ಕಲಬುರಗಿ ಬಿಜೆಪಿ ಕಚೇರಿ ಮುಂದೆ ಕಾಂಗ್ರೆಸ್‌ ಪ್ರಗತಿ ರಥ

| Published : Feb 13 2024, 12:49 AM IST

ಸಾರಾಂಶ

ಬಿಜೆಪಿ ನಡೆಸಿರುವ ಅಭಿಯಾನಕ್ಕೆ ಸೆಡ್ಡು ಹೊಡೆದಿರುವ ಕಲಬುರಗಿ ಜಿಲ್ಲಾ ಕಾಂಗ್ರೆಸ್‌ ಕಮಿಟಿ ಮಾಡಿರೋ ಕೆಲಸಗಳನ್ನು ನೋಡಬನ್ನಿರೆಂದು ವಿಶೇಷ ಸಾರಿಗೆ ವ್ಯವಸ್ಥೆ ಮಾಡುವ ಮೂಲಕ ಬಿಜೆಪಿ ಮುಖಂಡರಿಗೆ ಸವಾಲು ಹಾಕಿ ಗಮನ ಸೆಳೆಯಿತು.

ಕನ್ನಡಪ್ರಭ ವಾರ್ತೆ ಕಲಬುರಗಿ

ಸಾಧನೆ ಶೂನ್ಯ, ನವ ಮಾಸದಲ್ಲಿ ಅದೇನು ಮಾಡಿದ್ದೀರಿ ಎಂಬುದನ್ನ ಹೇಳಿರೆಂದು ಬಿಜೆಪಿ ನಡೆಸಿರುವ ಅಭಿಯಾನಕ್ಕೆ ಸೆಡ್ಡು ಹೊಡೆದಿರುವ ಕಲಬುರಗಿ ಜಿಲ್ಲಾ ಕಾಂಗ್ರೆಸ್‌ ಕಮಿಟಿ ಮಾಡಿರೋ ಕೆಲಸಗಳನ್ನು ನೋಡಬನ್ನಿರೆಂದು ವಿಶೇಷ ಸಾರಿಗೆ ವ್ಯವಸ್ಥೆ ಮಾಡುವ ಮೂಲಕ ಬಿಜೆಪಿ ಮುಖಂಡರಿಗೆ ಸವಾಲು ಹಾಕಿ ಗಮನ ಸೆಳೆಯಿತು.

ಜಿಲ್ಲಾ ಕಾಂಗ್ರೆಸ್‌ ಕಮಿಟಿಯವರು ಇದಕ್ಕಾಗಿಯೇ ಸಿದ್ಧಪಡಿಸಿದ್ದ ಕಲ್ಯಾಣ ಪ್ರಗತಿ ರಥ ಎಂಬ ಸಾರಿಗೆ ರಥವನ್ನೇ ಇಲ್ಲಿನ ಸಂತ್ರಾಸವಾಡಿ ದಾರಿಯಲ್ಲಿರುವ ಬಿಜೆಪಿ ಕಚೇರಿ ಮುಂದೆ ಬೆಳಗಿನ 4 ಗಂಟೆಗಳ ಕಾಲ ತಂದು ನಿಲ್ಲಿಸಿತ್ತು.

ಕಾಂಗ್ರೆಸ್‌ನ ಕೇವಲ 9 ತಿಂಗಳ ಆಡಳಿತದಲ್ಲಷ್ಟೇ ಅಲ್ಲದೆ, ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗೆಲ್ಲಾ ಕಲಬುರಗಿ ಸೇರಿದಂತೆ ಕಲ್ಯಾಣ ನಾಡಿಗೆ ಏನೆಲ್ಲಾ ಕೊಡುಗೆ ನೀಡಿದೆ ಎಂಬುದರ ಕುರಿತು ಮಾಹಿತಿ ವಾಸ್ತವದಲ್ಲಿ ಎಲ್ಲ ಬಿಜೆಪಿ ಮುಖಂಡರಿಗೆ ಪರಿಚಯಿಸುತ್ತೇವೆಂದು ಕಾಂಗ್ರೆಸ್‌ ಕಲ್ಯಾಣ ರಥ ನಿಲ್ಲಿಸಿತ್ತು. ರಥದ ಜೊತೆಗೇ ಮುಖಂಡರಾದ ಶಿವಾನಂದ ಪಾಟೀಲ್‌, ಸುಭಾಸ ರಾಠೋಡ, ಶಿವಾನಂದ ಹೊನಗುಂಟಿ ಸೇರಿದಂತೆ ಅನೇಕರಿದ್ದು ಬಿಜೆಪಿಯ ಜನ ವಿರಧಿ ಧೋರಣೆಗಳನ್ನು ಖಂಡಿಸಿ ಘೋಷಣೆ ಕೂಗಿದರು.

ಬಿಜೆಪಿಗರಿಗೆ ಕಣ್ಣಿಲ್ಲ, ಯಾಕೆಂದರೆ ಇವರಿಗೆ ಕಾಂಗ್ರೆಸ್‌ ಪಕ್ಷದ ಜನಪರ ಕೆಲಸಗಳೇ ಕಾಣುತ್ತಿಲ್ಲ. ಅದಕ್ಕೇ ಪ್ರಗತಿ ಯೋಜನೆಗಳನ್ನು ತೋರಿಸಲು ನಾವೇ ಸಾರಿಗೆ ವ್ಯವಸ್ಥೆ ಮಾಡಿದ್ದೇವೆ ಎಂದು ಘೋಷಿಸುತ್ತ ಬಿಜೆಪಿಯ ಅಭಿಯಾನಕ್ಕೆ ತಿರುಗೇಟು ನೀಡಿದರು.

ಕಲಬುರಗಿಯಲ್ಲಿ ಬಿಜೆಪಿಯ 5 ಶಾಸಕರಿದ್ದರೂ ಒಬ್ಬರಿಗೂ ಸಚಿವ ಸ್ಥಾನ ಸಿಗಲಿಲ್ಲ. 5 ವರ್ಷಗಳಲ್ಲಿ ಇಲ್ಲಿನ ರೇಲ್ವೆ ಡಿವಿಜನ್‌ ಕಚೇರಿಗೆ ಸಿಕ್ಕಿದ್ದು 1 ಸಾರು ಮಾತ್ರ, ಇದೇ ಬಿಜೆಪಿ ಸಾಧನೆ ಎಂದು ಲೇವಡಿ ಮಾಡಿದ ಕಾರ್ಯಕರ್ತರು ಕಲ್ಯಾಣ ರಥ ಹತ್ತುವಂತೆ ಬಹಿರಂಗವಾಗಿಯೇ ಬಿಜೆಪಿಗರಿಗೆ ಆಗ್ರಹಿಸಿದರು.

ಸ್ಥಳದಲ್ಲಿ ರಸ್ತೆ ಸಂಚಾರಕ್ಕೆ ತೊಂದರೆಯಾಗೋ ಲಕ್ಷಣಗಳನ್ನರಿತ ಪೊಲೀಸರು ತಕ್ಷಣ ಅಭಿಯಾನದಲ್ಲಿನ ರಥವನ್ನು ರಸ್ತೆ ಬದಿಗೆ ಹಚ್ಚುವಂತೆ ವ್ಯವಸ್ಥೆ ಮಾಡಿದ್ದಲ್ಲದೆ ಹೋರಾಟ ಮಾಡುವವರು ರಸ್ತೆಯ ಬದಿಯಲ್ಲಿದ್ದು ಗಮನ ಸೆಳೆಯಲು ಸೂಚಿಸಿದರು. ಬಹುಹೊತ್ತು ಕಲ್ಯಾಣ ರಥ ಬಿಜೆಪಿ ಕಚೇರಿ ಮುಂದೆಯೇ ನಿಂತಿದ್ದ ನೋಟಗಳು ಕಂಡವು.