಕಾಂಗ್ರೆಸ್ ಪಕ್ಷವನ್ನ ಮುಸ್ಲಿಂ ಲೀಗ್ ಎನ್ನಬೇಕಾಗುತ್ತದೆ ಎಂದರು.
ಜಗತ್ತಿನ ದೊಡ್ಡ ಪರೀಕ್ಷಾ ವ್ಯವಸ್ಥೆ ನೀಟ್:ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರು, ಎರಡು ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಸಚಿವ ಧರ್ಮೇಂದ್ರ ಪ್ರಧಾನ್ ಅವರು ಈ ಬಗ್ಗೆ ಡೀಟೇಲ್ ಆಗಿ ಮಾತನಾಡಿದ್ದಾರೆ. ಜಗತ್ತಿನ ದೊಡ್ಡ ಪರೀಕ್ಷಾ ವ್ಯವಸ್ಥೆ ನೀಟ್. 23 ರಿಂದ 24 ಲಕ್ಷ ಜನ ಬರೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಆನ್ ಲೈನ್ ಮಾಡುತ್ತೇವೆ. ಆದಷ್ಟು ಬೇಗ ಮರುಪರೀಕ್ಷೆ ಮಾಡುತ್ತೇವೆ. ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ನಾನು ಕೈಮುಗಿದು ಪ್ರಾರ್ಥನೆ ಮಾಡುತ್ತೇನೆ. ಪರೀಕ್ಷೆ ಮುಂದೆ ಹಾಕಿದರೆ ಸೀಟ್ ಸಿಗೋದಿಲ್ಲವೆಂದು ತಿಳಿದುಕೊಳ್ಳಬಾರದು, ಮುಂದಿನ ವ್ಯವಸ್ಥೆಯಲ್ಲಿ ಪರೀಕ್ಷೆ ನಡೆಸಿ ಸೀಟ್ ಕೊಡ್ತೇವೆ. ಪ್ರತಿಭಾವಂತರಿಗೆ ಅನ್ಯಾಯವಾಗಬಾರದೆಂದು ಕ್ರಮ ಕೈಗೊಂಡಿದ್ದೇವೆ, ಇಲ್ಲವಾದರೆ ಇದು ಅಲ್ಲಿಯೇ ಮುಚ್ಚಿ ಹೋಗಬಹುದಿತ್ತು, ಆ ರೀತಿ ಮಾಡಿಲ್ಲ, ಮುಂದಿನ ಸಾರಿ ವ್ಯವಸ್ಥೆಯನ್ನು ಸಂಪೂರ್ಣ ಬದಲಿಸುತ್ತೇವೆ ಎಂದು ಮನವಿ ಮಾಡಿದರು.
ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವುದರ ಬಗ್ಗೆ ಬಹಳ ನೋವಿದೆ. ನಮ್ಮದು ಅತ್ಯಂತ ಸೆನ್ಸಿಬಲ್ ಸರ್ಕಾರ. ನಾವೇನು ಉಡಾಫೆ ಉತ್ತರ ಕೊಡಲು ಹೋಗಲ್ಲ, ಕಾಂಗ್ರೆಸ್ ಆಡಳಿತದಲ್ಲಿ ರಾಜಸ್ಥಾನದಲ್ಲಿ 19 ಬಾರಿ ಪ್ರಶ್ನೆಪತ್ರಿಕೆ ಲೀಕ್ ಆಗಿದೆ. ಆರೋಪ ಮಾಡುತ್ತಿರುವ ಕಾಂಗ್ರೆಸ್ ನವರು ಮೊದಲು ಕೆಪಿಎಸ್‌ಸಿ ಸರಿ ಮಾಡಲಿ, ನಿಮ್ಮಲ್ಲಿ ಆಗಿರುವ ಹಗರಣಗಳ ತನಿಖೆಗೆ ಒಂದು ಕಮೀಟಿ ಮಾಡಿ, ಎಲ್ಲವನ್ನೂ ದುಡ್ಡು ತಗೊಂಡು ಪತ್ರಿಕೆ ಲೀಕ್ ಮಾಡ್ತೀರಿ. ಇದಕ್ಕೆ ಕಂಪೇರ್ ಮಾಡಿ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ, ನಮಗೆ ಅದರ ಬಗ್ಗೆ ವಿಷಾದವಿದೆ. ಇದು ಜಗತ್ತಿನ ದೊಡ್ಡ ಪರೀಕ್ಷೆ. ಆದ್ದರಿಂದ ಲೋಪ ಸರಿಪಡಿಸಿಕೊಂಡು ತಂತ್ರಜ್ಞಾನ ಆಧರಿತ ಪರೀಕ್ಷೆ ಮಾಡುತ್ತೇವೆ. ಯಾರೂ ಆತ್ಮಹತ್ಯೆ ಮಾಡಿಕೊಳ್ಳಬಾರದೆಂದು ನಮ್ಮ ಮನವಿ ಎಂದು ಸಚಿವ ಜೋಷಿ ಹೇಳಿದರು.