ಮುಂದಿನ ಅಸೆಂಬ್ಲಿ ಎಲೆಕ್ಷನ್‌ಗೆ ಕಾಂಗ್ರೆಸ್‌ ಈಗಿಂದ್ಲೇ ತಯಾರಿ

| Published : Jun 13 2024, 01:47 AM IST / Updated: Jun 13 2024, 08:54 AM IST

ಮುಂದಿನ ಅಸೆಂಬ್ಲಿ ಎಲೆಕ್ಷನ್‌ಗೆ ಕಾಂಗ್ರೆಸ್‌ ಈಗಿಂದ್ಲೇ ತಯಾರಿ
Share this Article
  • FB
  • TW
  • Linkdin
  • Email

ಸಾರಾಂಶ

4 ವರ್ಷದ ಬಳಿಕ ಆಡಳಿತ ವಿರೋಧಿ ಅಲೆ ಎದುರಾದರೆ ಈಗ ಸೋತವರಿಗೆ ಮಣೆ ಹಾಕಲು ಪ್ಲಾನ್‌ ಮಾಡಲಾಗಿದ್ದು, ಉಪಚುನಾವಣೆಗೂ ಸಿದ್ಧತೆ ಕೈಗೊಳ್ಳಲಾಗಿದೆ. ಇಂದಿನಿಂದ ಡಿಕೆಶಿ 3 ದಿನ ಮಹತ್ವದ ಸರಣಿ ಸಭೆ ನಡೆಸಲಿದ್ದು, ವಿಧಾನಸಭೆ, ಲೋಕಸಭೆಯಲ್ಲಿ ಸೋತವರ ಜತೆ ಚರ್ಚೆ ನಡೆಸಲಿದ್ದಾರೆ.

 ಬೆಂಗಳೂರು :  ಲೋಕಸಭೆ ಚುನಾವಣೆಯಲ್ಲಾದ ಹಿನ್ನಡೆ ಕುರಿತು ಆತ್ಮಾವಲೋಕನ ಹಾಗೂ ಮುಂಬರುವ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸುವ ಸಲುವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಗುರುವಾರದಿಂದ ಮೂರು ದಿನಗಳ ಕಾಲ ಮಹತ್ವದ ಸರಣಿ ಸಭೆ ಕೆಪಿಸಿಸಿ ಕಚೇರಿಯಲ್ಲಿ ನಡೆಯಲಿದೆ.

ಪ್ರಮುಖವಾಗಿ ಲೋಕಸಭೆ ಚುನಾವಣೆ ಹಾಗೂ ಕಳೆದ ವಿಧಾನಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿಗಳೊಂದಿಗೆ ನಡೆಯಲಿರುವ ಪ್ರಥಮ ಸಭೆಯಲ್ಲಿ ಈ ಪರಾಜಿತ ಅಭ್ಯರ್ಥಿಗಳು ಈಗಿನಿಂದಲೇ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸಬಲಗೊಳಿಸುವ ಕಾರ್ಯದಲ್ಲಿ ತೊಡಗುವಂತೆ ಮಾಡಲು ಅವರಿಗೆ ಪಕ್ಷ ಹಾಗೂ ಸರ್ಕಾರದ ಮೂಲಕ ನೀಡಬೇಕಾದ ನೆರವಿನ ಬಗ್ಗೆ ಸಾದ್ಯಂತವಾಗಿ ಚರ್ಚೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.

ಇದಲ್ಲದೆ, ಕೆಪಿಸಿಸಿ ಅಧ್ಯಕ್ಷರೂ ಆದ ಶಿವಕುಮಾರ್‌ ಅವರು ಗುರುವಾರದಿಂದ ನಾಯಕರು, ಮುಂಚೂಣಿ ಘಟಕಗಳ ಮುಖ್ಯಸ್ಥರು, ವಿವಿಧ ಹಂತದ ಪದಾಧಿಕಾರಿಗಳ ಜತೆ ಸರಣಿ ಸಭೆಗಳನ್ನು ನಡೆಸಲಿದ್ದಾರೆ.

ಮುಂದಿನ ವಿಧಾನಸಭೆ ಚುನಾವಣೆಗೆ ನಾಲ್ಕು ವರ್ಷಗಳ ಮೊದಲೇ ಕಾರ್ಯತಂತ್ರ ಆರಂಭಿಸುವ ಉದ್ದೇಶದಿಂದ ಪ್ರಥಮ ಸಭೆ ನಡೆಯಲಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ 90 ಮಂದಿ ಪರಾಜಿತ ಅಭ್ಯರ್ಥಿಗಳು ಹಾಗೂ ಲೋಕಸಭೆ ಚುನಾವಣೆಯಲ್ಲಿ ಸೋತಿರುವ 19 ಮಂದಿ ಅಭ್ಯರ್ಥಿಗಳನ್ನು ಕರೆಸಿ ಪ್ರತ್ಯೇಕ ಸಭೆ ನಡೆಸಲಾಗುತ್ತದೆ. 

ಈ ಪೈಕಿ 10 ಸಾವಿರ ಮತಗಳಿಂದ ಸೋತಿರುವ 20 ಮಂದಿಗೆ ಮತ್ತೊಂದು ಸುತ್ತಿನ ಪ್ರತ್ಯೇಕ ಸಭೆ ಏರ್ಪಡಿಸಲಾಗಿದೆ ಎಂದು ತಿಳಿದುಬಂದಿದೆ.ಸೋತ ಅಭ್ಯರ್ಥಿಗಳಿಗೆ ಕ್ಷೇತ್ರಗಳ ಮಟ್ಟದಲ್ಲಿ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಿ ಶಕ್ತಿಯುತವಾಗಿ ಮಾಡಬೇಕು. ತನ್ಮೂಲಕ ಮುಂದಿನ ಚುನಾವಣೆ ವೇಳೆಗೆ ಅವರ ಬಗ್ಗೆ ಕ್ಷೇತ್ರದಲ್ಲಿ ಉತ್ತಮ ಅಭಿಪ್ರಾಯ ಮೂಡಿಸಬೇಕು. ಪ್ರಸ್ತುತ 136 ವಿಧಾನಸಭೆ ಸ್ಥಾನಗಳನ್ನು ಗೆದ್ದಿದ್ದರೂ ಈ ಶಾಸಕರಲ್ಲಿ ಕೆಲವರು ಆಡಳಿತ ವಿರೋಧಿ ಅಲೆಯಿಂದ ಮುಂದಿನ ಚುನಾವಣೆಯಲ್ಲಿ ಸೋಲಬಹುದು. ಅಂತಹ ಪರಿಸ್ಥಿತಿಯಲ್ಲಿ ಆಗ ಈಗ ಸೋತಿರುವ ವ್ಯಕ್ತಿಗಳನ್ನಾದರೂ ಗೆಲ್ಲಿಸಿಕೊಂಡು ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ದೂರದೃಷ್ಟಿಯ ಯೋಜನೆ ರೂಪಿಸಲಾಗಿದೆ. ಈ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ.

ಜತೆಗೆ ಲೋಕಸಭೆ ಚುನಾವಣೆಯಲ್ಲಿ ಶಾಸಕರು ಸ್ಪರ್ಧಿಸಿ ಗೆದ್ದಿರುವುದರಿಂದ ಸದ್ಯದಲ್ಲೇ ಮೂರು ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಹೀಗಾಗಿ ಬಸವರಾಜ ಬೊಮ್ಮಾಯಿ, ಎಚ್.ಡಿ. ಕುಮಾರಸ್ವಾಮಿ, ಇ.ತುಕಾರಾಂ ಅವರು ಲೋಕಸಭೆಗೆ ಆಯ್ಕೆಯಾಗಿದ್ದರಿಂದ ಖಾಲಿಯಾದ ಸ್ಥಳಗಳಿಗೆ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ತನ್ಮೂಲಕ ಮೂರೂ ಸ್ಥಾನಗಳನ್ನು ಗೆಲ್ಲಬೇಕು ಎಂಬ ಬಗ್ಗೆ ಕಾರ್ಯತಂತ್ರ ರೂಪಿಸಲಾಗುತ್ತದೆ.

ಕಾಂಗ್ರೆಸ್‌ ಕುಟುಂಬ:

ಕಾಂಗ್ರೆಸ್‌ನ ಯೋಜನೆಗಳನ್ನು ಮನೆ-ಮನೆಗೆ ತಲುಪಿಸಲು ‘ಕಾಂಗ್ರೆಸ್ ಕುಟುಂಬ’ ಕಾರ್ಯಕ್ರಮ ಮಾಡುವುದಾಗಿ ಈಗಾಗಲೇ ಘೋಷಿಸಲಾಗಿದೆ. ಇದರಂತೆ ಪ್ರತಿ ಬೂತ್‌ನಲ್ಲಿ 50 ಮಂದಿಯ ತಂಡವನ್ನು ರಚಿಸಲಾಗುವುದು. ಇವರ ಮೂಲಕ ಸರ್ಕಾರದ ಕಾರ್ಯಕ್ರಮಗಳನ್ನು ತಲುಪಿಸುವ ಜತೆಗೆ ಸರ್ಕಾರದ ಬಗ್ಗೆ ಉತ್ತಮ ಅಭಿಪ್ರಾಯ ಮೂಡುವಂತೆ ಮಾಡಲಾಗುವುದು. ಈ ಕುರಿತೂ ಸಹ ಪ್ರತ್ಯೇಕ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ.

ಪಕ್ಷಕ್ಕೆ ಸಲಹೆ ನೀಡಲು ಬುದ್ಧಿಜೀವಿಗಳ ಸಮಿತಿ

ಪಕ್ಷ ಹಾಗೂ ಸರ್ಕಾರಕ್ಕೆ ಅಗತ್ಯ ಸಂದರ್ಭಗಳಲ್ಲಿ ಸಲಹೆ-ಮಾರ್ಗದರ್ಶನ ನೀಡಲು ಬುದ್ಧಿಜೀವಿಗಳನ್ನು ಒಳಗೊಂಡ ಚಿಂತಕರ ಚಾವಡಿ ರಚಿಸಲು ಕೆಪಿಸಿಸಿ ನಿರ್ಧರಿಸಿದೆ. ಚಿಂತಕರ ಚಾವಡಿಯಲ್ಲಿ ಯಾರು ಇರಬೇಕು? ಅವರ ಕೆಲಸ ಕಾರ್ಯಗಳೇನು ಎಂಬುದು ಸೇರಿದಂತೆ ರೂಪುರೇಷೆ ಸಿದ್ಧಪಡಿಸಲು ಸಹ ಪ್ರತ್ಯೇಕ ಸಭೆ ನಡೆಯಲಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.ಮುಂಚೂಣಿ ಘಟಕಗಳ ಅಧ್ಯಕ್ಷರಿಗೆ ಸತ್ವಪರೀಕ್ಷೆ

ಕಾಂಗ್ರೆಸ್‌ನ ಮುಂಚೂಣಿ ಘಟಕಗಳ ಅಧ್ಯಕ್ಷರೊಂದಿಗೂ ಪ್ರತ್ಯೇಕ ಸಭೆ ಆಯೋಜಿಸಲಾಗಿದ್ದು, ಈ ಸಭೆಯಲ್ಲಿ ಮುಂಚೂಣಿ ಘಟಕಗಳ ಅಧ್ಯಕ್ಷರ ಸಾಧನೆ ಪರಾಮರ್ಶೆ ನಡೆಯಲಿದೆ. ಅಧಿಕಾರ ವಹಿಸಿಕೊಂಡ ನಂತರದಿಂದ ಇದುವರೆಗೂ ಕೈಗೊಂಡಿರುವ ಕಾರ್ಯಕ್ರಮಗಳು ಹಾಗೂ ಭವಿಷ್ಯದ ಯೋಜನೆಗಳ ಬಗ್ಗೆ ಅಧ್ಯಕ್ಷರು ವರದಿ ನೀಡಲಿದ್ದು, ಅದರ ಆಧಾರದ ಮೇಲೆ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.